ಬೆಂಗಳೂರು | ಬ್ರೆಝಿಲ್ ಮೂಲದ ಮಹಿಳೆಗೆ ಲೈಂಗಿಕ ಕಿರುಕುಳ: ಡೆಲಿವರಿ ಬಾಯ್ ಬಂಧನ

Oct 28, 2025 - 20:02
 0  465
ಬೆಂಗಳೂರು | ಬ್ರೆಝಿಲ್ ಮೂಲದ ಮಹಿಳೆಗೆ ಲೈಂಗಿಕ ಕಿರುಕುಳ: ಡೆಲಿವರಿ ಬಾಯ್ ಬಂಧನ

ಬೆಂಗಳೂರು, ಅ.28: ಬ್ರೆಝಿಲ್ ಮೂಲದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಡೆಲಿವರಿ ಬಾಯ್ ಒಬ್ಬನನ್ನು ಆರ್‌.ಟಿ.ನಗರ ಪೊಲೀಸರು ಬಂಧಿಸಿದ್ದಾರೆ.

ಮಾಡೆಲಿಂಗ್ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ 26 ವರ್ಷದ ಬ್ರೆಝಿಲ್ ಮೂಲದ ಮಹಿಳೆ ಸುಮಾರು ಎರಡು ತಿಂಗಳ ಹಿಂದೆ ಉದ್ಯೋಗ ವೀಸಾದಡಿ ಬೆಂಗಳೂರಿಗೆ ಬಂದಿದ್ದರು. ಆರ್‌.ಟಿ.ನಗರದ ಅಪಾರ್ಟ್‌ಮೆಂಟ್‌ನಲ್ಲಿ ಇನ್ನಿಬ್ಬರು ವಿದೇಶಿ ಮಹಿಳೆಯರೊಂದಿಗೆ ವಾಸಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಅಕ್ಟೋಬರ್ 17ರಂದು ಮಹಿಳೆ ಮೊಬೈಲ್ ಆ್ಯಪ್ ಮುಖಾಂತರ ದಿನಸಿ ವಸ್ತುಗಳನ್ನು ಆರ್ಡರ್ ಮಾಡಿದ್ದರು. ಸಂಜೆ ವೇಳೆ ವಸ್ತುಗಳನ್ನು ಡೆಲಿವರಿ ಮಾಡಲು ಬಂದ ಆರೋಪಿ ಕುಮಾರ್ (22) ಮಹಿಳೆಯ ಮನೆಯ ಬಾಗಿಲಿನ ಬಳಿ, ಡೆಲಿವರಿ ನೀಡುವ ವೇಳೆ ಅನುಚಿತವಾಗಿ ವರ್ತಿಸಿ, ದೇಹದ ಭಾಗಗಳಿಗೆ ಸ್ಪರ್ಶಿಸಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಘಟನೆಯ ಬಳಿಕ ಕೆಲವು ದಿನಗಳವರೆಗೆ ಸಂತ್ರಸ್ತೆ ಈ ವಿಷಯವನ್ನು ಯಾರಿಗೂ ಹೇಳಿಕೊಂಡಿರಲಿಲ್ಲ. ಆದರೆ ಇತ್ತೀಚೆಗೆ ತಾನು ಕೆಲಸ ಮಾಡುತ್ತಿದ್ದ ಕಂಪೆನಿಯ ಸಹೋದ್ಯೋಗಿ ಕಾರ್ತಿಕ್ ಅವರಿಗೆ ಘಟನೆ ಕುರಿತು ವಿವರಿಸಿದ ನಂತರ ಅವರು ಪೊಲೀಸರಿಗೆ ದೂರು ನೀಡಲು ಸಹಕರಿಸಿದ್ದರು.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ. ಕೃತ್ಯ ಸಿಸಿಟಿವಿ ದೃಶ್ಯಗಳಲ್ಲಿ ಸೆರೆಯಾಗಿದ್ದು, ವಿಚಾರಣೆಯಲ್ಲಿ ಆರೋಪಿಯು ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ.

“ದೂರು ಸ್ವೀಕರಿಸಿದ ತಕ್ಷಣ ಕ್ರಮ ಕೈಗೊಂಡು ಆರೋಪಿಯನ್ನು ಬಂಧಿಸಲಾಗಿದೆ. ಘಟನೆಯ ಸಂಪೂರ್ಣ ತನಿಖೆ ನಡೆಯುತ್ತಿದೆ,” ಎಂದು ಉತ್ತರ ವಿಭಾಗದ ಉಪಪೊಲೀಸ್ ಆಯುಕ್ತ ಬಿ.ಎಸ್. ನೇಮಗೌಡ ತಿಳಿಸಿದ್ದಾರೆ.

What's Your Reaction?

Like Like 1
Dislike Dislike 0
Love Love 0
Funny Funny 2
Angry Angry 0
Sad Sad 0
Wow Wow 1