ಆಕಸ್ಮಿಕವಾಗಿ ವಿದ್ಯುತ್ ಪ್ರಹರಿಸಿ ಕಗ್ಗೋಡ್ಲುವಿನಲ್ಲಿ ಬಿಹಾರ ಮೂಲದ ಕಾರ್ಮಿಕ ಸಾವು
admincoorgdaily

ಮಡಿಕೇರಿ, ಮಾ. 10: ವಿದ್ಯುತ್ ಅವಘಡಕ್ಕೆ ಸಿಲುಕಿ ಬಿಹಾರ ಮೂಲದ ಕಾರ್ಮಿಕರೋರ್ವರು ಮೃತಪಟ್ಟಿರುವ ದುರ್ಘಟನೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕಗ್ಗೋಡ್ಲು ಗ್ರಾಮದಲ್ಲಿ ನಡೆದಿದೆ.
ಅಲ್ಲಿನ ನಿವಾಸಿ ಪಾರೆರ ಜಯಂತ್ ಎಂಬವರು ಹೊಸ ಮನೆ ನಿರ್ಮಾಣ ಮಾಡುತ್ತಿದ್ದು, ಇದರ ಕೆಲಸ ನಿರ್ವಹಿಸುತ್ತಿದ್ದ ಬಿಹಾರ ಮೂಲದ ವಿಕಾಸ್ (45) ಎಂಬವರು ಆಕಸ್ಮಿಕವಾಗಿ ವಿದ್ಯುತ್ ಪ್ರಹರಿಸಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.
ಕಳೆದ ಒಂದೂವರೆ ತಿಂಗಳ ಹಿಂದೆ ಇವರು ಕೆಲಸಕ್ಕೆಂದು ಜಿಲ್ಲೆಗೆ ಆಗಮಿಸಿದ್ದರು. ಘಟನೆ ಬಗ್ಗೆ ಮೃತ ವಿಕಾಸ್ ಅವರ ಪತ್ನಿ ನೀಡಿದ ದೂರಿನಂತೆ ಪೊಲೀಸರು ಯು.ಡಿ.ಆರ್. ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಸ್ಥಳಕ್ಕೆ ವೃತ್ತ ನಿರೀಕ್ಷಕ ಚಂದ್ರಶೇಖರ್ ಹಾಗೂ ಸಿಬ್ಬಂದಿ, ಸೆಸ್ಕ್‌ನ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿ ಮಹಜರು ನಡೆಸಿದರು.