State News

ಅಣ್ಣನ ಜೊತೆ ಮದುವೆ ನಿರಾಕರಿಸಿದ್ದಕ್ಕೆ ತಮ್ಮನಿಂದ ಯುವತಿ ಕೊಲೆ ಕೇಸ್​​ಗೆ ಬಿಗ್​​ ಟ್ವಿಸ್ಟ್​​

admincoorgdaily

ಅಣ್ಣನ ಜೊತೆ ಮದುವೆ ನಿರಾಕರಿಸಿದ್ದಕ್ಕೆ ತಮ್ಮನಿಂದ ಯುವತಿ ಕೊಲೆ ಕೇಸ್​​ಗೆ ಬಿಗ್​​ ಟ್ವಿಸ್ಟ್​​

ಬೆಂಗಳೂರು:ಮದುವೆಗೆ ನಿರಾಕರಿಸಿದ ಕಾರಣಕ್ಕೆ ಯುವತಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದ ಪ್ರಕರಣಕ್ಕೆ ಹೊಸ ಆಯಾಮ ಸಿಕ್ಕಿದೆ. 5 ಲಕ್ಷ ರೂ. ಚೀಟಿ ಹಣದ ವಿಚಾರವೂ ಕೊಲೆಗೆ ಪ್ರಮುಖ ಕಾರಣ ಎಂಬುದು ತನಿಖೆ ವೇಳೆ ಬಯಲಾಗಿದೆ.

ಜು.13ರಂದು ಬೆಂಗಳೂರು HAL ರಸ್ತೆಯ ಕೋಡಿಹಳ್ಳಿಯಲ್ಲಿ ಆರೋಪಿ ಸೂರ್ಯ, ಯುವತಿ ಅಮೃತಾಳ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದ. ಗಂಭೀರ ಗಾಯಗೊಂಡಿದ್ದ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೇ ಜು.15 ರಂದು ಅಮೃತಾ ಮೃತಪಟ್ಟಳು.

ಚೀಟಿ ಹಣವೇ ಮುಖ್ಯ ಕಾರಣ: 

ಮೃತ ಅಮೃತಾಳ ತಾಯಿ ಚೀಟಿ ವ್ಯವಹಾರ ನಡೆಸುತ್ತಿದ್ದರು. ಅಮೃತಾ ಮತ್ತು ಆರೋಪಿ ಸೂರ್ಯನ ಅಣ್ಣ ಧನುಷ್ ಪ್ರೀತಿಸುತ್ತಿದ್ದ ಕಾರಣ, ಧನುಷ್ ಕುಟುಂಬ ಅವರ ತಾಯಿಯ ಬಳಿ ಚೀಟಿ ಹಾಕಿತ್ತು. ಆ ಚೀಟಿಯಲ್ಲಿ ಸೂರ್ಯನೇ ಹೆಚ್ಚಿನ ಕಂತು ಕಟ್ಟಿದ್ದ ಆದರೆ ಚೀಟಿ ಅವಧಿ ಮುಗಿದಿದ್ದರೂ 5 ಲಕ್ಷ ರೂ. ಹಣವನ್ನು ಅಮೃತಾ ಮತ್ತು ಆಕೆಯ ತಾಯಿ ಹಿಂದಿರುಗಿಸಿರಲಿಲ್ಲ. ಹಣ ಕೊಡುವಂತೆ ಪದೇ ಪದೆ ಕೇಳಿದರೂ ನೀಡದಿರುವ ನಡುವೆ, ಅಣ್ಣನ ಮದುವೆ ಪ್ರಸ್ತಾಪಕ್ಕೂ ಅಮೃತಾ ನಿರಾಕರಿಸಿದ್ದಳು.

 ಕೊಲೆಯಾದ ದಿನವೂ ಸೂರ್ಯ ಹಣ ಕೇಳಲು ಹೋಗಿದ್ದ. "ದುಡ್ಡು ನೀಡಲ್ಲ" ಎಂದು ಅಮೃತಾ ಹೇಳಿದ್ದೇ ಆಕೆಯ ಪ್ರಾಣಕ್ಕೆ ಕಂಟಕವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

 ಮೋಸದಿಂದ ಮುರಿದ ಪ್ರೇಮ: ಇವರೆಲ್ಲ ಒಂದೇ ಏರಿಯಾದವರಾಗಿದ್ದು, ಓಂ ಶಕ್ತಿ ಮಾಲೆ ಹಾಕುವ ವೇಳೆ ಎರಡು ಕುಟುಂಬಗಳ ನಡುವೆ ಪರಿಚಯವಾಗಿತ್ತು. ಅದೇ ಪರಿಚಯದಿಂದ ಧನುಷ್ ಮತ್ತು ಅಮೃತಾ ಆತ್ಮೀಯರಾಗಿ ಬಳಿಕ ಪ್ರೀತಿಸಿದ್ದರು. ಆದರೆ ಧನುಷ್‌ಗೆ ಅದಾಗಲೇ ಮದುವೆಯಾಗಿ 1 ಮಗು ಇತ್ತು. ಪತ್ನಿಯಿಂದ ವಿಚ್ಚೇದನ ಪಡೆದಿದ್ದ ವಿಚಾರವನ್ನು ಆತ ಅಮೃತಾಳಿಂದ ಮುಚ್ಚಿಟ್ಟಿದ್ದ. ಈ ವಿಷಯ ಗೊತ್ತಾದ ಬಳಿಕ ಅಮೃತಾ ಧನುಷ್‌ನಿಂದ ದೂರವಾಗಿದ್ದಳು. ಈ ಪ್ರಕರಣದಲ್ಲಿ ಆರೋಪಿ ಸೂರ್ಯನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.