"ಡಯಾಲಿಸಿಸ್ ರೋಗಿಗಳಿಗೆ ನೆರವಾಗಲು ಅ.29ರಂದು (ನಾಳೆ) ಬಿರಿಯಾನಿ ಚಾಲೆಂಜ್"
ಮಡಿಕೇರಿ:- ಕಡಿಮೆ ವೆಚ್ಚದಲ್ಲಿ ಡಯಾಲಿಸಿಸ್ ನಡೆಸಿ ಬಡ ರೋಗಿಗಳ ಆಶಾಕಿರಣವಾಗಿರುವ ಸಿದ್ದಾಪುರದ ದಯಾ ರಿಯಾಬ್ಲಿಟೇಷನ್ ಟ್ರಸ್ಟ್, ತಣಲ್ ಸಂಸ್ಥೆಯ ಸಹಯೋಗದೊಂದಿಗೆ ಪ್ರಾರಂಭಿಸಿದ ಡಯಾಲಿಸಿಸ್ ಕೇಂದ್ರವು ಆರ್ಥಿಕ ಸಂಕಷ್ಟದ ನಡುವೆಯೂ ತನ್ನ 7ನೇ ವಸಂತಕ್ಕೆ ಕಾಲಿಟ್ಟಿದೆ. ದಾನಿಗಳ ಸಹಕಾರದೊಂದಿಗೆ ರಿಯಾಯಿತಿ ದರದಲ್ಲಿ ಡಯಾಲಿಸಿಸ್ ನಡೆಸುತ್ತಿರುವ ಸಂಸ್ಥೆ ನಿರ್ಗತಿಕರಿಗೆ ಉಚಿತ ಚಿಕಿತ್ಸೆಯನ್ನು ನೀಡಿ ಸಾರ್ವಜನಿಕ ಪ್ರಶಂಸೆಗೆ ಪಾತ್ರವಾಗಿದ್ದು ಸಂಸ್ಥೆಯು ಇದೀಗ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ.
ದಯಾ ರಿಯಾಬ್ಲಿಟೇಷನ್ ಟ್ರಸ್ಟ್ ಕಳೆದ 6 ವರ್ಷದಲ್ಲಿ ಸುಮಾರು 34 ರೋಗಿಗಳಿಗೆ 8208 ಡಯಾಲಿಸಿಸ್ ಸೇವೆಯನ್ನು ನೀಡಿದ್ದು 7ಮಂದಿ ಬಡ ನಿರ್ಗತಿಕ ರೋಗಿಗಳಿಗೆ ಉಚಿತ ಡಯಾಲಿಸಿಸ್ ಸೇವೆ ನೀಡುತ್ತಿದೆ.
ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದ ಸಂಸ್ಥೆಗೆ ಯುವಕರ ತಂಡವು ಬಿರಿಯಾನಿ ಚಾಲೆಂಜ್ ಎಂಬ ವಿನೂತನ ಕಾರ್ಯಕ್ರಮ ಮಾಡುವ ಮೂಲಕ ಕಳೆದ ಎರಡು ವರ್ಷಗಳಿಂದ ಡಯಾಲಿಸಿಸ್ ಕೇಂದ್ರದ ಉಳಿವಿಗೆ ಕೈ ಜೋಡಿಸಿದ್ದು ಈ ಹಿಂದೆ ಕಾರ್ಯಕ್ರಮ ಮಾಡುವ ಮೂಲಕ ಸಂಸ್ಥೆಯ ಸಾಲ ತೀರಿಸುವುದರೊಂದಿಗೆ ರೋಗಿಯೊಬ್ಬರಿಗೆ ಕನಿಷ್ಠ 500 ರಿಂದ ಗರಿಷ್ಠ 900ರೂಗಳ ಚಿಕಿತ್ಸೆ ವೆಚ್ಚವನ್ನು ಕೇವಲ 500ರೂಗೆ ನೀಡುವ ಮೂಲಕ ನೆರವಾಗಿದೆ.
ಈ ಬಾರಿ ಸುಮಾರು 12ಸಾವಿರ ಬಿರಿಯಾನಿ ಮಾರಾಟ ಮಾಡುವ ಮೂಲಕ, ಹೆಚ್ಚಿನ ಹಣ ಸಂಗ್ರಹಿಸಿ ಮುಂದಿನ ದಿನಗಳಲ್ಲಿ ಉಚಿತವಾಗಿ ಡಯಾಲಿಸಿಸ್ ನೀಡುವ ಯೋಜನೆ ರೂಪಿಸಲಾಗಿದ್ದು ಇದಕ್ಕೆ ಸಿದ್ದಾಪುರ ಭಾಗದಲ್ಲಿ ಸಂಘ-ಸಂಸ್ಥೆಗಳ ಸಹಕಾರ ವ್ಯಕ್ತವಾಗಿದೆ. ಸಿಬ್ಬಂದಿಗಳ ವೇತನ ,ವಿದ್ಯುತ್, ಔಷಧೋಪಚಾರ ಸೇರಿದಂತೆ ಪ್ರತಿ ತಿಂಗಳು ಡಯಾಲಿಸಿಸ್ ಕೇಂದ್ರ ನಿರ್ವಾಹಕಣೆಗೆ 1.75ಲಕ್ಷದಿಂದ 2ಲಕ್ಷ ವೆಚ್ಚ ಬರುತ್ತಿದ್ದು ಪ್ರಸ್ತುತ 5ಲಕ್ಷ ಸಾಲವನ್ನು ಹೊಂದಿದೆ.
ಈಗಾಗಲೇ ಸಿದ್ದಾಪುರ ಹಾಗೂ ನೆಲ್ಲಿಹುದಿಕೇರಿ ಭಾಗದ ಕಾರ್ಗಿಲ್ ಬಾಯ್ಸ್, ನೈಮ,ಹಿರಾ, ಚಾಲಿಯಂ ಬಾಯ್ಸ್,ಯೂತ್ ಹೆಲ್ತ್ ಕೇರ್ ಗೂಡುಗದ್ದೆ, ಮಿಮ್ಸ್, ವಿ ಸೆವೆನ್ ಯುವಕ ಸಂಘ , ಸಿದ್ಧಿವಿನಾಯಕ ಮಿತ್ರ ಮಂಡಳಿ,ರಾಯಲ್ಸ್ ಯುವಕ ಸಂಘ, ವಿನಾಯಕ ಮಿತ್ರ ಮಂಡಳಿ, ಕ್ಲಾಸಿಕ್ ಯುವಕ ಸಂಘ,ಸಿಟಿ ಬಾಯ್ಸ್, ಎಸ್.ಕೆ ಎಸ್ ಎಸ್ ಎಫ್ ಹಾಗೂ ಎಸ್ ಎಸ್ ಎಫ್, ಕೇಸರ್ ಯೂತ್ ಮೂವ್ಮೆಂಟ್, ಸಂಘಟನೆಗಳು ಬಿರಿಯಾನಿ ಚಾಲೆಂಜ್ ಕಾರ್ಯಕ್ರಮಕ್ಕೆ ಕೈ ಜೋಡಿಸಿದ್ದಾರೆ.
ಏನಿದು ಬಿರಿಯಾನಿ ಚಾಲೆಂಜ್?
ಸಂಸ್ಥೆಯ ಆರ್ಥಿಕ ಸಂಕಷ್ಟದಿಂದ ಪಾರುಮಾಡುವ ನಿಟ್ಟಿನಲ್ಲಿ ಬಿರಿಯಾನಿ ಚಾಲೆಂಜ್ ಎಂಬ ವಿನೂತನ ಪ್ರಯೋಗವನ್ನು ಪರಿಚಯಿಸಿದೆ. ದಾನಿಗಳಿಂದ ಬಿರಿಯಾನಿ ತಯಾರಿಕೆಗೆ ಬೇಕಾದ ಅಕ್ಕಿಣ ಮಾಂಸ, ಸೇರಿದಂತೆ ಸಾಂಬಾರು ಪದಾರ್ಥಗಳನ್ನು ಸಂಗ್ರಹಿಸಿ ಬಿರಿಯಾನಿ ತಯಾರಿಸಲಾಗುತ್ತದೆ ನಂತರ ಇದನ್ನು ಸಂಘ ಸಂಸ್ಥೆಗಳು , ಕಛೇರಿಗಳು,ಮನೆಗಳಿಗೆ ಮಾರಾಟ ಮಾಡಿ ಬಂದ ಹಣವನ್ನು ಸಂಸ್ಥೆಗೆ ನೀಡಲಾಗುತ್ತಿದೆ.12 ಸಾವಿರಕ್ಕೂ ಅಧಿಕ ಬಿರಿಯಾನಿ ಮಾರಾಟ ಮಾಡುವ ನಿರೀಕ್ಷೆ ಇದ್ದು,ಒಂದು ಬಿರಿಯಾನಿಗೆ 120 ರೂ ನಿಗದಿಪಡಿಸಲಾಗಿದೆ.ಅಕ್ಟೋಬರ್ 29ರಂದು ಬಿರಿಯಾನಿ ಚಾಲೆಂಜ್ ನಡೆಯಲಿದೆ.
1500 ರಿಂದ 2ಸಾವಿರ ರೂ ವೆಚ್ಚವಾಗುವ ಡಯಾಲಿಸಿಸ್ ಚಿಕಿತ್ಸೆಯನ್ನು, ನಮ್ಮ ಸಂಸ್ಥೆ ಈ ಹಿಂದೆ 900ರೂಗೆ ನೀಡುತ್ತಿದ್ದೆವು.ಇದೀಗ ಚಿಕಿತ್ಸೆಯನ್ನು ಬಿರಿಯಾನಿ ಚಾಲೆಂಜ್ ಏರ್ಪಡಿಸುವ ಮೂಲಕ ಆರ್ಥಿಕ ನೆರವಿನಿಂದಾಗಿ ಪ್ರಸ್ತುತ 500 ರೂಗೆ ನೀಡಲಾಗುತ್ತಿದೆ. ಮಾಸಿಕ 2ಲಕ್ಷದಷ್ಟು ನಿರ್ವಹಣೆ ವೆಚ್ಚವಾಗುತ್ತಿದೆ.ಸಂಸ್ಥೆ ಇದೀಗ ಸಾಲದ ಸುಳಿಯಲ್ಲಿ ಸಿಲುಕಿದೆ. ಈ ಬಾರಿ ಬಿರಿಯಾನಿ ಚಾಲೆಂಜ್ ಮೂಲಕ ಹೆಚ್ಚಿನ ಹಣ ಸಂಗ್ರಹಿಸಿದಲ್ಲಿ ಮುಂದಿನ ದಿನಗಳಲ್ಲಿ ಉಚಿತ ಸೇವೆಯ ಚಿಂತನೆ ಇದೆ.
ನಿತೀಶ್,ದಯಾ ರಿಯಾಬ್ಲಿಟೇಷನ್ ಟ್ರಸ್ಟ್ ನ ವ್ಯವಸ್ಥಾಪಕ