State News

ಐಪಿಎಸ್‌ ಅಧಿಕಾರಿ ಹೆಸರಲ್ಲಿ ವಂಚನೆಗೆ ಯತ್ನ: ನಕಲಿ ವಾಟ್ಸ್ಯಾಪ್‌ ಖಾತೆಯಿಂದ ಹಣ ಬೇಡಿಕೆ

admincoorgdaily

Photo credit: TV09

ಬೆಂಗಳೂರು,ಜ. 9: ಆನ್‌ಲೈನ್‌ ವಂಚನೆ ಪ್ರಕರಣಗಳು ಹೆಚ್ಚುತ್ತಿರುವ ನಡುವೆಯೇ, ಐಪಿಎಸ್‌ ಅಧಿಕಾರಿ ಹೆಸರನ್ನು ದುರುಪಯೋಗಪಡಿಸಿಕೊಂಡು ಹಣ ವಂಚಿಸಲು ಯತ್ನಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿಯಾಗಿರುವ ಅಕ್ಷಯ್ ಎಂ. ಹಾಕೆ ಅವರ ಹೆಸರು ಹಾಗೂ ಫೋಟೋ ಬಳಸಿ ವಾಟ್ಸ್ಯಾಪ್‌ನಲ್ಲಿ ನಕಲಿ ಖಾತೆ ತೆರೆಯಲಾಗಿದೆ.

ಬೇರೆ ಮೊಬೈಲ್‌ ಸಂಖ್ಯೆಯಿಂದ ಸೃಷ್ಟಿಸಿದ ಈ ನಕಲಿ ಖಾತೆಯಿಂದ ಅಕ್ಷಯ್ ಅವರ ಸ್ನೇಹಿತರು ಹಾಗೂ ಪರಿಚಿತರಿಗೆ ತುರ್ತು ಹಣ ವರ್ಗಾವಣೆ ಮಾಡುವಂತೆ ಸಂದೇಶಗಳನ್ನು ಕಳುಹಿಸಲಾಗಿದೆ. ‘ಪ್ರಾಸ್ಪೆಕ್ಟ್‌ ಖಾತೆಗೆ ತಕ್ಷಣ ಹಣ ಜಮಾ ಮಾಡಬೇಕಿದ್ದು, ಆನ್‌ಲೈನ್‌ ಬ್ಯಾಂಕ್‌ ವ್ಯವಹಾರದಲ್ಲಿ ತೊಂದರೆ ಉಂಟಾಗಿದೆ. ಸಭೆಯಲ್ಲಿ ಇರುವ ಕಾರಣ ನೀವು ಹಣ ವರ್ಗಾಯಿಸಿದರೆ ದಿನಾಂತ್ಯಕ್ಕೆ ಮರುಪಾವತಿಸುತ್ತೇನೆ’ ಎಂಬ ಸಂದೇಶವನ್ನು ವಂಚಕರು ರವಾನಿಸಿದ್ದಾರೆ ಎನ್ನಲಾಗಿದೆ.

ಈ ಕುರಿತು ಕೆಲ ಸ್ನೇಹಿತರು ಡಿಸಿಪಿ ಅಕ್ಷಯ್ ಅವರ ಗಮನಕ್ಕೆ ತಂದ ನಂತರ ವಂಚನೆ ಯತ್ನ ಪತ್ತೆಯಾಗಿದೆ. ಈಗಾಗಲೇ 3–4 ಮಂದಿಗೆ ಇಂತಹ ಸಂದೇಶಗಳು ಬಂದಿರುವುದು ದೃಢವಾಗಿದೆ. ಇಂತಹ ಸಂದೇಶಗಳಿಗೆ ಸಾರ್ವಜನಿಕರು ಯಾವುದೇ ಕಾರಣಕ್ಕೂ ಪ್ರತಿಕ್ರಿಯಿಸಬಾರದು ಎಂದು ಅಕ್ಷಯ್ ಎಂ. ಹಾಕೆ ಮನವಿ ಮಾಡಿದ್ದಾರೆ. ಅನುಮಾನಾಸ್ಪದ ಕರೆಗಳು ಅಥವಾ ಸಂದೇಶಗಳು ಬಂದರೆ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡುವಂತೆ ಅವರು ತಿಳಿಸಿದ್ದಾರೆ.