Kodagu

ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಎಚ್‍ಐವಿ/ಏಡ್ಸ್ ಕುರಿತು ಜಾಗೃತಿ ಕಾರ್ಯಕ್ರಮ

admincoorgdaily

ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಎಚ್‍ಐವಿ/ಏಡ್ಸ್ ಕುರಿತು ಜಾಗೃತಿ ಕಾರ್ಯಕ್ರಮ

 ಮಡಿಕೇರಿ ಆ.12:-ಕೊಡಗು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ವತಿಯಿಂದ ತೀವ್ರಗೊಳಿಸಿದ ಎಚ್‍ಐವಿ/ ಏಡ್ಸ್ ಜಾಗೃತಿ ಅಭಿಯಾನದ ಅಂಗವಾಗಿ ಅಂತರರಾಷ್ಟ್ರೀಯ ಯುವ ದಿನಾಚರಣೆ ಪ್ರಯುಕ್ತ ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಯುವಜನರಲ್ಲಿ ಎಚ್‍ಐವಿ/ ಏಡ್ಸ್ ಕುರಿತು ಅರಿವು ಮೂಡಿಸುವ ಹಾಗೂ ಏಡ್ಸ್ ಸುರಕ್ಷತಾ ಕಾರ್ಯಕ್ರಮದ ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಕೊಡಗು ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಸನತ್ ಕುಮಾರ್ ಅವರು ಉದ್ಘಾಟಿಸಿ ಮಾತನಾಡಿ, ಯುವಜನರಲ್ಲಿ ಎಚ್‍ಐವಿ/ ಏಡ್ಸ್ ಹರಡುವಿಕೆಯನ್ನು ತಡೆಗಟ್ಟುವಲ್ಲಿ ಜಾಗೃತಿ, ಮುನ್ನೆಚ್ಚರಿಕೆ ಹಾಗೂ ಜವಾಬ್ದಾರಿಯುತ ಆರೋಗ್ಯ ನಡೆಗಳ ಮಹತ್ವವನ್ನು ವಿವರಿಸಿದರು. ಎಚ್‍ಐವಿ ಸೋಂಕಿನ ತಡೆಗಟ್ಟುವಿಕೆ ಮತ್ತು ನಿಯಂತ್ರಣದಲ್ಲಿ ಯುವಜನರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ತಿಳಿಸಿದರು. 

ಜಿಲ್ಲಾ ಮೇಲ್ವಿಚಾರಕಿ ಸುನಿತಾ ಮುತ್ತಣ್ಣ ಅವರು ಮಾತನಾಡಿ, ಎಚ್‍ಐವಿ/ಏಡ್ಸ್‍ಗೆ ಸಂಬಂಧಿಸಿದ ಲಭ್ಯವಿರುವ ಸೇವೆಗಳು, ಪರೀಕ್ಷೆ ಹಾಗೂ ಸಮಾಲೋಚನಾ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಅಲ್ಲದೆ ಏಡ್ಸ್ ಸುರಕ್ಷತಾ ಕಾರ್ಯಕ್ರಮ, ಕ್ಯೂಆರ್ ಸಂಕೇತ ಸ್ಕ್ಯಾನ್ ಮಾಡುವ ಮೂಲಕ ಸೇವೆಗಳ ಕುರಿತು ಮಾಹಿತಿ ಪಡೆಯುವ ವಿಧಾನ, ಎಚ್‍ಐವಿ/ಏಡ್ಸ್ ಜಾಗೃತಿ ಕುರಿತ ಸೃಜನಾತ್ಮಕ ಕಿರುಚಿತ್ರ ಸ್ಪರ್ಧೆ ಹಾಗೂ ಯುವಜನರಿಗಾಗಿ ಹಮ್ಮಿಕೊಳ್ಳಲಾಗುತ್ತಿರುವ ವಿವಿಧ ಜಾಗೃತಿ ಚಟುವಟಿಕೆಗಳ ಬಗ್ಗೆ ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ವೇಣುಗೋಪಾಲ್ ಅವರು, ವಿದ್ಯಾರ್ಥಿಗಳಲ್ಲಿ ಎಚ್‍ಐವಿ/ಏಡ್ಸ್ ಕುರಿತು ವೈಜ್ಞಾನಿಕ ಅರಿವು ಮೂಡಿಸುವುದರೊಂದಿಗೆ ಆರೋಗ್ಯಕರ ಮತ್ತು ಜವಾಬ್ದಾರಿಯುತ ಜೀವನಶೈಲಿಯನ್ನು ಬೆಳೆಸುವುದು ಅಗತ್ಯವಾಗಿದೆ. ಇಂತಹ ಜಾಗೃತಿ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಆರೋಗ್ಯದ ಬಗ್ಗೆ ಅರಿವು ಹೆಚ್ಚಿಸುವುದರ ಜೊತೆಗೆ ಸಮಾಜದಲ್ಲಿ ಎಚ್‍ಐವಿ ತಡೆಗಟ್ಟುವ ಸಂದೇಶವನ್ನು ಪರಿಣಾಮಕಾರಿಯಾಗಿ ತಲುಪಿಸಲು ಸಹಕಾರಿಯಾಗುತ್ತವೆ ಎಂದರು. 

ರಾಷ್ಟ್ರೀಯ ಸೇವಾ ಯೋಜನೆ ಅಧಿಕಾರಿ ಉದಯಕುಮಾರ್, ಕಾಲೇಜಿನ ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ಆರೋಗ್ಯ ಇಲಾಖೆಯ ಪ್ರತಿನಿಧಿಗಳು ಇತರರು ಇದ್ದರು. 

ಅಂತರರಾಷ್ಟ್ರೀಯ ಯುವ ದಿನಾಚರಣೆ ಹಾಗೂ ತೀವ್ರಗೊಳಿಸಿದ ಎಚ್‍ಐವಿ/ ಏಡ್ಸ್ ಜಾಗೃತಿ ಅಭಿಯಾನದ ಅಂಗವಾಗಿ ಆಯೋಜಿಸಲಾಗಿದ್ದ ಕಿರುಚಿತ್ರ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಇದೇ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು.

ಯುವಜನರಲ್ಲಿ ಎಚ್‍ಐವಿ/ಏಡ್ಸ್ ಕುರಿತು ವೈಜ್ಞಾನಿಕ ಅರಿವು ಮೂಡಿಸುವುದು, ಎಚ್‍ಐವಿ ಸೋಂಕಿನ ತಡೆಗಟ್ಟುವಿಕೆಯ ಕುರಿತು ಜಾಗೃತಿ ಹೆಚ್ಚಿಸುವುದು ಹಾಗೂ ಲಭ್ಯವಿರುವ ಆರೋಗ್ಯ ಸೇವೆಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಪೆÇ್ರೀತ್ಸಾಹಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿತ್ತು.