ಶೋಲೇ' ಖ್ಯಾತಿಯ ಬಾಲಿವುಡ್ ನಟ ಧರ್ಮೇಂದ್ರ ನಿಧನ

Nov 24, 2025 - 15:12
 0  722
ಶೋಲೇ' ಖ್ಯಾತಿಯ ಬಾಲಿವುಡ್ ನಟ ಧರ್ಮೇಂದ್ರ ನಿಧನ

ಮುಂಬೈ, ನ.24: ಹಿಂದಿ ಚಿತ್ರರಂಗದ ಹಿರಿಯ ನಟ ಧರ್ಮೇಂದ್ರ (89) ಅವರು ಸೋಮವಾರ ನ.24ರಂದು ತಮ್ಮ ನಿವಾಸದಲ್ಲಿ ವಿಧಿವಶರಾದರು. ಉಸಿರಾಟ ಸಂಬಂಧಿತ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಕಳೆದ ವಾರ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸಿದ ಹಿನ್ನೆಲೆಯಲ್ಲಿ ಕೆಲವು ದಿನಗಳ ಹಿಂದೆ ಆಸ್ಪತ್ರೆಯಿಂದ ಬಿಡುಗಡೆಗೊಳಿಸಿ ಮನೆಗೆ ಕರೆತರಾಗಿತ್ತು. ಮನೆಗೆ ಹಿಂತಿರುಗಿದ ಬಳಿಕ ಆರೋಗ್ಯ ಮತ್ತೊಮ್ಮೆ ಹದಗೆಟ್ಟಿತು ಎಂದು ತಿಳಿದು ಬಂದಿದೆ.

ಆರು ದಶಕಗಳಿಗೂ ಹೆಚ್ಚು ಕಾಲ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಧರ್ಮೇಂದ್ರ ಅವರು 300ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. 1960ರಲ್ಲಿ ‘ದಿಲ್ ಭಿ ತೇರಾ ಹಮ್ ಭಿ ತೇರೆ’ ಚಿತ್ರದ ಮೂಲಕ ಬೆಳ್ಳಿತೆರೆಯಲ್ಲಿ ಮೆರೆದ ಅವರು ‘ಫೂಲ್ ಔರ್ ಪತ್ತರ್’, ‘ಮೇರಾ ಗಾಂವ್ ಮೇರಾ ದೇಶ್’, ‘ಶೋಲೇ’, ‘ಯಾದೋನ್ ಕಿ ಬಾರತ್’, ‘ನೌಕರ್ ಬಿವಿ ಕಾ’ ಸೇರಿದಂತೆ ಅನೇಕ ಜನಪ್ರಿಯ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಮಿಂಚಿದ್ದರು. ಡಿಸೆಂಬರ್ 25ರಂದು ಬಿಡುಗಡೆಯಾಗಲಿರುವ ‘ಇಕ್ಕೀಸ್’ ಅವರ ಅಂತಿಮ ಚಿತ್ರವಾಗಲಿದೆ.

ರಾಜಕೀಯ ಕ್ಷೇತ್ರದಲ್ಲಿಯೂ ಧರ್ಮೇಂದ್ರ ತಮ್ಮ ಗುರುತು ಮೂಡಿಸಿದ್ದರು. 2004ರಿಂದ 2009ರವರೆಗೆ ಅವರು ಬಿಜೆಪಿ ಸಂಸದರಾಗಿದ್ದರು. ಅವರಿಗೆ 2012ರಲ್ಲಿ ಕೇಂದ್ರ ಸರ್ಕಾರವು ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿತ್ತು.

ಪಂಜಾಬ್‌ನ ಲುಧಿಯಾನಾ ಜಿಲ್ಲೆಯಲ್ಲಿ ಧರ್ಮೇಂದ್ರ ಕೇವಲ್ ಕೃಷನ್ ಡಿಯೋಲ್ ಎಂಬ ಹೆಸರಿನಲ್ಲಿ ಜನಿಸಿದ ಅವರು ಮೊದಲ ಪತ್ನಿ ಪ್ರಕಾಶ್ ಕೌರ್. ನಂತರ ನಟಿ ಹೇಮಾ ಮಾಲಿನಿಯನ್ನು ವಿವಾಹವಾಗಿದ್ದರು. ಪತ್ನಿ ಹೇಮಾ ಮಾಲಿನಿ, ಪುತ್ರರು ಸನ್ನಿ ಡಿಯೋಲ್, ಬಾಬಿ ಡಿಯೋಲ್ ಹಾಗೂ ಪುತ್ರಿಯರಾದ ಇಶಾ ಡಿಯೋಲ್, ಅಹಾನಾ ಡಿಯೋಲ್, ಅಜೀತಾ ಮತ್ತು ವಿಜೇತಾ ಅವರನ್ನು ಅಗಲಿದ್ದಾರೆ. 

ಧರ್ಮೇಂದ್ರ ಅವರ ಅಗಲಿಕೆಗೆ ಚಿತ್ರರಂಗದ ಗಣ್ಯರು, ರಾಜಕೀಯ ಮುಖಂಡರು ಮತ್ತು ಅಭಿಮಾನಿಗಳು ಸಂತಾಪ ಸೂಚಿಸಿದ್ದು, ಹಿಂದಿ ಸಿನೆಮಾದ ಒಂದು ಪ್ರಮುಖ ಅಧ್ಯಾಯ ಮುಕ್ತಾಯಗೊಂಡಂತೆಯಾಗಿದೆ.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 2
Wow Wow 0