ಕುಶಾಲನಗದಲ್ಲಿ ಬಿಜೆಪಿ ಪ್ರತಿಭಟನೆ

Aug 13, 2026 - 19:48
 0  94
ಕುಶಾಲನಗದಲ್ಲಿ ಬಿಜೆಪಿ ಪ್ರತಿಭಟನೆ

ಕುಶಾಲನಗರ : ಕುಶಾಲನಗರ ಪುರಸಭೆಯ ಮುಖ್ಯಾಧಿಕಾರಿಗಳ ಕಾರ್ಯವೈಖರಿ ಖಂಡಿಸಿ ಕುಶಾಲನಗರ ನಗರ ಬಿಜೆಪಿ ಘಟಕದ ವತಿಯಿಂದ ಪುರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಯಿತು.

ಪುರಸಭೆಯಲ್ಲಿ ಸಾರ್ವಜನಿಕರಿಗೆ ಸೇವೆ ನೀಡುವಲ್ಲಿ ವಿಳಂಭ ಉಂಟಾಗುತ್ತಿದೆ, ಬೀದಿ ವ್ಯಾಪಾರಿಗಳಿಗೆ ಅಧಿಕಾರಿಗಳು‌ ಮತ್ತು ಬೀದಿ ವ್ಯಾಪಾರಿ ಸಂಘಗಳ ಪದಾಧಿಕಾರಿಗಳು ಇತರೆ ವ್ಯಾಪಾರಿಗಳಿಗೆ ಕಿರುಕುಳ ನೀಡುತ್ತಿದ್ದಾರೆ, ಪ್ರತಿಭಟನಾಕಾರರ ವಿರುದ್ಧ ಪ್ರಕರಣ ದಾಖಲಿಸಿ ಅವರ ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ಪ್ರತಿಭಟನಾಕಾರರು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

 ಪಟಪ ಅನಧಿಕೃತವಾಗಿ ನಡೆಯುತ್ತಿರುವ ಮಾಂಸ ಮಾರಾಟ ಮಳಿಗೆಗಳನ್ನು ತೆರವುಗೊಳಿಸಬೇಕೆಂದು ಒತ್ತಾಯಿಸಲಾಯಿತು.

ರಸ್ತೆ ಬದಿ ಮೀನು ಮಾರಾಟಗಾರರು ಮೀನುಗಳನ್ನು ತುಂಬಿದ ಬುಟ್ಟಿಗಳ ಸಹಿತ ಪ್ರತಿಭಟನೆಯಲ್ಲಿ ಪಾಲ್ಗೊಂಡು‌ ತಮಗೆ ಉಂಟಾಗುತ್ತಿರುವ ಅನ್ಯಾಯದ ವಿರುದ್ದ ಪ್ರತಿಭಟಿಸಿದರು.ಅಧಿಕಾರಿಗಳು ಕಾಂಗ್ರೆಸ್ ನಾಯಕರುಗಳ ಕೈಗೊಂಬೆಯಾಗಿ ವರ್ತಿಸುತ್ತಿದ್ದಾರೆ,

ಪುರಸಭೆಯೊಳಗೆ ಲಂಚಗುಳಿತನ ತಾಂಡವವಾಡುತ್ತಿದೆ, ಹಲವು ಅಕ್ರಮಗಳಿಗೆ, ಮದ್ಯವರ್ತಿಗಳಿಗೆ ಅಧಿಕಾರಿಗಳು ಸಹಕಾರ ನೀಡುತ್ತಿದ್ದಾರೆ, ಬೀದಿ‌ಬದಿ ವ್ಯಾಪಾರಿಗಳದ ಮಾಮೂಲಿ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿ ಅಧಿಕಾರಿಗಳು ಮತ್ತು ಸರಕಾರದ ವಿರುದ್ದ ಪ್ರತಿಭಟನಾಕಾರರು ಘೋಷಣೆ ಮೊಳಗಿಸಿದರು.‌ ಸ್ಥಳಕ್ಕೆ‌ ಜಿಲ್ಲಾಧಿಕಾರಿಗಳು ಆಗಮಿಸುವಂತೆ ಪಟ್ಟು ಹಿಡಿಯಲಾಯಿತು.

ಸ್ಥಳಕ್ಕೆ ಆಗಮಿಸಿದ ಆಡಳಿತಾಧಿಕಾರಿ‌ ನಿತಿನ ಚಕ್ಕಿ ಅವರಲ್ಲಿ ಪುರಸಭೆ ಅಧಿಕಾರಿಗಳಿಂದ ತಮಗೆ ಉಂಟಾಗಿರುವ ಅನ್ಯಾಯದ ವಿರುದ್ದ‌ ಬೇಸ್ತ‌ ಸಮುದಾಯದ ದಿನೇಶ್ ಅವಿನಾಶ್, ಮತ್ತು ಉದ್ಯಮಿ ಕೆ.ಡಿ.ಪ್ರಶಾಂತ್ ಆರೋಪ ವ್ಯಕ್ತಪಡಿಸಿದರು.

ಈ ಸಂದರ್ಭ ಮಾತನಾಡಿದ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಬಿ.ಬಿ.ಭಾರತೀಶ್, ಕಾಂಗ್ರೆಸ್ ಕಾರ್ಯಕರ್ತನೊಬ್ಬನ ಮಾತು ಕೇಳಿಬೆಸ್ತ ಸಮುದಾಯದವರ ವ್ಯಾಪಾರಕ್ಕೆ ಅಧಿಕಾರಿಗಳು ಅಡ್ಡಿಪಡಿಸಿದ್ದಾರೆ. ಇದನ್ನು ಪ್ರಶ್ನಿಸಿ ಪುರಸಭೆಯೊಳಗೆ ಸಾಂಕೇತಿಕ ಪ್ರತಿಭಟನೆ ಹಮ್ಮಿಕೊಂಡ ಕೂಡುಮಂಗಳೂರು ಗ್ರಾಪಂ ಮಾಜಿ ಅಧ್ಯಕ್ಷ ಭಾಸ್ಕರ್ ನಾಯಕ್ ವಿರುದ್ದ ದೂರು ದಾಖಲಿಸಲಾಗಿದೆ. ಇವೆಲ್ಲವೂ ಕಾಂಗ್ರೆಸ್ ಮುಖಂಡರ ಕುಮ್ಮಕ್ಕಿನಿಂದ ನಡೆದಿದೆ. ದೂರನ್ನು ‌ವಾಪಾಸ್ ಪಡೆಯಬೇಕಿದೆ ಎಂದು ಆಗ್ರಹಿಸಿದ ಅವರು, ಪುರಸಭೆಯೊಳಗೆ ಅಧಿಕಾರಿಗಳು, ಮದ್ಯವರ್ತಿಗಳ ದರ್ಬಾರ್ , ಲಂಚಗುಳಿತನ ಹೆಚ್ಚಾಗಿದೆ ಎಂದು ಆರೋಪಿಸಿದರು. ಈ ಬಗ್ಗೆ ವಿಶೇಷ ತನಿಖಾ ತಂಡದಿಂದ ಪರಿಶೀಲನೆ ನಡೆಸಬೇಕಿದೆ. ಬೀದಿ ಬದಿ ವ್ಯಾಪಾರಿಗಳ ಜೀವನೋಪಾಯ ಮತ್ತು ಕಾನೂನು ಬದ್ದ ಹಕ್ಕುಗಳನ್ನು ರಕ್ಷಿಸಬೇಕು, ಸಾರ್ವಜನಿಕರಿಗೆ ತೊಂದರೆ, ಆರೋಗ್ಯ ಹಾಗೂ ಸ್ವಚ್ಚತೆಗೆ ಧಕ್ಕೆಯಾಗುವ ರೀತಿಯಲ್ಲಿ ನಡೆಯುತ್ತಿರುವ ಮಾಂಸ ಮಾರಾಟದ ವಿರುದ್ದ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಇದೇ ಸಂದರ್ಭ ವಿವಿಧ ಬೇಡಿಕೆಗಳ ಈಡೇರಿಕೆಗೆ ಹಾಗೂ ಸೂಕ್ತ ಕ್ರಮಕ್ಕೆ‌ ಒತ್ತಾಯಿಸಿ ಮನವಿ‌ ಪತ್ರ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ನಗರ ಬಿಜೆಪಿ ಅಧ್ಯಕ್ಷ ಎಂ.ಎಂ.ಚರಣ್, ಪ್ರಧಾನ ಕಾರ್ಯದರ್ಶಿ ಹೆಚ್.ಎಂ.ಮಧುಸೂದನ್, ಮಂಡಲ ಬಿಜೆಪಿ ಅಧ್ಯಕ್ಷ ಗೌತಮ್, ಮುಖಂಡರಾದ ಕೆ.ಜಿ.ಮನು, ಎಂ.ಡಿ.ಕೃಷ್ಣಪ್ಪ, ಶಿವಾಜಿ, ಭಾಸ್ಕರ್ ನಾಯಕ್, ಚಂದ್ರಶೇಖರ್ ಹೇರೂರು, ರಕ್ಷಿತ್ ಮಾವಾಜಿ, ದಿನೇಶ್, ಮಂಜು, ಪ್ರಭಾಕರ್, ಸುಮನ್, ನವನೀತ್, ನಾರಾಯಣ, ಸಚಿನ್, ಅವಿನಾಶ್, ಆಸಿಫ್, ಕನಕ, ಮಣಿಕಂಠ ಮತ್ತಿತರರು ಇದ್ದರು.

ವರದಿ.ಟಿ.ಆರ್.ಪ್ರಭುದೇವ್

ಕುಶಾಲನಗರ

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0