ಬಜೆಟ್‌ನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಮೀಸಲಿರಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಮಾರ್ಚ್ 11ರಂದು ಬೆಂಗಳೂರು ಚಲೋ
admincoorgdaily

ಮಡಿಕೇರಿ: ರಾಜ್ಯದ ೨೦೨೬-೨೭ರ ಬಜೆಟ್‌ನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಮೀಸಲಿರಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ವತಿಯಿಂದ ಮಾ.೧೧ರಂದು ಬೆಳಿಗ್ಗೆ ೧೧ ಗಂಟೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಬೆಂಗಳೂರು ಚಲೋ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.
ಈ ಪ್ರತಿಭಟನೆಯಲ್ಲಿ ಕೊಡಗು ಜಿಲ್ಲೆಯ ನೂರಾರು ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಸಮಿತಿಯ ಜಿಲ್ಲಾ ಸಂಚಾಲಕಿ ಗಾಯತ್ರಿ ನರಸಿಂಹ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಬೆಂಗಳೂರು ಚಲೋ ಪ್ರತಿಭಟನೆಯ ಭಿತ್ತಿಪತ್ರ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಎಸ್‌ಸಿಎಸ್‌ಪಿ/ ಟಿಎಸ್‌ಪಿ ಗೆ ಶೇ.೨೪.೧ರಷ್ಟು ಅನುದಾನ ಮೀಸಲಿರಿಸಬೇಕು. ಹಣ ದುರ್ಬಳಕೆ ತಡೆಯಲು ಕಾಯ್ದೆಯ ಸೆಕ್ಷನ್ ೭ (ಸಿ) ರದ್ದುಪಡಿಸಬೇಕು. ಗ್ಯಾರಂಟಿ ಯೋಜನೆಗಳಿಗೆ ವರ್ಗಾಯಿಸಿದ ರೂ.೨೫ ಸಾವಿರ ಕೋಟಿಯನ್ನು ಮರಳಿ ನೀಡಬೇಕು.
ದಲಿತ ಸಂಘರ್ಷ ಸಮಿತಿಯ ಸಂಸ್ಥಾಪಕ ಪ್ರೊ.ಬಿ.ಕೃಷ್ಣಪ್ಪ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಬೇಕು. ಅವರ ಜನ್ಮದಿನ ಜೂ.೯ ಅನ್ನು ರಜಾರಹಿತ ದಿನವನ್ನಾಗಿ ಆಚರಣೆ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಪ್ರತಿಭಟನೆಯ ಸಂದರ್ಭ ಮಂಡಿಸಲಾಗುವುದು ಎಂದರು. ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿನ ನಿವೇಶನ ರಹಿತ ಕುಟುಂಬಗಳಿಗೆ ನಿವೇಶನಗಳನ್ನು ಹಂಚಿಕೆ ಮಾಡಲು ಸರ್ಕಾರ ಖರೀದಿಸುವ ಜಮೀನು ದರ ಅವೈಜ್ಞಾನಿಕವಾಗಿದೆ. ಖಾಸಗಿ ಜಮೀನು ಬೆಲೆ ದುಬಾರಿಯಾಗಿದ್ದು, ವಸತಿ ಇಲಾಖೆ ಹೊರಡಿಸಿರುವ ಆದೇಶವನ್ನು ಪರಿಷ್ಕರಿಸಿ ಭೂಮಿಯ ದರ ಹೆಚ್ಚಿಸಿ ಆದೇಶ ಹೊರಡಿಸಬೇಕು.
ಖಾಲಿ ನಿವೇಶನ(ಖಾಲಿ ಜಾಗ) ಹೊಂದಿರುವ ವಸತಿ ಸೌಲಭ್ಯ ವಂಚಿತರಿಗೆ ವಸತಿ ಮಂಜೂರು ಮಾಡಬೇಕು. ಕಟ್ಟಡ ನಿರ್ಮಾಣ ಸಾಮಾಗ್ರಿಗಳ ದರ ಹೆಚ್ಚಾಗಿರುವುದರಿಂದ ವಸತಿ ನಿರ್ಮಾಣ ವೆಚ್ಚ ಕನಿಷ್ಟ ರೂ.೫ ಲಕ್ಷಕ್ಕೆ ಏರಿಕೆ ಮಾಡಬೇಕು. ಸ್ವಂತ ನಿವೇಶನ ಹೊಂದಿರದ ವಸತಿ ರಹಿತರಿಗಾಗಿ ಸರಕಾರಿ ಭೂಮಿ ಗುರುತಿಸಬೇಕು. ಸರಕಾರಿ ಭೂಮಿ ಲಭ್ಯವಿರದಿದ್ದರೆ ಖಾಸಗಿ ಭೂಮಿ ಖರೀದಿಸಿ ವಸತಿ ಬಡಾವಣೆ ರಚಿಸಿ ವೇಶನ ಹಂಚಿಕೆ ಮಾಡಬೇಕು.
ಇದೂ ಸಾಧ್ಯವಾಗದಿದ್ದಲ್ಲಿ ನಿವೇಶನ ಖರೀದಿಸಲು ಪ್ರತಿ ಕುಟುಂಬಕ್ಕೆ ರೂ.೫ ಲಕ್ಷ ಆರ್ಥಿಕ ನೆರವು ನೀಡಬೇಕು ಎಂದು ಆಗ್ರಹಿಸಿದರು. ಬಗರ್ ಹುಕುಂ ಸಾಗುವಳಿದಾರರು ಸಕ್ರಮಕ್ಕಾಗಿ ಸಲ್ಲಿಸಿರುವ ನಮೂನೆ-೫೭ರ ಅರ್ಜಿಗಳನ್ನು ಸೂಕ್ತ ಕಾರಣವನ್ನು ನೀಡದೆ ಏಕಪಕ್ಷೀಯವಾಗಿ ತಿರಸ್ಕಾರ ಮಾಡುತ್ತಿರುವುದರಿಂದ ಬೇರೆ ಭೂಮಿ ಇಲ್ಲದೆ, ಇದೇ ಭೂಮಿಯಲ್ಲಿ ಸಾಗುವಳಿ ಮಾಡಿ ಉಪ ಜೀವನ ಸಾಗಿಸುತ್ತಿರುವ ಬಡವರನ್ನು ಭೂ ಹಕ್ಕಿನಿಂದ ಒಕ್ಕಲೆಬ್ಬಿಸದೆ ಸಕ್ರಮಗೊಳಿಸಿ ಹಕ್ಕು ಪತ್ರ ನೀಡಬೇಕು. ಪರಿಶಿಷ್ಟ ಜಾತಿ /ಪರಿಶಿಷ್ಟ ವರ್ಗಗಳ ಭೂ ಪರಭಾರೆ ನಿಷೇಧ ಕಾಯ್ದೆಯಲ್ಲಿ ಪ್ರಸ್ತುತ ಬಳಸಿರುವ ಪದವನ್ನು ಬದಲಾಯಿಸಿ ನಿರ್ದಿಷ್ಟ ಜಾಗ ಎಂದು ತಿದ್ದುಪಡಿ ಮಾಡಬೇಕು.
ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಜಾರಿಗೊಳಿಸಿದ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ- ೨೦೨೦ ಅನ್ನು ತಕ್ಷಣ ರದ್ದುಪಡಿಸಬೇಕು ಮತ್ತು ಭಾರತದಿಂದ ವಿದೇಶಗಳಿಗೆ ಆಗುತ್ತಿರುವ ದನ ಮಾಂಸ ರಫ್ತು ನಿಲ್ಲಿಸಬೇಕು ಎಂದು ಪ್ರತಿಭಟನೆಯ ಸಂದರ್ಭ ಒತ್ತಾಯಿಸುವುದಾಗಿ ಗಾಯತ್ರಿ ನರಸಿಂಹ ಮಾಹಿತಿ ನೀಡಿದರು.
ಕೊಡಗು ಜಿಲ್ಲೆಯಲ್ಲಿರುವ ಆದಿವಾಸಿಗಳು ಹೀನಾಯ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದು, ಇವರಿಗೆ ನಿವೇಶನ ಮತ್ತು ವಸತಿ ಸೌಲಭ್ಯ ನೀಡಿ ಸ್ವತಂತ್ರವಾಗಿ ಬದುಕು ಸಾಗಿಸಲು ಅವಕಾಶ ಕಲ್ಪಿಸಬೇಕೆಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಭೋಜ.ಪಿ, ಮಡಿಕೇರಿ ತಾಲ್ಲೂಕು ಮಹಿಳಾ ಸಂಚಾಲಕಿ ಗೌರಮ್ಮ.ಹೆಚ್.ಹೆಚ್, ಪೊನ್ನಂಪೇಟೆ ತಾಲ್ಲೂಕು ಸಂಚಾಲಕ ಗಣೇಶ.ಪಿ.ಜಿ, ಸದಸ್ಯರುಗಳಾದ ನಿತಿನ್.ಪಿ.ಪಿ ಹಾಗೂ ಕಾವೇರಿ.ಪಿ.ಕೆ ಉಪಸ್ಥಿತರಿದ್ದರು.