Kodagu

ಅಮ್ಮತ್ತಿ:ಮಹಿಳೆಯ ಕೊಲೆ ಯತ್ನ ಪ್ರಕರಣ, ಅಪರಾಧಿಗೆ 15 ವರ್ಷ ಜೈಲು ಶಿಕ್ಷೆ ಪ್ರಕಟ

admincoorgdaily

ಅಮ್ಮತ್ತಿ:ಮಹಿಳೆಯ ಕೊಲೆ ಯತ್ನ  ಪ್ರಕರಣ, ಅಪರಾಧಿಗೆ 15 ವರ್ಷ ಜೈಲು ಶಿಕ್ಷೆ ಪ್ರಕಟ

ವಿರಾಜಪೇಟೆ:ಮಾತಿಗೆ ಮಾತು ಬೆಳೆದು ಜಗಳವಾಡಿ ಮಹಿಳೆಯ ತಲೆಗೆ ಮಂಡೆ ಕತ್ತಿಯಿಂದ ಹಲ್ಲೆ ಮಾಡಿದ್ದ ಪ್ರಕರಣದಲ್ಲಿ ಆರೋಪಿಗೆ ವಿರಾಜಪೇಟೆ 2ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 15 ವರ್ಷ ಕಠಿಣ ಕಾರಾಗೃಹ ಮತ್ತು 15 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. 25-09-2023 ರಂದು ಬೆಳಗಿನ ಜಾವ 6.30 ಗಂಟೆಗೆ ವಿರಾಜಪೇಟೆ ತಾಲ್ಲೂಕಿನ ಅಮ್ಮತ್ತಿ ನಗರದ ಎ.ಪಿ. ಅಪ್ಪಣ್ಣರವರ ಬಾಡಿಗೆ ಮನೆಯಲ್ಲಿಈ ಘಟನೆ ನಡೆದಿತ್ತು.

 ಪಿರ್ಯಾದುದಾರರಾದ ಐಶ್ವರ್ಯ ಹೆಚ್.ಜಿ ಅವರ ತಾಯಿ ರಾಣಿ ಹೆಚ್.ಜಿ,ಅವರ ಮನೆಗೆ ಆರೋಪಿ ತಿರುಮಲೇಶ್ ಸಿ.ಪಿ, (40 ವರ್ಷ) ಬಂದಿದ್ದ. ರಾಣಿ ಮತ್ತು ತಿರುಮಲೇಶ್ ಮನೆಯಲ್ಲಿ ಕುಳಿತು ಮಾತನಾಡುತ್ತಿದ್ದಾಗ ಯಾವುದೋ ವಿಚಾರದಲ್ಲಿ ಜಗಳ ಶುರುವಾಗಿದೆ. ಇದನ್ನು ನೋಡಿದ ಕೋಣೆಯಲ್ಲಿ ಮಲಗಿದ್ದ ರಾಣಿ ಅವರ ಮಕ್ಕಳಾದ ಐಶ್ವರ್ಯ ಮತ್ತು ಸೌಂದರ್ಯ ಎದ್ದು ಬಂದು "ಇಬ್ಬರು ಸುಮ್ಮನಿರಿ" ಎಂದು ಹೇಳಿದ್ದಾರೆ. ಆದರೂ ಬೆಳಿಗ್ಗೆ 6-30 ಗಂಟೆಗೆ ಆರೋಪಿ ಸಿಟ್ಟಿನಿಂದ ಅಡುಗೆ ಮನೆಗೆ ಹೋಗಿ ಮಂಡೆ ಕತ್ತಿ ತೆಗೆದುಕೊಂಡು ಬಂದು "ಈ ದಿನ ನಿನ್ನನ್ನು ಕೊಲೆ ಮಾಡಿ ಮುಗಿಸುತ್ತೇನೆ, ನನ್ನ ಮಾತು ಕೇಳದ ನಿನ್ನಂತವಳು ಇರುವುದು ಬೇಡ" ಎಂದು ಹೇಳಿ ರಾಣಿ ಅವರ ತಲೆಯ ನಡುಭಾಗಕ್ಕೆ ಕಡಿದಿದ್ದಾನೆ.

ಪರಿಣಾಮ ರಾಣಿ ಅವರಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದವು. ಈ ಸಂಬಂಧ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ Cr. No. 129/2023, ಕಲಂ 307, 326 ಭಾ.ದಂ.ಸಂಅಡಿ ಪ್ರಕರಣ ದಾಖಲಾಗಿತ್ತು. ತನಿಖಾಧಿಕಾರಿ PSI ಶ್ರೀ ಮಂಜುನಾಥ್ ಸಿ.ಸಿ ಮತ್ತು ಅವರ ತಂಡ ತನಿಖೆ ಪೂರ್ಣಗೊಳಿಸಿ ಆರೋಪಿತನ ವಿರುದ್ಧ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ಸದರಿ ಪ್ರಕರಣದ ವಿಚಾರಣೆಯನ್ನು 2ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀ. ಎಸ್. ನಟರಾಜ್ ರವರು ನಡೆಸಿದರು. ಅಭಿಯೋಗದ ಪರ ಹಾಜರುಪಡಿಸಲಾದ ಸಾಕ್ಷಿ ಪುರಾವೆಗಳನ್ನು ಅವಲೋಕಿಸಿದ ನಂತರ ಆರೋಪಿ ತಿರುಮಲೇಶ್ ಸಿ.ಪಿ ಅವರ ಮೇಲಿನ ಅಪಾದನೆ ರುಜುವಾತಾಗಿದೆ ಎಂದು ತೀರ್ಮಾನಿಸಿದರು.

 ದಿನಾಂಕ 04-08-2026 ರಂದು ನೀಡಿದ ತೀರ್ಪಿನಲ್ಲಿ,ಭಾ.ದಂ.ಸಂ ಕಲಂ 307 ರ ಅಡಿ‌ 10 ವರ್ಷಗಳ ಕಠಿಣ ಕಾರಾಗೃಹ + 10,000/- ದಂಡ. ದಂಡ ಕಟ್ಟಲು ತಪ್ಪಿದರೆ 06 ತಿಂಗಳ ಸಾದಾ ಸಜೆ, ಭಾ.ದಂ.ಸಂ ಕಲಂ 326 ರ ಅಡಿ 05 ವರ್ಷಗಳ ಕಠಿಣ ಕಾರಾಗೃಹ + 5,000/- ದಂಡ. ದಂಡ ಕಟ್ಟಲು ತಪ್ಪಿದರೆ 03 ತಿಂಗಳ ಸಾದಾ ಸಜೆ, ಗಾಯಾಳುವಿಗೆ ಕಾನೂನು ಸೇವಾ ಪ್ರಾಧಿಕಾರದಿಂದ ಪರಿಹಾರ ನೀಡುವಂತೆ ಆದೇಶ ನೀಡಲಾಗಿದೆ.

ಆರೋಪಿಯಾದ ತಿರುಮಲೇಶ್ ಸಿ.ಪಿ ವಿರುದ್ಧ ಈಗಾಗಲೇ ಸೆಷನ್ಸ್ ಕೇಸ್ ನಂ. 5009/2021 ರಲ್ಲಿ 02-06-2026 ರಂದು ತೀರ್ಪು ನೀಡಲಾಗಿತ್ತು. ಅದರಲ್ಲಿ ಕಲಂ 307 ರ ಅಡಿ 3 ವರ್ಷಗಳ ಕಠಿಣ ಕಾರಾಗೃಹ + 50,000/- ದಂಡ ವಿಧಿಸಲಾಗಿತ್ತು. ದಂಡದ ಹಣದಲ್ಲಿ 45,000/- ಗಾಯಾಳುವಿಗೆ ಪರಿಹಾರ ನೀಡಲು ಆದೇಶಿಸಲಾಗಿತ್ತು. ಆ ಪ್ರಕರಣದ ಶಿಕ್ಷೆಯ ಅವಧಿ ಮುಗಿದ ನಂತರವೇ ಈಗಿನ ಪ್ರಕರಣದ 15 ವರ್ಷಗಳ ಶಿಕ್ಷೆ ಜಾರಿಗೆ ಬರಲಿದೆ. ಒಟ್ಟಾರೆಯಾಗಿ ಆರೋಪಿಗೆ 18 ವರ್ಷ ಕಠಿಣ ಕಾರಾಗೃಹ + 65,000 ರೂ. ದಂಡ ಆಗಲಿದೆ. ಅಭಿಯೋಗದ ಪರವಾಗಿ ಸರ್ಕಾರಿ ಅಭಿಯೋಜಕ ಶ್ರೀಯುತ. ಯಾಸೀನ್ ಅಹ್ಮದ್, ವಿರಾಜಪೇಟೆ‌ರವರು ವಾದ ಮಂಡಿಸಿದ್ದರು.