ಮಾಜಿ ಪ್ರಿಯಕರನಿಂದ ಖಾಸಗಿ ವಿಡಿಯೋ ಸೋರಿಕೆ ಆರೋಪ: ನವವಿವಾಹಿತೆಯ ಸಂಸಾರ ಚೂರು!

Dec 16, 2025 - 12:21
 0  2k
ಮಾಜಿ ಪ್ರಿಯಕರನಿಂದ ಖಾಸಗಿ ವಿಡಿಯೋ ಸೋರಿಕೆ ಆರೋಪ: ನವವಿವಾಹಿತೆಯ ಸಂಸಾರ ಚೂರು!

ಚಿಕ್ಕಬಳ್ಳಾಪುರ, ಡಿ.16: ಮಾಜಿ ಪ್ರಿಯಕರನಿಂದ ಖಾಸಗಿ ವಿಡಿಯೋಗಳು ಮತ್ತು ಚಿತ್ರಗಳು ಸೋರಿಕೆಯಾಗಿವೆ ಎಂಬ ಆರೋಪದ ಹಿನ್ನೆಲೆಯಲ್ಲಿ ನವವಿವಾಹಿತೆಯೊಬ್ಬಳ ಸಂಸಾರ ಮದುವೆಯಾದ ಕೆಲವೇ ದಿನಗಳಲ್ಲಿ ಚೂರಾಗಿರುವ ಘಟನೆ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ನಡೆದಿದೆ. ನ್ಯಾಯಕ್ಕಾಗಿ ಆಗ್ರಹಿಸಿ ನೊಂದ ಯುವತಿ ಮಾಜಿ ಪ್ರಿಯಕರನ ಮನೆ ಎದುರು ಧರಣಿ ನಡೆಸಿದ್ದಾರೆ.

ಶಿಡ್ಲಘಟ್ಟ ತಾಲ್ಲೂಕಿನ ಪಲಿಚರ್ಚು ಗ್ರಾಮದ ಅಂಬರೀಶ ಎಂಬಾತನ ಮನೆ ಮುಂದೆ ಯುವತಿ ಪ್ರತಿಭಟನೆ ನಡೆಸಿದ್ದಾರೆ. ಸಂತ್ರಸ್ತೆಯ ದೂರಿನಂತೆ, ನಾಲ್ಕು ವರ್ಷಗಳ ಕಾಲ ಅಂಬರೀಶನೊಂದಿಗೆ ಆಕೆ ಪ್ರೀತಿಯ ಸಂಬಂಧ ಹೊಂದಿದ್ದಳು. ಮದುವೆಯ ಹಂತಕ್ಕೆ ಬಂದಾಗ ಜಾತಿ ಕಾರಣ ಮುಂದಿಟ್ಟು ಸಂಬಂಧ ಮುರಿಯಲು ಅಂಬರೀಶ ಒತ್ತಾಯಿಸಿದ್ದಾನೆ. ನಂತರ ಯುವತಿ ಕುಟುಂಬದ ನಿರ್ಧಾರಕ್ಕೆ ಅನುಗುಣವಾಗಿ ಮತ್ತೊಬ್ಬ ಯುವಕನನ್ನು ಮದುವೆಯಾಗಿದ್ದರು.

ಮದುವೆಯಾದ ಬಳಿಕವೂ ಸಮಸ್ಯೆಗಳು ಮುಂದುವರಿದಿದ್ದು, ಅಂಬರೀಶ ತನ್ನ ಬಳಿ ಇದ್ದ ಯುವತಿಯ ಖಾಸಗಿ ವಿಡಿಯೋಗಳು ಹಾಗೂ ಚಿತ್ರಗಳನ್ನು ಸುನಿಲ್ ಎಂಬ ವ್ಯಕ್ತಿಗೆ ಕಳುಹಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಸುನಿಲ್ ಅವುಗಳನ್ನು ಯುವತಿಯ ಪತಿಗೆ ರವಾನಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದರಿಂದಾಗಿ ಪತಿ ಆಕೆಯೊಂದಿಗೆ ಸಹವಾಸ ನಿರಾಕರಿಸಿ, ಮದುವೆಯಾದ 20 ದಿನಗಳಲ್ಲೇ ತವರು ಮನೆಗೆ ಕಳುಹಿಸಿದ್ದಾನೆ ಎಂದು ತಿಳಿದುಬಂದಿದೆ.

ಸಂಸಾರ ನಾಶವಾದ ಹಿನ್ನೆಲೆಯಲ್ಲಿ ನ್ಯಾಯಕ್ಕೆ ಆಗ್ರಹಿಸಿ ಯುವತಿ ಮಾಜಿ ಪ್ರಿಯಕರನ ಮನೆ ಎದುರು ಧರಣಿ ನಡೆಸಿದ್ದಾಳೆ. ಘಟನೆ ಬಳಿಕ ಅಂಬರೀಶ ಮನೆಗೆ ಬೀಗ ಹಾಕಿ ನಾಪತ್ತೆಯಾಗಿದ್ದು, ಈ ಸಂಬಂಧ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 1
Funny Funny 0
Angry Angry 0
Sad Sad 0
Wow Wow 0