ಕೊಡವ ವೆಲ್ಫೇರ್ ಮತ್ತು ರಿಕ್ರಿಯೇಷನ್ ಅಸೋಸಿಯೇಷನ್‌ನ ವತಿಯಿಂದ ಬ್ಯಾಡ್ಮಿಂಟನ್ ಕೋರ್ಟ್ ಉದ್ಘಾಟನೆ
ಮಡಿಕೇರಿ: ದೇಹ ಮತ್ತು ಮನಸ್ಸಿನ ಆರೋಗ್ಯಕ್ಕೆ ಕ್ರೀಡೆ ಅನಿವಾರ್ಯ. ಇಂದಿನ ಒತ್ತಡದ ಜೀವನದಲ್ಲಿ ಪ್ರತಿಯೊಬ್ಬರೂ ವ್ಯಾಯಾಮಕ್ಕೆ ಸಮಯ ಮೀಸಲಿಡಬೇಕು ಎಂದು ಅಂತರಾಷ್ಟ್ರೀಯ ಬಾಸ್ಕೆಟ್‌ಬಾಲ್ ಕ್ರೀಡಾಪಟು ಹಾಗೂ ಫೀ.ಮಾ.ಕೆ.ಎಂ.ಕಾರ್ಯಪ್ಪ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ.ಪುಷ್ಪ ಕುಟ್ಟಣ್ಣ ಅವರು ಹೇಳಿದರು.
ಕೊಡವ ವೆಲ್ಫೇರ್ ಮತ್ತು ರಿಕ್ರಿಯೇಷನ್ ಅಸೋಸಿಯೇಷನ್‌ನ ವತಿಯಿಂದ ನಿರ್ಮಿಸಲಾದ ನೂತನ ಬ್ಯಾಡ್ಮಿಂಟನ್ ಅಂಕಣವನ್ನು ಅವರು ಇತ್ತೀಚೆಗೆ ಉದ್ಘಾಟಿಸಿ ಮಾತನಾಡಿದರು.
ಇಂದಿನ ಒತ್ತಡದ ಯುಗದಲ್ಲಿ ಪ್ರತಿಯೊಬ್ಬರಿಗೂ ವ್ಯಾಯಾಮದ ಅಗತ್ಯವಿದೆ. ದೇಹ ಮತ್ತು ಮನಸ್ಸಿನ ಆರೋಗ್ಯದ ವೃದ್ಧಿಗೆ ಕ್ರೀಡಾಕೂಟಗಳು ಹೆಚ್ಚು ಸಹಕಾರಿಯಾಗಿದೆ. ನೂತನ ಅಂಕಣವನ್ನು ಎಲ್ಲರೂ ಸದುಪಯೋಗಪಡಿಸಿಕೊಂಡು ಯುವಜನರಲ್ಲಿ ಕ್ರೀಡಾ ಮನೋಭಾವವನ್ನು ಬೆಳೆಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಮಾತನಾಡಿ, ಇಂದು ನಾವು ಬಿಡುವಿಲ್ಲದ ಜೀವನಕ್ಕೆ ಒಗ್ಗಿ ಹೋಗಿದ್ದೇವೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಕೂಡ ಸಮಯವಿಲ್ಲದಂತಾಗಿದೆ. ಪ್ರತಿಯೊಬ್ಬರ ಯಶಸ್ಸಿನ ಗುಟ್ಟು ಆರೋಗ್ಯದಲ್ಲೇ ಅಡಗಿದೆ. ಆದ್ದರಿಂದ ಆರೋಗ್ಯವಂತ ಜೀವನಕ್ಕೆ ಆದ್ಯತೆ ನೀಡಬೇಕು ಎಂದು ತಿಳಿಸಿದರು.
ಸಾಮಾಜಿಕ ಕಳಕಳಿಯೊಂದಿಗೆ ಸೇವೆ ಸಲ್ಲಿಸುತ್ತಾ ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡಿರುವ ಕೊಡವ ವೆಲ್ಫೇರ್ ಮತ್ತು ರಿಕ್ರಿಯೇಷನ್ ಅಸೋಸಿಯೇಷನ್ ಈಗ ಕ್ರೀಡೆಗೆ ಉತ್ತೇಜನ ನೀಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಬ್ಯಾಡ್ಮಿಂಟನ್ ಅಂಕಣದ ನಿರ್ಮಾಣ ಇತರರಿಗೆ ಮಾದರಿಯಾಗಿದೆ ಎಂದು ಶಾಸಕರು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಸೋಸಿಯೇಷನ್‌ನ ಅಧ್ಯಕ್ಷ ಕುಕ್ಕೇರ ಜಯ ಚಿಣ್ಣಪ್ಪ ಅವರು ಮಾತನಾಡಿ, ಅಂಕಣ ನಿರ್ಮಾಣಕ್ಕೆ ಸಹಕರಿಸಿದ ಶಾಸಕರು, ವಿಧಾನ ಪರಿಷತ್ ಸದಸ್ಯರು, ಅರೆಕಾಡು, ಹೊಸ್ಕೇರಿ ಗ್ರಾಮಸ್ಥರು ಹಾಗೂ ಎಲ್ಲಾ ದಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಇದು ಕೇವಲ ಒಂದು ಬ್ಯಾಡ್ಮಿಂಟನ್ ಕೋರ್ಟ್ ಅಲ್ಲ. ಇದು ಪರಸ್ಪರ ಸ್ನೇಹವನ್ನು ಗಟ್ಟಿಗೊಳಿಸುವ, ಕುಟುಂಬಗಳನ್ನು ಒಗ್ಗೂಡಿಸುವ ಮತ್ತು ಮಕ್ಕಳಲ್ಲಿ ಹಾಗೂ ಯುವ ಸಮೂಹದಲ್ಲಿ ಶಿಸ್ತು ಹಾಗೂ ಕ್ರೀಡಾ ಮನೋಭಾವವನ್ನು ಬೆಳೆಸುವ ಕೇಂದ್ರವಾಗಿದೆ. ನಾವು ಒಗ್ಗಟ್ಟಾಗಿದ್ದರೆ ಯಾವ ಗುರಿಯೂ ದೊಡ್ಡದಲ್ಲ. ನಿಮ್ಮೆಲ್ಲರ ಸಹಕಾರದಿಂದ ಅಸೋಸಿಯೇಷನ್ ಎಲ್ಲಾ ಯೋಜನೆಗಳಲ್ಲಿ ಯಶಸ್ಸು ಸಾಧಿಸಿದೆ. ಮುಂದಿನ ದಿನಗಳಲ್ಲಿ ಅಡುಗೆ ಕೋಣೆ ನಿರ್ಮಾಣ ಕಾರ್ಯವೂ ನಡೆಯಲಿದೆ ಎಂದು ಅವರು ವಿವರಿಸಿದರು.
ಕಾರ್ಯಕ್ರಮದಲ್ಲಿ ಹಿರಿಯರಾದ ಬಿದ್ದಂಡ ಮಾದಯ್ಯ, ಅಸೋಸಿಯೇಷನ್‌ನ ಪದಾಧಿಕಾರಿಗಳು, ಸದಸ್ಯರು ಮತ್ತು ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.
೭ಆದರ್ಶ್‌ಕೆಡಿಜಿಎ೩: ನೂತನ ಬ್ಯಾಡ್ಮಿಂಟನ್ ಅಂಕಣ ಉದ್ಘಾಟನಾ ಕಾರ್ಯಕ್ರಮದಲ್ಲಿ ಪುಷ್ಪ ಕುಟ್ಟಣ್ಣ, ಡಾ.ಮಂತರ್ ಗೌಡ, ಜಯ ಚಿಣ್ಣಪ್ಪ ಇತರರಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0

