ದಾರಿ ತಪ್ಪಿ ಸೆಪ್ಟಿಕ್ ಟ್ಯಾಂಕ್‌ಗೆ ಬಿದ್ದ ಮರಿ ಆನೆ;ಒಂದು ಗಂಟೆ ಹರಸಾಹಸದ ಬಳಿಕ ತಾಯಿಯ ಸಹಾಯದಿಂದ ಪಾರು
admincoorgdaily


ನೆಲ್ಲಿಹುದಿಕೇರಿ:ಕುಶಾಲನಗರ ತಾಲೂಕಿನ ನಲ್ವತ್ತೇಕರೆ ಗ್ರಾಮದಲ್ಲಿ ರಾತ್ರಿ ದಾರಿ ತಪ್ಪಿ ಬಂದ ಮರಿ ಆನೆಯೊಂದು ನಿರ್ಮಾಣ ಹಂತದಲ್ಲಿದ್ದ ಸೆಪ್ಟಿಕ್ ಟ್ಯಾಂಕ್‌ಗೆ ಬಿದ್ದು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಒದ್ದಾಡಿದ ಘಟನೆ ನಡೆದಿದೆ. ಮಣಿಎಂಬುವವರ ಮನೆಯ ಬಳಿ ನಿರ್ಮಾಣ ಹಂತದಲ್ಲಿದ್ದ ಹಿಂಗು ಗುಂಡಿಗೆ ರಾತ್ರಿ 7.30ರ ಸುಮಾರಿಗೆ ಮರಿ ಆನೆ ಆಕಸ್ಮಿಕವಾಗಿ ಬಿದ್ದಿದೆ.
ಹಿಂಗು ಗುಂಡಿ ತುಂಬಾ ಆಳವಾಗಿದ್ದರಿಂದ ಮರಿ ಆನೆ ಹೊರಗೆ ಬರಲು ಪರದಾಡಿದೆ. ಘಟನೆ ಗಮನಿಸಿದ ಸ್ಥಳೀಯರು ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಅಷ್ಟರಲ್ಲೇ ಮರಿ ಆನೆಯ ಜೊತೆಗಿದ್ದ ತಾಯಾನೆ ಸ್ಥಳಕ್ಕೆ ಆಗಮಿಸಿ ಮರಿಯನ್ನು ಮೇಲಕ್ಕೆತ್ತಲು ಸಹಾಯ ಮಾಡಿತು. ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ತಲುಪುವ ಮುನ್ನವೇ ತಾಯಾನೆಯ ಸಹಾಯದಿಂದ ಮರಿ ಆನೆ ಗುಂಡಿಯಿಂದ ಹೊರಗೆ ಬಂದಿದೆ. ಬಳಿಕ ಮರಿ ಆನೆ ತನ್ನ ಗುಂಪಿನೊಂದಿಗೆ ಕಾಡಿನತ್ತ ಸುರಕ್ಷಿತವಾಗಿ ಸಾಗಿದೆ. ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಘಟನೆಯಿಂದ ಸ್ಥಳೀಯರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.