ಪೊನ್ನಂಪೇಟೆಯಲ್ಲಿ ‘ಅಖಂಡ ಭಾರತ ಸಂಕಲ್ಪ ದಿನ ಆಚರಣೆ
admincoorgdaily

ಪೊನ್ನಂಪೇಟೆ, ಆ.10: ಹಿಂದೂ ಜಾಗರಣ ವೇದಿಕೆ, ಪೊನ್ನಂಪೇಟೆ ತಾಲೂಕು ಘಟಕದ ವತಿಯಿಂದ ‘ಅಖಂಡ ಭಾರತ ಸಂಕಲ್ಪ ದಿನ’ವನ್ನು ಸೋಮವಾರ ಆಚರಿಸಲಾಯಿತು.
ಈ ಅಂಗವಾಗಿ ಬೆಳಿಗ್ಗೆ 10.30ಕ್ಕೆ ಗೋಣಿಕೊಪ್ಪಲುವಿನ ಆರ್‌ಎಂಸಿ ಮುಂಭಾಗದಿಂದ ನೂರಾರು ಹಿಂದೂ ಕಾರ್ಯಕರ್ತರು ಭಾರತಮಾತೆಯ ಭಾವಚಿತ್ರ ಹಾಗೂ ಕೇಸರಿ ಧ್ವಜಗಳನ್ನು ಹಿಡಿದು ಬೃಹತ್ ವಾಹನ ಜಾಥಾ ನಡೆಸಿದರು. ಜಾಥಾವು ಗೋಣಿಕೊಪ್ಪಲು ಮುಖ್ಯ ರಸ್ತೆಯಲ್ಲಿ ಸಾಗಿ, ಬೈಪಾಸ್ ರಸ್ತೆಯ ಮೂಲಕ ಪೊನ್ನಂಪೇಟೆ ಕಡೆಗೆ ತೆರಳಿ ಕೊಡವ ಸಮಾಜದಲ್ಲಿ ಸಂಪನ್ನಗೊಂಡಿತು.
ನಂತರ ಮಧ್ಯಾಹ್ನ 12.30ಕ್ಕೆ ಕೊಡವ ಸಮಾಜದಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಗಣ್ಯರು ಭಾರತಾಂಬೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.
ಕಾರ್ಯಕ್ರಮದ ಮುಖ್ಯ ದಿಕ್ಸೂಚಿ ಭಾಷಣಕಾರರಾಗಿ ಭಾಗವಹಿಸಿದ್ದ ಸುಳ್ಯದ ಸಾಮಾಜಿಕ ಕಾರ್ಯಕರ್ತ ರಾಜೇಶ್ ಮೆನಾಲ ಮಾತನಾಡಿ, ಪ್ರಾಚೀನ ನಾಗರಿಕತೆಗಳಾದ ಗ್ರೀಕ್ ಮತ್ತು ಮಾಯನ್ ನಾಗರಿಕತೆಗಳು ನಿರಂತರ ದಾಳಿಗಳ ಪರಿಣಾಮವಾಗಿ ತಮ್ಮ ಮೂಲ ಸ್ವರೂಪವನ್ನು ಕಳೆದುಕೊಂಡಿವೆ. ಆದರೆ ಭಾರತವು ಹಲವು ದಾಳಿಗಳನ್ನು ಎದುರಿಸಿಯೂ ತನ್ನ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿಕೊಂಡು ಬಂದಿದೆ. ಇದಕ್ಕೆ ದೇಶದ ಸಂಸ್ಕೃತಿ ಹಾಗೂ ಮಣ್ಣಿನೊಂದಿಗೆ ನಿರಂತರವಾಗಿ ಬೆಸೆದುಕೊಂಡಿರುವ ಜನರ ಸಂಕಲ್ಪವೇ ಪ್ರಮುಖ ಕಾರಣವಾಗಿದೆ ಎಂದು ಹೇಳಿದರು.
1947ರಲ್ಲಿ ಸ್ವಾತಂತ್ರ್ಯ ದೊರೆತ ಸಂತೋಷದೊಂದಿಗೆ ದೇಶ ವಿಭಜನೆಯ ನೋವೂ ಭಾರತೀಯರ ಮನಸ್ಸಿನಲ್ಲಿ ಉಳಿದಿದೆ. ವಿಭಜನೆಯಿಂದ ಭಾಗವಾಗಿರುವ ಭಾರತವನ್ನು ಮತ್ತೆ ಒಗ್ಗೂಡಿಸುವ ಸಂಕಲ್ಪದೊಂದಿಗೆ ಪ್ರತಿವರ್ಷ ‘ಅಖಂಡ ಭಾರತ ಸಂಕಲ್ಪ ದಿನ’ವನ್ನು ಆಚರಿಸಲಾಗುತ್ತಿದ್ದು, ಇದಕ್ಕೆ ವಿಶೇಷ ಮಹತ್ವವಿದೆ ಎಂದು ಅವರು ಹೇಳಿದರು.
ಸುಮಾರು 2500 ವರ್ಷಗಳಿಂದ ಭಾರತ ಹಲವು ದಾಳಿಗಳನ್ನು ಎದುರಿಸಿದ್ದರೂ, ತನ್ನ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿಕೊಂಡು ಮುನ್ನಡೆದಿದೆ. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಚಂದ್ರಶೇಖರ್ ಆಜಾದ್, ಭಗತ್ ಸಿಂಗ್, ಸುಖದೇವ್, ರಾಜ್‌ಗುರು, ಮದನ್ ಲಾಲ್ ಧಿಂಗ್ರಾ ಸೇರಿದಂತೆ ಕ್ರಾಂತಿಕಾರಿಗಳ ತ್ಯಾಗವನ್ನು ಸ್ಮರಿಸಿದ ಅವರು, ದೇಶದ ಮಣ್ಣಿನೊಂದಿಗೆ ಭಾರತೀಯರಿಗೆ ಇರುವ ಭಾವನಾತ್ಮಕ ಸಂಬಂಧ ವಿಶಿಷ್ಟವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಶ್ವ ಹಿಂದೂ ಪರಿಷತ್ ಮಾಜಿ ಅಧ್ಯಕ್ಷ ಚಿರಿಯಪಂಡ ರಾಜಾ ನಂಜಪ್ಪ ಮಾತನಾಡಿ, ಹಿಂದೂ ಸಮಾಜ ಒಗ್ಗಟ್ಟಾಗಿ ನಿಲ್ಲುವ ಅಗತ್ಯವಿದೆ. ದೇಶ ವಿಭಜನೆ ಹಾಗೂ ಅದರ ಪರಿಣಾಮಗಳ ಕುರಿತು ಅರಿವು ಮೂಡಿಸುವುದರೊಂದಿಗೆ ಹಿಂದೂ ಧರ್ಮ ಮತ್ತು ಸಂಸ್ಕೃತಿಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಡೆಯಬೇಕಿದೆ ಎಂದು ಹೇಳಿದರು.
ಚಂದ್ರ ಉಡತ್ ಸ್ವಾಗತಿಸಿದರು. ಉಳುವಂಗಡ ಲೋಹಿತ್ ಭೀಮಯ್ಯ ದೇಶಭಕ್ತಿ ಗೀತೆ ಹಾಡಿದರು. ಕಾರ್ಯಕ್ರಮದ ಕೊನೆಯಲ್ಲಿ ಉಳುವಂಗಡ ಮಹಿತ್ ಸೋಮಯ್ಯ ಅವರು ‘ವಂದೇ ಮಾತರಂ’ ಗೀತೆ ಹಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸಂಘ ಚಾಲಕ ಚೆಕ್ಕೇರ ಮನು ಕಾವೇರಪ್ಪ, ತಾಲೂಕು ಸಂಯೋಜಕ ಸುಳ್ಳಿಮಾಡ ಸಂಪತ್, ತಾಲೂಕು ಸಹ ಸಂಯೋಜಕ ಮುಲ್ಲೇಂಗಡ ಸುಖೇಶ್, ಪುತ್ತಾಮನೆ ಅನಿಲ್ ಪ್ರಸಾದ್, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಶಾಂತೆಯಂಡ ತಿಮ್ಮಯ್ಯ, ಪುತ್ತಾಮನೆ ಯತೀಶ್ ಸೇರಿದಂತೆ ಹಿಂದೂ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.