Kodagu

ಕೊಡಗರಹಳ್ಳಿಯಲ್ಲಿ ಸ್ತನ್ಯಪಾನ ಸಪ್ತಾಹ ಹಾಗೂ ಅಕ್ಕಪಡೆ ಕುರಿತು ಜಾಗೃತಿ ಕಾರ್ಯಕ್ರಮ

admincoorgdaily

ಕೊಡಗರಹಳ್ಳಿಯಲ್ಲಿ ಸ್ತನ್ಯಪಾನ ಸಪ್ತಾಹ ಹಾಗೂ ಅಕ್ಕಪಡೆ ಕುರಿತು ಜಾಗೃತಿ ಕಾರ್ಯಕ್ರಮ

ಮಡಿಕೇರಿ ಆ.07:-ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಕೊಡಗರಹಳ್ಳಿ ಅಂಗನವಾಡಿ ಕೇಂದ್ರದಲ್ಲಿ ತಾಯಿಯ ಎದೆಹಾಲಿನ ಮಹತ್ವ ಹಾಗೂ ಮಹಿಳಾ ಮತ್ತು ಮಕ್ಕಳ ಸುರಕ್ಷತೆ ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು.

 ಕಾರ್ಯಕ್ರಮವನ್ನು ಶಿಶು ಅಭಿವೃದ್ಧಿ ಯೋಜನಾ ಕಚೇರಿ, ಸೋಮವಾರಪೇಟೆಯ ಮೇಲ್ವಿಚಾರಕಿ ಸಾವಿತ್ರವ್ವ ಉದ್ಘಾಟಿಸಿ ಮಾತನಾಡಿ, ತಾಯಿಯ ಎದೆಹಾಲಿನ ಮಹತ್ವ, ಮಗುವಿನ ಪೋಷಣೆಯ ಸರಿಯಾದ ವಿಧಾನ ಹಾಗೂ ಜನನದಿಂದ ಆರು ತಿಂಗಳವರೆಗೆ ಮಗುವಿನ ಬೆಳವಣಿಗೆ ಅತ್ಯಂತ ವೇಗವಾಗಿ ನಡೆಯುವುದರಿಂದ ಈ ಅವಧಿಯಲ್ಲಿ ಮಗು ತಾಯಿಯ ಚಲನವಲನ ಗಮನಿಸಿ ಕಲಿಯುತ್ತದೆ ಎಂದು ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜೆಂಡರ್ ಸ್ಪೆಷಲಿಸ್ಟ್ ಎಸ್.ಆರ್.ಕೇಶಿನಿ ಮಾತನಾಡಿ, ಮಹಿಳೆಯರ ಸಬಲೀಕರಣ ಹಾಗೂ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗಾಗಿ ರಾಜ್ಯ ಸರ್ಕಾರ ಜಾರಿಗೊಳಿಸಿರುವ 'ಅಕ್ಕ ಪಡೆ' ಯೋಜನೆಯ ಕುರಿತು ಮಾಹಿತಿ ನೀಡಿದರು. ಮಹಿಳಾ ಸಿಬ್ಬಂದಿ ಹಾಗೂ ಗೃಹರಕ್ಷಕರನ್ನು ಒಳಗೊಂಡಿರುವ ಈ ವಿಶೇಷ ಗಸ್ತು ದಳವು ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು. ಇದೇ ವೇಳೆ 181 ಮಹಿಳಾ ಸಹಾಯವಾಣಿ, 112 ತುರ್ತು ಸೇವೆ ಹಾಗೂ 1098 ಮಕ್ಕಳ ಸಹಾಯವಾಣಿ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಿದರು.

ಕೊಡಗರಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ಸುಮಾ ಮಾತನಾಡಿ, ತಾಯಿಯ ಎದೆಹಾಲಿನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿದ್ದು, ಅದು ಮಗುವಿನ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.

ಸಮುದಾಯ ಆರೋಗ್ಯಾಧಿಕಾರಿ ಮಾತನಾಡಿ ಜನನದ ಮೊದಲ ಆರು ತಿಂಗಳು ಮಗುವಿಗೆ ಕೇವಲ ತಾಯಿಯ ಎದೆಹಾಲನ್ನೇ ನೀಡುವುದು ಅತ್ಯಂತ ಅವಶ್ಯಕ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಅಕ್ಕ ಪಡೆ ಸಿಬ್ಬಂದಿಗಳಾದ ಹರೀಶ್, ಶೋಭ ಮತ್ತು ಚಾಂದಿನಿ, ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ಯಶೋದ, ಅಂಗನವಾಡಿ ಕಾರ್ಯಕರ್ತೆ ಸಾವಿತ್ರಿ, ಅಂಗನವಾಡಿ ಸಹಾಯಕಿ ಸಂಧ್ಯಾ, ಆಶಾ ಕಾರ್ಯಕರ್ತೆ ಕವಿತಾ, ಮಕ್ಕಳ ತಾಯಂದಿರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.