ಕಂಡಿಮಕ್ಕಿಯಲ್ಲಿ ವಾರ್ಷಿಕ ತೆರೆ ಮಹೋತ್ಸವ
ರಜಿತ ಕಾರ್ಯಪ್ಪ
ವಿರಾಜಪೇಟೆ: ಕೊಡಗಿನ ವಿರಾಜಪೇಟೆ ಸಮೀಪದ ಬಾಳುಗೋಡಿನಲ್ಲಿರುವ ಶ್ರೀ ಕಂಡಿಮಕ್ಕಿ ತ್ರಿಮೂರ್ತಿ ದೇವಸ್ಥಾನ ಒಂದು ಪ್ರಸಿದ್ಧ ಧಾರ್ಮಿಕ ಕೇಂದ್ರವಾಗಿದ್ದು ಮಾ.27 ರಿಂದ 29 ರವರೆಗೆ ವಾರ್ಷಿಕ ತೆರೆ ಮಹೋತ್ಸವ ನಡೆಯಲಿದೆ.
ಈ ದೇವಾಲಯವು ಹಿಂದೂ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಮತ್ತು ಶಿವನ ರೂಪದಲ್ಲಿ ಮೂರ್ತಿ ಸ್ವಾಮಿಯನ್ನು ಆರಾಧಿಸುವ ಪುಣ್ಯಕ್ಷೇತ್ರವಾಗಿದ್ದು, ನಂಬಿ ಬಂದವರ ಕಷ್ಟಗಳನ್ನು ದೂರಮಾಡುವ ದೈವವೆಂದು ಭಕ್ತರ ಅಪಾರ ನಂಬಿಕೆಯಿದೆ.
ಇಲ್ಲಿನ ಪ್ರಧಾನ ದೇವತೆ ಶ್ರೀ ಕಂಡಿಮಕ್ಕಿ ತ್ರಿಮೂರ್ತಿ ಸ್ವಾಮಿ. ಇಲ್ಲಿ ನಡೆಯುವ ಕಂಡಿಮಕ್ಕಿ ತೆರೆ ಮಹೋತ್ಸವ (ಉತ್ಸವ) ಬಹಳ ವಿಶೇಷವಾಗಿದೆ.
ಹಚ್ಚ ಹಸಿರಿನ ಕಾನನದೊಳಗೆ, ಪ್ರಕೃತಿಯ ಮಡಿಲಲ್ಲಿ, ಶಾಂತಿಯುತ ವಾತಾವರಣದಲ್ಲಿ ನೆಲೆಯಾಗಿರುವ ಕಂಡಿಮಕ್ಕಿ ದೇವಸ್ಥಾನವು ಭಕ್ತರಿಗೆ ಅತ್ಯಂತ ಪವಿತ್ರವಾದ ಸ್ಥಳವಾಗಿದೆ.
ನಂಬಿದವರಿಗೆ ಇಂಬು ಕೊಡುವ ತ್ರಿಮೂರ್ತಿ;
ನಂಬಿದವರ ಕೈಬಿಡದ, ಅತ್ಯಂತ ಕಾರಣೀಕವಾದ ದೈವ ಇದಾಗಿದ್ದು, ಇಲ್ಲಿ ಸತ್ಯ, ನ್ಯಾಯ, ನಿಷ್ಠೆಗೆ ಹೆಸರುವಾಸಿಯಾಗಿದೆ. ಉತ್ಸವದ ಸಂದರ್ಭದಲ್ಲಿ ದೇವಾಲಯದ ವ್ಯಾಪ್ತಿಗೆ ಸೇರಿದ ಭಾಗಗಳಲ್ಲಿ ಮಳೆಯಾಗುತ್ತದೆ ಎನ್ನುವ ಪ್ರತಿತೀಯೂ ಇದೆ. ಅಂತೆಯೇ ಹಬ್ಬಕ್ಕೆ ಕಟ್ಟುಬಿದ್ದ ಸಂದರ್ಭದಲ್ಲಿ ಕಟ್ಟನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ ಇರುತ್ತದೆ. ಅದನ್ನು ಗ್ರಾಮದವರು ಪಾಲಿಸಬೇಕಿದೆ. ಕೆಲವೊಮ್ಮೆ ದೌತ್ವದ ಪರೀಕ್ಷೆಯೆಂತಲೋ ಅಥವಾ ಇತ್ತಿಚಿಗಿನ ಸಮಯ ಸಂದರ್ಭದ ಒತ್ತಡವೆಂತಲೋ, ಅಪನಂಬಿಕೆಡಯಿAದಲೋ ಕಟ್ಟನ್ನು ಪಾಲಿಸದೆ ಶ್ರೀ ದೇವರಿಗೆ ಅಪಮಾನವಾಗುವ ರೀತಿಯಲ್ಲಿ ನಡೆದ ಸಂದರ್ಭ ದೇವರ ಕೆಂಗಟ್ಣಿಗೆ ಗುರಿಯಾದ ಪ್ರಸಂಗಗಳು ನಡೆದಿದೆ.
ಆರಾದ್ಯ ದೈವ;
ಕಂಡಿಮಕ್ಕಿ ತ್ರೀಮೂರ್ತಿ ಎಂದರೆ ಎಲ್ಲ ಜಾತಿ ಧರ್ಮ, ಜನಾಂಗದವರಿಗೂ ಒಂದು ರೀತಿಯಲ್ಲಿ ಭಯ ಹಾಗೂ ದೇವರ ಇರುವಿಕೆಯ ಬಗ್ಗೆ ಭಕ್ತಿ ಮೂಡುವಂತ ಸ್ಥಳ ಇದಾಗಿದೆ. ಯಾವುದೇ ಗುಡಿ, ಗೋಪುರಗಳಿರದ, ಕೇವಲ ಮರದ ಕೆಳಗೆ ನೆಲೆಯಾಗಿರುವ ಶ್ರೀ ಕಂಡಿಮಕ್ಕಿ ತ್ರೀಮೂರ್ತಿ ದೇವರ ದರ್ಶನಕ್ಕೆ ಮೂರು ದಿನಗಳ ಕಾಲವೂ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಸೇರುತ್ತಾರೆ. ತಮ್ಮ ಇಷ್ಟಾರ್ಥ ಸಿದ್ದಿಗೆ ಪ್ರಾರ್ಥಿಸುತ್ತಾರೆ. ಹರಕೆ ರೂಪದಲ್ಲಿ ಧನ ಧಾನ್ಯಗಳನ್ನು ನೀಡುತ್ತಾರೆ. ಅನ್ನದಾನ ಸೇರಿದಂತೆ ದೇವರ ಕಾರ್ಯಗಳಿಗೆ ಭಕ್ತರೇ ಧಾನದ ರೂಪದಲ್ಲಿ ಅಗತ್ಯ ವಸ್ತುಗಳನ್ನು ನೀಡುವುದರೊಂದಿಗೆ ದೇವರ ಸೇವೆ ಮಾಡುತ್ತಾರೆ. ಗ್ರಾಮದಲ್ಲಿನ ಹಲವರು ಸ್ವಯಂಪ್ರೇರಿತರಾಗಿ ಕೆಲಸ ನಿರ್ವಹಿಸುತ್ತಾರೆ.
ಗ್ರಾಮಗಳು;
ಸುತ್ತಮುತ್ತಲ ಏಳು ಗ್ರಾಮಗಳು ಈ ದೇವಾಲಯದ ವ್ಯಾಪ್ತಿಗೆ ಒಳಪಡುತ್ತದೆ. ಪಡೆಯಂಡ, ಕಬ್ಬಚ್ಚಿರ, ಕೊಪ್ಪಿರ, ಕಂಬಂಡ, ಕುಟುಂಬಗಳು ಮುಖ್ಯ ವಾಗಿ ದೇವರ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾರೆ. ಜೊತೆಗೆ ಸ್ಥಳೀಯರು, ದೇವಾಲಯದ ತಕ್ಕಾಮೆಗೆ ಒಳಪಡುವ ಕುಟುಂಬಗಳು ಸೇರಿ ಹಬ್ಬವನ್ನು ಯಶಸ್ವಿಯಾಗಿ ಆಚರಿಸುತ್ತಾರೆ. ಬಾಳುಗೋಡು, ಪೆರುಂಬಾಡಿ, ನಾಂಗಾಲ, ಕಿರುಮಕ್ಕಿ, ಆರ್ಜಿ, ಬೇಟೋಳಿ, ರುದ್ರಗುಪ್ಪೆ, ಬಿಟ್ಟಂಗಾಲ, ಸುತ್ತಮುತ್ತಲಿನ ಗ್ರಾಮಸ್ಥರು ದೆವರ ಸೇವೆಯನ್ನು ಮಾಡುತ್ತಾರೆ.
ವಾರ್ಷಿಕ ಉತ್ಸವ;
ಶ್ರೀ ಕಂಡಿಮಕ್ಕಿ ತ್ರಿಮೂರ್ತಿ ದೇವರ ವಾರ್ಷಿಕ ತೆರೆಮಹೋತ್ಸವ ಮಾರ್ಚ್ 28, 29,30 ರಂದು ಮೂರು ದಿನಗಳ ಕಾಲ ಅತ್ಯಂತ ವಿಜೃಂಬಣೆಯಿಂದ ನಡೆಯಲಿದೆ.
ಈಗಾಗಲೇ ದೇವರ ಹಬ್ಬದ ಪ್ರಯುಕ್ತ ತಾ.20 ರಂದು ದೇವರ ಹಬ್ಬದ ಕಟ್ಟು ಬಿದ್ದಿದೆ. ಬಳಿಕ ಹಬ್ಬದ ಕೆಲಸ ಕಾರ್ಯಳಿಗೆ ಚಾಲನೆ ನೀಡಲಾಗಿದೆ. ಮಾ.26 ರಂದು ರಾತ್ರಿ 7.30 ಗಂಟೆಗೆ ಭಂಡಾರ ಹೊರಗೆ ಹಾಕುವ ಕಾರ್ಯ ನಡೆಯಲಿದೆ. 27 ರಂದು ರಾತ್ರಿ 9 ಗಂಟೆಗೆ ಗುರುಮನೆ(ಹಳೆಮನೆ)ಯಿಂದ ಭಂಡಾರ ಹೊರಟು ದೇವರ ಸ್ಥಾನ ಹತ್ತುವುದು,
28ರಂದು ಶನಿವಾರ ಬೆಳಿಗ್ಗೆ ಸುರ್ಯೋದಯಕ್ಕೆ ಮುನ್ನ ದೇವಸ್ಥಾನದ ತಕ್ಕ ಮುಖ್ಯಸ್ಥ ಕುಟುಂಬದವರಾದ ಪಡೆಯಂಡ ಕುಟುಂಬಸ್ಥರು ದೇವರ ಕಾರ್ಯ ನಡೆಸುವ 5 ಕುಡಿ ಕುಟುಂಬದವರಿಗೆ ಚಂಡೆಯನ್ನು ತೆಗೆದು ಹಬ್ಬ ನಡೆಸಿಕೊಡುವಂತೆ ಚಂಡೆ ಹಾಗೂ ದೇವರ ಆಯುಧಗಳನ್ನು ನೀಡುತ್ತಾರೆ.
ಬಳಿಕ ಬೆಳಿಗ್ಗೆ 8 ಗಂಟೆಯಿಂದ ತೆರೆ ಮಹೋತ್ಸವ ಪ್ರಾರಂಭವಾಗಲಿದ್ದು, ಮೊದಲಿಗೆ ದೇವಾ ಬೊಳ್ಳಾಟ ತೆರೆ, ನಂತರ 10 ಗಂಟೆಗೆ ಮೂರ್ತಿ ತೆರೆ, 2 ಗಂಟೆಗೆ ಕೋಲಾಟ್ ನಾಟ್ ಬೀರ ತೆರೆ, 4 ಗಂಟೆಗೆ ಅಲ್ಲಾರಂಡ ಪೂವಕ್ಕ ತೆರೆ, 5 ಗಂಟೆಗೆ ಮುತ್ತಪ್ಪ ತೆರೆ, 8 ಗಂಟೆಗೆ ಅಯ್ಯಪ್ಪ ತೆರೆ ನಡೆಯಲಿದೆ.
29 ರಂದು ಭಾನುವಾರ ಬೆಳಿಗ್ಗೆ 7 ಗಂಟೆಗೆ ಬೀರಾಳಿ(ನೀಲಿಕಾಳಿ) ದೇವಿಯ ತೆರೆ, 8 ಗಂಟೆಗೆ ಕಾಪಾಳತಿ ತೆರೆ, 10 ಗಂಟೆಗೆ ಗುಳಿಗ ತೆರೆ, 11 ಗಂಟೆಗೆ ಚಿಂಗಜ್ಜ ತೆರೆ, 12 ಗಂಟೆಗೆ ನುಚ್ಚಟ್ಟೆ ತೆರೆ, 1 ಗಂಟೆಗೆ ಕಾಲಬೈರವ ತೆರೆ, ಹಾಗೂ ಮೂರ್ತಿ ದೇವರ ದರ್ಶನ ನಡೆಯಲಿದೆ. 4 ಗಂಟೆಗೆ ಪೊಟ್ಟ ತೆರೆ, ರಾತ್ರಿ 7 ಗಂಟೆಗೆ 4 ಕಾರಣ ತೆರೆ, 9 ಗಂಟೆಗೆ ಅಣ್ಣಿರ ಬೀರ ತೆರೆ, ರಾತ್ರಿ 10.30 ಗಂಟೆಗೆ ವಿಷ್ಣುಮೂರ್ತಿ ತೆರೆ, 12 ಗಂಟೆಗೆ ಅಮ್ಮೇರಾ ಮೂರ್ತಿ ತೆರೆ ನಡೆಯಲಿದೆ.30 ರಂದು ಸೋಮವಾರ ಬೆಳಿಗ್ಗೆ 8 ಗಂಟೆಗೆ ಬೊಳ್ತು ಅಜ್ಜಪ್ಪ ತೆರೆ, 11 ಗಂಟೆಗೆ ಕೊರ್ತಿ ದೇವಿ ತೆರೆ, ಮದ್ಯಾಹ್ನ 2 ಗಂಟೆಗೆ ಚಾಮುಂಡಿ ತೆರೆ ನಡೆಯಲಿದೆ. ದೈವ ಸ್ಥಾನದಲ್ಲಿ ಮಧು ಅವರು ನಿತ್ಯ ಪೂಜಾ ವಿಧಿ ವಿಧಾನಗಳನ್ನು ನಡೆಸಿಕೊಡುತ್ತಾ ಬರುತ್ತಿದ್ದಾರೆ.
ಉತ್ಸವದ ಅಂಗವಾಗಿ ದೇಗುಲದ ಆಡಳಿತ ಮಂಡಳಿಯ ವತಿಯಿಂದ ಆಗಮಿಸಿದ ಭಕ್ತರಿಗೆ ಮೂರು ದಿನ ಅನ್ನ ಸಂತರ್ಪಣೆ ನಡೆಯಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ವಾರ್ಷಿಕ ತೆರೆ ಮಹೋತ್ಸವದಲ್ಲಿ ಪಾಲ್ಗೊಳ್ಳುವಂತೆ ದೇವಾಲಯದ ಅಡಳಿತ ಮಂಡಳಿ ತಿಳಿಸಿದೆ.