Kodagu

ಭಾರತ್ ಜೋಡೋ ಯುವ ಸಂಘಟನೆ: ಸದಸ್ಯತ್ವ ನೋಂದಣಿ ಆರಂಭ

admincoorgdaily

ಭಾರತ್ ಜೋಡೋ ಯುವ ಸಂಘಟನೆ: ಸದಸ್ಯತ್ವ ನೋಂದಣಿ ಆರಂಭ

ಮಡಿಕೇರಿ ಆ.14: ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ 16 ರಿಂದ 35 ವರ್ಷದೊಳಗಿನ ಯುವಕ-ಯುವತಿಯರಿಗೆ ಕರ್ನಾಟಕ ಸರ್ಕಾರದ ಯೋಜನೆಯಾದ ಭಾರತ್ ಜೋಡೊ ಯುವ ಸಂಘಟನೆಯನ್ನು ಸ್ಥಾಪಿಸಲು ಆಗಸ್ಟ್ 6 ರಿಂದ ಸದಸ್ಯತ್ವ ನೋಂದಣಿ ಆರಂಭವಾಗಿದೆ. ಆಸಕ್ತ ಯುವಕ ಮತ್ತು ಯುವತಿಯರು ಆನ್‍ಲೈನ್ bjys.karnataka.gov.in ಮೂಲಕ ನೋಂದಾಯಿಸಿಕೊಳ್ಳಬಹುದು.

ಸಂಘಟನೆಯ ಮೂಲಕ ಕ್ರೀಡೆ ಮತ್ತು ಫಿಟ್ನೆಸ್, ಯುವ ಸಬಲೀಕರಣ, ಕೌಶಲ್ಯಾಭಿವೃದ್ಧಿ, ಸಮುದಾಯ ಅಭಿವೃದ್ಧಿ, ಅರಣ್ಯ ಮತ್ತು ಪರಿಸರ ಸಂರಕ್ಷಣೆ, ಆರೊಗ್ಯ ಮತ್ತು ಯೋಗಕ್ಷೇಮ, ಸಂಸ್ಕೃತಿ ಮತ್ತು ಸಾಮಾಜಿಕ ಸಾಮರಸ್ಯ ಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. ಯುವಕರಲ್ಲಿ ನಾಯಕತ್ವ ಗುಣಗಳನ್ನು ಬೆಳೆಸುವುದು, ಪಟ್ಟಣದ ಸ್ವಚ್ಛತೆ, ಪರಿಸರ ಸಂರಕ್ಷಣೆ ಹಾಗೂ ಸುಂದರ ಪಟ್ಟಣ ನಿರ್ಮಾಣ, ಆರೋಗ್ಯ ಜಾಗೃತಿ, ರಕ್ತದಾನ ಮತ್ತು ಆರೋಗ್ಯ ಶಿಬಿರಗಳನ್ನು ಆಯೋಜಿಸುವುದು, ಕ್ರೀಡೆ, ಸಾಂಸ್ಕೃತಿಕ ಹಾಗೂ ಕಲಾ ಚಟುವಟಿಕೆಗಳಿಗೆ ಉತ್ತೇಜನ ನೀಡುವುದು ಸಂಘಟನೆಯ ಪ್ರಮುಖ ಉದ್ದೇಶಗಳಾಗಿವೆ.

 ಇದರೊಂದಿಗೆ ಡಿಜಿಟಲ್ ಸಾಕ್ಷರತೆ, ಸೈಬರ್ ಜಾಗೃತಿ ಹಾಗೂ ಕೌಶಲ್ಯಾಭಿವೃದ್ಧಿ ಕುರಿತು ಅರಿವು ಮೂಡಿಸುವುದು, ಸರ್ಕಾರಿ ಯೋಜನೆಗಳ ಕುರಿತು ಯುವಜನರಿಗೆ ಮಾಹಿತಿ ನೀಡಿ ಜನರ ಭಾಗವಹಿಸುವಿಕೆಯನ್ನು ಹೆಚ್ಚಿಸುವುದು ಮತ್ತು ಸ್ವಯಂ ಸೇವಾ ಚಟುವಟಿಕೆಗಳು ಹಾಗೂ ವಿಪತ್ತು ನಿರ್ವಹಣೆಯಲ್ಲಿ ಸಹಕರಿಸುವ ಗುರಿ ಹೊಂದಲಾಗಿದೆ. ಸಂಘಟನೆಯಲ್ಲಿ ಅಧ್ಯಕ್ಷರು-1, ಉಪಾಧ್ಯಕ್ಷರು-1 ಖಜಾಂಚಿ-1 ಮತ್ತು ಕಾರ್ಯಕಾರಿ ಸದಸ್ಯರು-12 ಒಳಗೊಂಡಂತೆ ಕನಿಷ್ಠ 100 ಮಂದಿ ಸದಸ್ಯರನ್ನು ಹೊಂದಿರಬೇಕು. ಅಧ್ಯಕ್ಷರು ಅಥವಾ ಉಪಾಧ್ಯಕ್ಷರುಗಳ ಪೈಕಿ ಒಬ್ಬರು ಮಹಿಳೆಯಾಗಿರುವುದು ಕಡ್ಡಾಯವಾಗಿದೆ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ಅವರು ತಿಳಿಸಿದ್ದಾರೆ.