ಆಹಾರ ಉತ್ಪನ್ನಗಳ ಮೇಲೆ ORS ಬಳಕೆ ನಿಷೇಧ!
ಹೈದರಾಬಾದ್: ಎಂಟು ವರ್ಷಗಳ ನಿರಂತರ ಹೋರಾಟದ ಬಳಿಕ ಹೈದರಾಬಾದ್ ಮೂಲದ ಮಕ್ಕಳ ತಜ್ಞೆ (ಪೀಡಿಯಾಟ್ರಿಷನ್) ಡಾ. ಶಿವರಂಜಿನಿ ಸಂತೋಷ್ ಅವರ ಪ್ರಯತ್ನಕ್ಕೆ ದೇಶದ ಆಹಾರ ಸುರಕ್ಷತಾ ಮತ್ತು ಮಾನದಂಡ ಪ್ರಾಧಿಕಾರ (FSSAI) ಮನ್ನಣೆ ನೀಡಿದೆ. ಕಳೆದ ವಾರ ಹೊರಡಿಸಿದ ಮಹತ್ವದ ಆದೇಶದ ಮೂಲಕ, ಯಾವುದೇ ಪ್ಯಾಕೇಜ್ ಪಾನೀಯಗಳು ಅಥವಾ ಟೆಟ್ರಾ-ಪ್ಯಾಕ್ ಉತ್ಪನ್ನಗಳು ತಮ್ಮ ಬ್ರ್ಯಾಂಡ್ ಅಥವಾ ಹೆಸರಿನಲ್ಲಿ “ORS” (Oral Rehydration Solution) ಎಂಬ ಪದವನ್ನು ಬಳಸುವುದನ್ನು ನಿಷೇಧಿಸಲಾಗಿದೆ.
ಈ ನಿರ್ಧಾರವು ವೈದ್ಯಕೀಯ ವಲಯದಲ್ಲಿ ಮಹತ್ವದ ಮೈಲಿಗಲ್ಲು ಎನಿಸಿಕೊಂಡಿದ್ದು, “ORS ಪಾನೀಯ” ಎಂಬ ಹೆಸರಿನಲ್ಲಿ ಮಾರಾಟವಾಗುತ್ತಿದ್ದ ನೂರಾರು ಉತ್ಪನ್ನಗಳ ವಿರುದ್ಧದ ದೀರ್ಘ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ. ನಿಜವಾದ ವೈದ್ಯಕೀಯ ORSನ ಉಪ್ಪು ಮತ್ತು ಸಕ್ಕರೆಯ ಸಮತೋಲನವನ್ನು ಪಾಲಿಸದೆ, ಕೇವಲ ಸಿಹಿ ಪಾನೀಯಗಳ ರೂಪದಲ್ಲಿ ಗ್ರಾಹಕರಿಗೆ ಮಾರಾಟವಾಗುತ್ತಿದ್ದ ಈ ಉತ್ಪನ್ನಗಳು ಆರೋಗ್ಯಕ್ಕೆ ಗಂಭೀರ ಅಪಾಯ ಉಂಟುಮಾಡುತ್ತಿದ್ದವು.
“ಪೋಷಕರು ಈ ಪಾನೀಯಗಳನ್ನು ನಿಜವಾದ ORS ಎಂದು ನಂಬಿ ಮಕ್ಕಳಿಗೆ ನೀಡುತ್ತಿದ್ದರು. ಆದರೆ ಹೆಚ್ಚುವರಿ ಸಕ್ಕರೆಯುಳ್ಳ ಈ ಉತ್ಪನ್ನಗಳು ದೇಹದ ನೀರಿನ ಸಮತೋಲನವನ್ನು ಹಾನಿಗೊಳಿಸಿ ಕೆಲವೊಮ್ಮೆ ಅತಿಸಾರಕ್ಕೂ ಕಾರಣವಾಗುತ್ತಿತ್ತು,” ಎಂದು ಡಾ. ಶಿವರಂಛನಿ ಸಂತೋಷ್ ವಿವರಿಸಿದರು.
ಅವರ ಹೋರಾಟವು ಎಂಟು ವರ್ಷಗಳ ಹಿಂದೆ ಆರಂಭವಾಯಿತು. ತಮ್ಮ ಕ್ಲಿನಿಕ್ ನಲ್ಲಿ, ಅತಿಸಾರದಿಂದ ಬಳಲುತ್ತಿದ್ದ ಮಕ್ಕಳಿಗೆ ಪೋಷಕರು “ORS ಪಾನೀಯ” ನೀಡುತ್ತಿರುವುದನ್ನು ಗಮನಿಸಿದ ನಂತರ ಅವರು ಸಾಮಾಜಿಕ ಮಾಧ್ಯಮಗಳ ಮೂಲಕ ಜನಜಾಗೃತಿ ಮೂಡಿಸಲು ಮುಂದಾದರು. ವೈದ್ಯಕೀಯ ತಜ್ಞರು, ಪೋಷಕರು ಹಾಗೂ ಸಾರ್ವಜನಿಕರಿಂದ ಅವರಿಗೆ ವ್ಯಾಪಕ ಬೆಂಬಲ ದೊರೆಯಿತು.
“ORS ಲಕ್ಷಾಂತರ ಜೀವಗಳನ್ನು ಉಳಿಸಿರುವ ವೈದ್ಯಕೀಯ ಆವಿಷ್ಕಾರವಾಗಿದೆ. ಇದರಲ್ಲಿ ನಿಖರ ಪ್ರಮಾಣದ ಗ್ಲೂಕೋಸ್, ಸೋಡಿಯಂ ಕ್ಲೋರೈಡ್ ಹಾಗೂ ಪೊಟ್ಯಾಸಿಯಮ್ ಕ್ಲೋರೈಡ್ ಇರಬೇಕು. ಈ ಸಮತೋಲನವೇ ದೇಹವನ್ನು ಪುನರ್ಜಲೀಕರಿಸುತ್ತದೆ,” ಎಂದು ಅವರು ಹೇಳಿದರು.
FSSAIಯ ಹೊಸ ಆದೇಶದಿಂದ ಮುಂದೆ ಯಾವುದೇ ಕಂಪನಿ ತನ್ನ ಉತ್ಪನ್ನ ಹೆಸರಿನಲ್ಲಿ “ORS” ಪದವನ್ನು ಬಳಸಲು ಅವಕಾಶವಿಲ್ಲ. ಇದರಿಂದ ತಪ್ಪುಮಾಹಿತಿಯ ಪ್ಯಾಕೇಜ್ ಪಾನೀಯಗಳಿಂದ ಸಾರ್ವಜನಿಕ ಆರೋಗ್ಯ ರಕ್ಷಣೆಗೆ ಮಹತ್ವದ ಹೆಜ್ಜೆ ಇಟ್ಟಂತಾಗಿದೆ.
“ದೊಡ್ಡ ಕಂಪೆನಿಗಳ ಒತ್ತಡಗಳ ನಡುವೆಯೂ ನಾವು ಸತ್ಯದ ಹಾದಿಯಲ್ಲೇ ನಡೆದಿದ್ದೇವೆ. ಇಂದು ಆ ಹೋರಾಟ ಫಲ ನೀಡಿರುವುದು ನನಗೆ ಅಪಾರ ತೃಪ್ತಿ ನೀಡಿದೆ,” ಎಂದು ಡಾ. ಶಿವರಂಜಿನಿ ಸಂತೋಷ್ ಪ್ರತಿಕ್ರಿಯಿಸಿದರು.