ಕೊಡಗಿನ ಶ್ರೀ ಆದಿ ಬೈತೂರಪ್ಪ ದೇವಸ್ಥಾನದಲ್ಲಿ ವಾರ್ಷಿಕ ಉತ್ಸವ; ಕೊಡಗಿನ ಪುಗ್ಗೆರ ಕುಟುಂಬದ ಎತ್ತು ಪೋರಾಟ್ ಹಾಗೂ ಅಕ್ಕಿ ಅಳೆಯುವ ಶಾಸ್ತ್ರ
ವಿರಾಜಪೇಟೆ:ಕೇರಳದ ಇರಿಟ್ಟಿ ಸಮೀಪದ ಉಳಿಕ್ಕಲ್‍ನ ವಾಯತ್ತೂರು ಕಾಲಿಯಾರ್ (ಕೊಡಗಿನ ಶ್ರೀ ಆದಿ ಬೈತೂರಪ್ಪ) ದೇವಸ್ಥಾನದಲ್ಲಿ ವಾರ್ಷಿಕ ಉತ್ಸವದ ಸಲುವಾಗಿ ಕೊಡಗಿನ ಪುಗ್ಗೆರ ಕುಟುಂಬದ ಎತ್ತು ಪೋರಾಟ್ ಹಾಗೂ ಅಕ್ಕಿ ಅಳೆಯುವ ಶಾಸ್ತ್ರ ನಡೆಯಿತು.
ಊಟು ಹಬ್ಬದ ಅಕ್ಕಿಯನ್ನು ಕೊಡಗಿನಿಂದ ದೇವಸ್ಥಾನಕ್ಕೆ ತರಲಾಯಿತು. ಕೊಡಗಿನ ಐತಿಹಾಸಿಕ ಪುಗ್ಗೇರಮನೆಯಿಂದ ಬೈತೂರುವಿಗೆ ಕಾಲಿಯಾರ್ ಊಟು ಉತ್ಸವಕ್ಕಾಗಿ ಅಕ್ಕಿ ತರಲಾಗುತ್ತದೆ. ದೇವಸ್ಥಾನದಲ್ಲಿ ಅಕ್ಕಿ ಹಾಗೂ ಎತ್ತುಗಳೊಂದಿಗೆ ಆಗಮಿಸಿದ ಕೊಡವರನ್ನು ಸಂಪ್ರದಾಯದಂತೆ ಬರಮಾಡಿಕೊಂಡರು.
ಕೊಡಗಿನಿಂದ ತಂದ ಅಕ್ಕಿಯನ್ನು ದೊಡ್ಡ ಅಳೆದ ಬಳಿಕ ಕೊಡಗು-ಮಲೆಯಾಳರ ಅಪರೂಪದ ಸಂಗಮವಾಗಿರುವ ವಾಯತ್ತೂರು ಉತ್ಸವ ಆರಂಭವಾಗಲಿದೆ. ಗುರುವಾರದಂದು ಶ್ರೀ ಭೂತಬಲಿ, ವಿಶೇಷ ಪೂಜೆ, ನೈವೇದ್ಯ, ಪುಗ್ಗೆರ ಮನೆಯವರ ಪೂಜಾ ಕೈಂಕರ್ಯಗಳು, ಸಂಜೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಶುಕ್ರವಾರ ಬೆಳಿಗ್ಗೆ ಕೊಡಗಿನವರಿಂದ ಮೆರವಣಿಗೆ, ವಿವಿಧ ಸಾಂಪ್ರದಾಯಿಕ ಕಾರ್ಯಕ್ರಮಗಳು, (9 ಊಟ್) ನಾಡಿನ ಎತ್ತು ಪೋರಾಟ, ಅಕ್ಕಿ ಅಳೆಯುವುದು, ರಾತ್ರಿ 8.30 ಗಂಟೆಗೆ ಪುಗ್ಗೆರ ಕುಟುಂಬದ ವಿಶೇಷ ಪೂಜೆ, 9 ಗಂಟೆಗೆ ಬೇಟೆ ಕುರುಮಗನ್ ದೇವಸ್ಥಾನದಲ್ಲಿ ಒಂದು ಸಾವಿರ ತೆಂಗನಕಾಯಿ ಹೊಡೆಯುವುದು, 24 (10 ಊಟ್) ರಂದು ದೊಡ್ಡ ಹಬ್ಬ, ಅಪರಾಹ್ನ 2.30 ಗಂಟೆಗೆ ಆನೆ ಅಂಬಾರಿ ಪ್ರದಕ್ಷಿಣೆ, 25 (11ಊಟ್) ರಂದು ಪೂರ್ವಹ್ನ 9.30 ಗಂಟೆಗೆ ಕೊಡಗಿನ ಎಲ್ಲಾ ತಿರುವಳಕಾರರ ದರ್ಶನ ಹಾಗೂ ಬೈತೂರಪ್ಪ ದೇವರ ಆರ್ಶೀವಾದ ಕಾರ್ಯಕ್ರಮ ನಡೆಯಲಿದೆ. ದೇವಾಲಯಕ್ಕೆ ಆಗಮಿಸಿದ ಬಳಿಕ ವಿವೀದ ಧಾರ್ಮಿಕ ಕಾರ್ಯಗಳನ್ನು ನಡೆಸಿ ದೇವರನ್ನು ಪ್ರಾರ್ಥಿಸಿದ ಬಳಿಕ ಮಾತನಾಡಿದ ದೇವಾಲಯದ ತಕ್ಕರಾದ ಪುಗ್ಗೇರ ಪೊನ್ನಪ್ಪ ಅವರು, ದೇವಾಲಯಕ್ಕೆ ವರ್ಷಂಪ್ರತಿಯಂತೆ ತಮ್ಮ ಹಿರಿಯರ ಕಾಲದಿಂದಲೂ ಪುಗ್ಗೆರ ಕುಟುಂಬದವರಿಂದ ನಡೆಸಿಕೊಂಡು ಬರುತ್ತಿದ್ದ ಪದ್ದತಿಯಂತೆ ಎತ್ತ್ ಪೋರಾಟ್, ಅಕ್ಕಿ ಅಳೆಯುವ ಶಾಸ್ತ್ರವನ್ನು ಮಾಡಿದ್ದೇವೆ.
ಇದೀಗ ನಮ್ಮ ಕೊಡಗಿನ ಹಬ್ಬ ಪ್ರಾರಂಭವಾಗಿದ್ದು ಇನ್ನೂ ಮೂರು ದಿನಗಳ ಕಾಲ ಇಲ್ಲಿ ಭಕ್ತಿ ಪ್ರಧಾನವಾಗಿ ವಿವಿಧ ಪೂಜಾ ಕಾರ್ಯಕ್ರಮಗಳು ನಡೆಯುತ್ತದೆ. ಹಾಗೇಯೇ ಕೊಡಗಿನ ಸಾಂಪ್ರಾದಾಯಿಕ ಆಚರಣೆಗೆ ಕಲಾವಿದರನ್ನು ಕರೆದುಕೊಂಡು ಬರಲು ಕ್ಷೇತ್ರದ ಶಾಸಕ ಪೊನ್ನಣ್ಣ ಅವರು ಸಹಕಾರ ನೀಡುವುದಾಗಿ ಹಾಗೂ ಭಾನುವಾರ ಬೈತೂರು ಹಬ್ಬಕ್ಕೆ ಆಗಮಿಸುವುದಾಗಿ ಭರವಸೆ ನೀಡಿದ್ದಾರೆ ಎಂದರಲ್ಲದೆ ದೇವರ ಉತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೊಡಗಿನಿಂದ ಆಗಮಿಸಿ ದೇವರ ವಿವಿಧ ಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಬೇಕು ಎಂದು ಪುಗ್ಗೇರ ಪೊನ್ನಪ್ಪ ಹೇಳಿದರು.
ಈ ಸಂದರ್ಭ ದೇವಾಲಯದ ತಕ್ಕ ಮುಖ್ಯಸ್ಥರು, ಟ್ರಸ್ಟಿಗಳು, ಪುಗ್ಗೆರ ರಂಜಿ, ಪುಗ್ಗೇರ ನಂದ, ಶಿವಕುಮಾರ್, ಸ್ಥಳೀಯ ಹಾಗೂ ಕೊಡಗಿನ ಭಕ್ತಾಧಿಗಳು, ದೇವಾಲಯದ ಪ್ರದಾನ ಅರ್ಚಕರು, ಕೋಮರತಚ್ಚನ್ ಸೇರಿದಂತೆ ಇತರರು ಹಾಜರಿದ್ದರು.