ಸಕಲೇಶಪುರದಲ್ಲಿ ₹2.5 ಲಕ್ಷ ಮೌಲ್ಯದ MDMA ಮಾರಾಟಕ್ಕೆ ಯತ್ನ: ಕೊಡಗಿನ ಎಮ್ಮೆಮಾಡುವಿನ ಅಜರುದ್ದೀನ್ ಬಂಧನ

Aug 7, 2026 - 10:33
 0  916
ಸಕಲೇಶಪುರದಲ್ಲಿ ₹2.5 ಲಕ್ಷ ಮೌಲ್ಯದ MDMA ಮಾರಾಟಕ್ಕೆ ಯತ್ನ: ಕೊಡಗಿನ ಎಮ್ಮೆಮಾಡುವಿನ ಅಜರುದ್ದೀನ್ ಬಂಧನ

ಸಕಲೇಶಪುರ: ಅಕ್ರಮವಾಗಿ ಮಾದಕ ವಸ್ತು ಮಾರಾಟ ಮಾಡಲು ಯತ್ನಿಸುತ್ತಿದ್ದ ಕೊಡಗು ಮೂಲದ ವ್ಯಕ್ತಿಯೊಬ್ಬನನ್ನು ಸಕಲೇಶಪುರ ನಗರ ಠಾಣೆ ಪೊಲೀಸರು ಬಂಧಿಸಿದ್ದು, ಆತನಿಂದ ಸುಮಾರು ₹2.5 ಲಕ್ಷ ಮೌಲ್ಯದ 25 ಗ್ರಾಂ MDMA ಮಾದಕ ವಸ್ತು ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರನ್ನು ವಶಪಡಿಸಿಕೊಂಡಿದ್ದಾರೆ.

 ಪೊಲೀಸರ ಮಾಹಿತಿ ಪ್ರಕಾರ, ಆಗಸ್ಟ್ 5ರಂದು ಮಧ್ಯಾಹ್ನ ಸುಮಾರು 2.15 ಗಂಟೆಗೆ ಸಕಲೇಶಪುರ ಟೌನ್‌ನ ಗುರುದೇವ ಪೆಟ್ರೋಲ್ ಬಂಕ್ ಸಮೀಪದ ನಾಗ್ ಎನ್‌ಕ್ಲೇವ್ ಲೇಔಟ್‌ನಲ್ಲಿ ಕಾರಿನಲ್ಲೇ ಮಾದಕ ವಸ್ತು ಮಾರಾಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಅಪರಾಧ ವಿಭಾಗದ ಸಬ್ ಇನ್ಸ್ಪೆಕ್ಟರ್ ಕೃಷ್ಣಪ್ಪ ಕೆ.ಎಸ್. ಅವರಿಗೆ ಲಭಿಸಿತ್ತು. ಮಾಹಿತಿ ಆಧರಿಸಿ ತಕ್ಷಣ ಕಾರ್ಯಾಚರಣೆ ನಡೆಸಿದ ಪೊಲೀಸರು ಸ್ಥಳದ ಮೇಲೆ ದಾಳಿ ನಡೆಸಿ ಕೊಡಗಿನ ಎಮ್ಮೆಮಾಡುವಿನ ಅಜರುದ್ದೀನ್ ಎಂಬಾತನನ್ನು ವಶಕ್ಕೆ ಪಡೆದರು.

ಪರಿಶೀಲನೆ ವೇಳೆ ಆತನ ಬಳಿ ಇದ್ದ 25 ಗ್ರಾಂ MDMA ಪತ್ತೆಯಾಗಿದ್ದು, ಅದನ್ನು ಹಾಗೂ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯ ವಿರುದ್ಧ ಸಕಲೇಶಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

 ಈ ಯಶಸ್ವಿ ಕಾರ್ಯಾಚರಣೆ ನಗರ ಪೊಲೀಸ್ ಇನ್ಸ್ಪೆಕ್ಟರ್ ವನರಾಜು ಅವರ ಮಾರ್ಗದರ್ಶನದಲ್ಲಿ, ಸಬ್ ಇನ್ಸ್ಪೆಕ್ಟರ್ ಕೃಷ್ಣಪ್ಪ ಕೆ.ಎಸ್. ಅವರ ನೇತೃತ್ವದಲ್ಲಿ ನಡೆಯಿತು. ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಖಾದರ್ ಅಲಿ, ರೇವಣ್ಣ ಎಸ್.ಜೆ., ಶ್ರೀಧರ್, ರಾಕೇಶ್, ಸೋಮಶೇಖರ್, ಅಶೋಕ್, ಸುನಿಲ್ ಕುಮಾರ್, ಹನುಮಂತು, ಶಿವಕುಮಾರ್ ಹಾಗೂ ಚಾಲಕ ಮಧು ಭಾಗವಹಿಸಿದ್ದರು.

What's Your Reaction?

Like Like 1
Dislike Dislike 1
Love Love 0
Funny Funny 0
Angry Angry 0
Sad Sad 0
Wow Wow 0