ಸ್ತನ್ಯಪಾನದಿಂದ ಮಗುವಿನ ಮೆದುಳಿನ ಬೆಳವಣಿಗೆಗೆ ಸಹಕಾರಿ; ಡಾ.ನಂಜುಂಡಯ್ಯ

Aug 6, 2026 - 18:13
 0  24
ಸ್ತನ್ಯಪಾನದಿಂದ ಮಗುವಿನ ಮೆದುಳಿನ ಬೆಳವಣಿಗೆಗೆ ಸಹಕಾರಿ; ಡಾ.ನಂಜುಂಡಯ್ಯ

ಮಡಿಕೇರಿ ಆ.06:-ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಬೋಧಕ ಆಸ್ಪತ್ರೆ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮವು ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಬೋಧಕ ಆಸ್ಪತ್ರೆಯ ಮಕ್ಕಳ ಹೊರ ರೋಗಿ ವಿಭಾಗದಲ್ಲಿ ಗುರುವಾರ ನಡೆಯಿತು. 

 ಕಾರ್ಯಕ್ರಮದ ಉದ್ಘಾಟನೆಯನ್ನು ಡೀನ್ ಮತ್ತು ಡೈರೆಕ್ಟರ್ ಡಾ.ಲೋಕೇಶ್ ಅವರು ಮತ್ತು ವೇದಿಕೆಯ ಗಣ್ಯರು ಗಿಡಕ್ಕೆ ನೀರು ಎರೆಯುವ ಮೂಲಕ ನೆರವೇರಿಸಿದರು. 

ಸಮುದಾಯ ವೈದ್ಯಶಾಸ್ತ್ರ ವಿಭಾಗದ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರಾದ ಡಾ.ರಾಮಚಂದ್ರ ಕಾಮತ್ ಅವರು, ತಾಯಿಯ ಹಾಲು ಅತ್ಯುತ್ತಮ ಸಂಪೂರ್ಣ ಪೌಷ್ಟಿಕ ಆಹಾರ ಜೀವನದ ಸುಸ್ಥಿರ ಆರಂಭವೂ ಆಗಿದೆ. ಅತಿಸಾರ ನಿಮೋನಿಯಾ ಕಿವಿಯ ಸೋಂಕು ಮತ್ತು ಅಲರ್ಜಿಗಳನ್ನು ತಡೆಗಟ್ಟುವ ಶಕ್ತಿ ತಾಯಿಯ ಹಾಲಿನಲ್ಲಿದೆ. ಹೆರಿಗೆಯಾದ ತಕ್ಷಣ ತಾಯಿ ಹಾಲು ಕುಡಿಸುವುದರಿಂದ ರಕ್ತಶ್ರಾವ ತಡೆಗಟ್ಟಲು, ಗರ್ಭಕೋಶ ಸಾಮಾನ್ಯ ಗಾತ್ರಕ್ಕೆ ಮರಳಲು, ಖಿನ್ನತೆ ನಿವಾರಿಸಲು ಸಹಕರಿಸುತ್ತದೆ ಎಂದು ಪ್ರಾಸ್ತಾವಿಕ ನುಡಿ ಆಡಿದರು. 

ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ.ನಂಜುಂಡಯ್ಯ ಅವರು ಸ್ತನ್ಯಪಾನದಿಂದ ಮಗುವಿನ ಮೆದುಳಿನ ಬೆಳವಣಿಗೆಗೆ ಸಹಕಾರಿ ಆಗಲಿದೆ. ಜೊತೆಗೆ ಅಪೌಷ್ಟಿಕತೆ ತಡೆಯಲು ಸಹಕಾರಿ, ಸ್ತನ ಮತ್ತು ಅಂಡಾಶಯ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಬಹುದು ಎಂದು ಮಾಹಿತಿ ನೀಡಿದರು. 

ಸ್ಥಾನೀಯ ವೈದ್ಯಾಧಿಕಾರಿ ಡಾ.ಧನಂಜಯ ಅವರು ತಾಯಿಯ ಎದೆ ಹಾಲು ತಾಯಿ ಮಗುವಿನ ಬಾಂಧವ್ಯ ಹೆಚ್ಚಿಸುತ್ತದೆ. ತಾಯಿ ಹಾಲಿನ ಕೊರತೆ ಆದಲ್ಲಿ ಮಕ್ಕಳ ಬೆಳವಣಿಗೆಯ ಸಾಧ್ಯತೆ ಉಂಟಾಗುತ್ತದೆ ಎಂಬ ಮಾಹಿತಿ ನೀಡಿದರು.

ಮಕ್ಕಳ ತಜ್ಞರಾದ ಡಾ.ದಿವ್ಯರಾಣಿ ಅವರು ಸ್ಲೈಡ್‍ಗಳ ಮೂಲಕ ಚಿತ್ರ ಸಹಿತ ಎದೆ ಹಾಲಿನ ಮಹತ್ವದ ಬಗ್ಗೆ, ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡೀನ್ ಮತ್ತು ಡೈರೆಕ್ಟರ್ ಡಾ.ಲೋಕೇಶ್ ಅವರು ತಾಯಿ ಹಾಲು ಮಗುವಿನ ಮೊದಲ ಹಕ್ಕು, ಮೊದಲ ಲಸಿಕೆ, ಮತ್ತು ಮೊದಲ ಆಹಾರ, ಹೆರಿಗೆಯ ತಕ್ಷಣ ಪ್ರತಿ ತಾಯಿಯು ಸ್ತನ್ಯ ಪಾನ ಮಾಡಿಸಲು, ಕುಟುಂಬ ಸಮಾಜ ಮತ್ತು ಕೆಲಸದ ಸ್ಥಳದಲ್ಲಿ ಅಗತ್ಯ ಬೆಂಬಲ ನೀಡಬೇಕು. ಇದಕ್ಕೆ ಎಲ್ಲರೂ ಬೆಂಬಲಿಸೋಣ ಎಂದರು. 

ಸ್ತನ್ಯಪಾನ ಸಪ್ತಾಹದ ಅಂಗವಾಗಿ ವೈದ್ಯಕೀಯ ವಿದ್ಯಾರ್ಥಿಗಳು ಪ್ರಬಂಧ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ರಂಗೋಲಿ ಸ್ಪರ್ಧೆ, ರೇಖಾಚಿತ್ರ ಸ್ಪರ್ಧೆಯಲ್ಲಿ ಪಾಲ್ಗೊಂಡು ವಿಜೇತ ವಿದ್ಯಾರ್ಥಿಗಳು ವೇದಿಕೆಯ ಗಣ್ಯರಿಂದ ಪ್ರಶಸ್ತಿ ಪತ್ರ ಮತ್ತು ಬಹುಮಾನ ವಿತರಿಸಲಾಯಿತು. 

ಕಾರ್ಯಕ್ರಮದ ಬಗ್ಗೆ ಹಾಲುಣಿಸುವ ತಾಯಿ ಪವಿತ್ರ ಅವರು ತಮ್ಮ ಅಭಿಪ್ರಾಯವನ್ನು ಸುಲಲಿತವಾಗಿ ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಮಕ್ಕಳ ವಿಭಾಗದ ಮುಖ್ಯಸ್ಥರಾದ ಡಾ.ಪುರುಷೋತ್ತಮ, ಮಕ್ಕಳ ತಜ್ಞ ವೈದ್ಯರಾದ ಡಾ.ರವಿಚಂದ್ರ, ಡಾ.ಕುಮಾರ್, ಡಾ.ಸಲ್ಮಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿಯ ಆರ್‍ಸಿಎಚ್ ವಿಭಾಗ ಮತ್ತು ಐಇಸಿ ವಿಭಾಗದ ಸಿಬ್ಬಂದಿ ವರ್ಗದವರು, ವೈದ್ಯಕೀಯ ವಿದ್ಯಾರ್ಥಿಗಳು ಪೆÇೀಷಕರು ಸಾರ್ವಜನಿಕರು ಪಾಲ್ಗೊಂಡಿದ್ದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಚ್.ಕೆ.ಶಾಂತಿ ಅವರು ನಿರೂಪಿಸಿ, ವಂದಿಸಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0