ಕನಿಷ್ಠ ವೇತನ ಜಾರಿಗೆ ಆಗ್ರಹ: ಸಿಐಟಿಯು ನೇತೃತ್ವದಲ್ಲಿ ತೋಟ ಕಾರ್ಮಿಕರ ರಾಜ್ಯ ಮಟ್ಟದ ಕಾರ್ಯಾಗಾರ
ವಿರಾಜಪೇಟೆ:ಕಾರ್ಮಿಕರಿಗೆ ಕನಿಷ್ಠ ಕೂಲಿ ನೀಡಲು ಸಾಧ್ಯವಿಲ್ಲದಿದ್ದರೆ ಮಾಲೀಕರು ಉದ್ಯಮವನ್ನೇ ನಡೆಸಬಾರದು ಎಂಬುದು ದೇಶದ ಕಾನೂನು."ಆದರೂ ತೋಟಗಳ ಮಾಲೀಕರು ಮತ್ತುಅವರ ಬೆಂಬಲದಿಂದ ಗೆದ್ದ ಜನಪ್ರತಿನಿಧಿಗಳು ಕಾನೂನನ್ನು ಬಹಿರಂಗವಾಗಿ ಉಲ್ಲಂಘಿಸುತ್ತಿದ್ದಾರೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ವರಲಕ್ಷ್ಮಿ ಅಪಾದಿಸಿದರು.
ಸಿದ್ದಾಪುರದ ಗುಹ್ಯ ಅಗಸ್ತೇಶ್ವರ ಸಹಕಾರ ಸಂಘ ಭವನದಲ್ಲಿ ನಡೆದ ತೋಟ ಕಾರ್ಮಿಕರ ಸಂಘಟನೆಯ ರಾಜ್ಯ ಮಟ್ಟದ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕನಿಷ್ಠ ವೇತನ ಜಾರಿಗೆ ಆಗ್ರಹಿಸಿ ಸೆಪ್ಟೆಂಬರ್ 8 ರ ರಾಜ್ಯಮಟ್ಟದ ಹೋರಾಟದ ಜೊತೆಗೆ ಸೆಪ್ಟೆಂಬರ್ 18 ರಿಂದ 21 ರವರೆಗೆ ನಾಲ್ಕು ದಿನಗಳ ಕಾಲ ಬೆಂಗಳೂರಿನ ಫ್ರೀಡಂಪಾರ್ಕ್ನಲ್ಲಿ ತೀವ್ರ ಸ್ವರೂಪದ ಧರಣಿ ನಡೆಸಲಿದೆ. ಕರ್ನಾಟಕವು ಕಾಫಿ ರಫ್ತಿನಲ್ಲಿ ದೇಶದಲ್ಲೇ ಎರಡನೇ ಸ್ಥಾನದಲ್ಲಿದ್ದು, ಸಾವಿರಾರು ಕಾರ್ಮಿಕರ ಶ್ರಮದಿಂದ ಎಸ್ಟೇಟ್ ಮಾಲೀಕರು ಶತಕೋಟಿ ಸಂಪತ್ತು ಗಳಿಸುತ್ತಿದ್ದಾರೆ. ಆದರೆ, ಹಾಸನ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳ ಜನಪ್ರತಿನಿಧಿಗಳು ಹಾಗೂ ಎಸ್ಟೇಟ್ ಮಾಲೀಕರು ಸೇರಿ ಪ್ಲಾಂಟೇಶನ್ ಹಾಗೂ ರಬ್ಬರ್ ಎಸ್ಟೇಟ್ಕಾರ್ಮಿಕರನ್ನು ಸರಕಾರದ ಕನಿಷ್ಠ ವೇತನದ ಅಧಿಸೂಚನೆ ವ್ಯಾಪ್ತಿಯಿಂದ ಹೊರಗಿಡುವ ತಂತ್ರ ರೂಪಿಸಿದ್ದಾರೆ ಎಂದು ಆರೋಪಿಸಿದರು.
ಕನಿಷ್ಠ ವೇತನವನ್ನು ತಡೆಹಿಡಿಯಲು ಸರ್ಕಾರ ರಚಿಸಿರುವ ಸಮಿತಿಗೆ ಹಿತಾಸಕ್ತಿ ಸಂಘರ್ಷವಿರುವವರನ್ನೇ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಇದು "ತೋಳಕ್ಕೆ ಕುರಿ ಕಾಯಲು ಕೊಟ್ಟಂತೆ"ಆಗಿದೆ. ಈ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರವು 1.77 ಕೋಟಿ ಕಾರ್ಮಿಕ ಕುಟುಂಬಗಳ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ.
ನಿಯಮಗಳ ಪ್ರಕಾರ ಪ್ರತಿ 5 ವರ್ಷಕ್ಕೊಮ್ಮೆ ಕನಿಷ್ಠ ವೇತನ ಪರಿಷ್ಕರಣೆಯಾಗಬೇಕು. ಆದರೆ ಕಳೆದ 8 ವರ್ಷಗಳಿಂದ ಸರ್ಕಾರ ಇದನ್ನು ಪರಿಷ್ಕರಿಸಿಲ್ಲ. ಒಬ್ಬ ಕಾರ್ಮಿಕ ಹಾಗೂ ಆತನ ಕುಟುಂಬದ ಸದಸ್ಯರಿಗೆ ದಿನಕ್ಕೆ 2,700 ಕ್ಯಾಲೋರಿ ಆಹಾರ, ಮನೆ ಬಾಡಿಗೆ, ಶಿಕ್ಷಣ, ವೈದ್ಯಕೀಯ, ವಿದ್ಯುತ್ ಹಾಗೂ ಮನರಂಜನಾ ವೆಚ್ಚಗಳನ್ನು ಸೇರಿಸಿ ವೈಜ್ಞಾನಿಕವಾಗಿ ಕನಿಷ್ಠ ವೇತನ ನಿಗದಿಯಾಗಬೇಕು ಎಂದು ಹೈಕೋರ್ಟ್ನಲ್ಲೂ ವಾದ ಮಂಡಿಸಲಾಗಿದೆ. ಸರ್ಕಾರ ಮತ್ತು ಮಾಲೀಕರ ಈ ಧೋರಣೆಯನ್ನು ವಿರೋಧಿಸಿ ಸೆಪ್ಟೆಂಬರ್ 18, 19, 20 ಮತ್ತು 21 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಅಹೋರಾತ್ರಿ ಧರಣಿ ನಡೆಯಲಿದೆ. ಈ ಹೋರಾಟದಲ್ಲಿ ಪ್ಲಾಂಟೇಶನ್ ಕಾರ್ಮಿಕರು, ಅಂಗನವಾಡಿ, ಬಿಸಿಯೂಟ, ಗ್ರಾಮ ಪಂಚಾಯತಿ, ಬೀಡಿ, ಕೈಗಾರಿಕೆ ಹಾಗೂ ಗುತ್ತಿಗೆ/ಹೊರಗುತ್ತಿಗೆ ನೌಕರರು ತಮ್ಮ ಕೆಲಸ ಸ್ಥಗಿತಗೊಳಿಸಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕರೆ ನೀಡಿದರು.
ಸಿಐಟಿಯು ಕೊಡಗು ಜಿಲ್ಲಾ ಅಧ್ಯಕ್ಷ ಎ.ಸಿ. ಸಾಬು ಮಾತನಾಡಿ, ದೇಶವು 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುವ ಈ ಸಂದರ್ಭದಲ್ಲೂ ಕೊಡಗು ಸೇರಿದಂತೆ ಕರ್ನಾಟಕದ ತೋಟ ಕಾರ್ಮಿಕರು ತಮ್ಮ ಹಕ್ಕುಗಳಿಗಾಗಿ ರಾಜ್ಯ ಸರಕಾರದ ಮುಂದೆ ಕೈಚಾಚುವ ದಯನೀಯ ಪರಿಸ್ಥಿತಿ ನಿರ್ಮಾಣವಾಗಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು ದಶಕಗಳೇ ಕಳೆದರೂ ತೋಟ ಕಾರ್ಮಿಕರಿಗೆ ಇಂದಿಗೂ ಕನಿಷ್ಠ ವೇತನ ಜಾರಿಯಾಗಿಲ್ಲ. ವಸತಿ (ಸೂರು) ಇಲ್ಲದೆ, ಸೂಕ್ತ ಕೂಲಿಯೂ ಸಿಗದೆ ಕಾರ್ಮಿಕರು ತೀವ್ರ ಸಂಕಷ್ಟದಲ್ಲಿದ್ದಾರೆ. ಶ್ರಮಿಕರ ಸಮಸ್ಯೆಗಳ ಬಗ್ಗೆ ಸರಕಾರಗಳು ಯಾವುದೇ ಸ್ಪಷ್ಟ ನಿಲುವು ತಳೆಯುತ್ತಿಲ್ಲ ಹಾಗೂ ಕಾರ್ಮಿಕರ ಹಿತರಕ್ಷಣೆಗೆ ಮುಂದಾಗುತ್ತಿಲ್ಲ ಎಂದರು.
ಈ ಎಲ್ಲಾ ಶೋಷಣೆ ಮತ್ತು ನಿರ್ಲಕ್ಷ÷್ಯವನ್ನು ವಿರೋಧಿಸಿ ಸಿಐಟಿಯ ನೇತೃತ್ವದಲ್ಲಿ ಮುಂದಿನ ತಿಂಗಳು 8ನೇ ತಾರೀಖಿನಂದು ರಾಜ್ಯಮಟ್ಟದ ಬೃಹತ್ ಹೋರಾಟವನ್ನು ಹಮ್ಮಿಕೊಳ್ಳಲಾಗಿದ್ದು, ಈ ಬೃಹತ್ ಹೋರಾಟವನ್ನು ಯಶಸ್ವಿಗೊಳಿಸಲು ಮೂರೂ ಜಿಲ್ಲೆಗಳ ತೋಟ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕಾರ್ಯಗಾರದ ಮುಖಾಂತರ ಮನವಿ ಮಾಡಿದರು.
ರಾಜ್ಯ ತೋಟ ಕಾರ್ಮಿಕರ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಮಹಾದೇವ ಮಾತನಾಡಿ, ಕೊಡಗು ಸೇರಿದಂತೆ ಪ್ಲಾಂಟೇಶನ್ ವಲಯದಲ್ಲಿ ದುಡಿಯುತ್ತಿರುವ ಕಾರ್ಮಿಕರ ನಡುವೆ ಎಸ್ಟೇಟ್ ಮಾಲೀಕರು ತಾರತಮ್ಯ ಎಸಗುತ್ತಿದ್ದು, ಕಾನೂನು ಬದ್ಧವಾಗಿ ಸಿಗಬೇಕಾದ ಕನಿಷ್ಠ ವೇತನದಿಂದ ಶ್ರಮಿಕರನ್ನು ವಂಚಿಸಲಾಗುತ್ತಿದೆ. ಇತ್ತೀಚೆಗೆ ಅಸ್ಸಾಂ, ಜಾರ್ಖಂಡ್ ಮುಂತಾದ ರಾಜ್ಯಗಳಿಂದ ಬಂದಿರುವ ಹೊಸ ಕಾರ್ಮಿಕರನ್ನು ಒಂದು ರೀತಿಯಲ್ಲಿ ಹಾಗೂ ಎಸ್ಟೇಟ್‌ಗಳಲ್ಲಿ ನಿರಂತರವಾಗಿ ಉತ್ಪಾದನೆ ಹೆಚ್ಚಿಸಿ ಮಾಲೀಕರಿಗೆ ಲಾಭ ತಂದು ಕೊಡುವ ಸ್ಥಳೀಯ ಕಾರ್ಮಿಕರನ್ನು ಇನ್ನೊಂದು ರೀತಿಯಲ್ಲಿ ನೋಡುವ ಮೂಲಕ ಮಾಲೀಕರು ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ.
ತೋಟಗಳಲ್ಲಿ ರಾತ್ರಿ-ಹಗಲೆನ್ನದೆ ಶ್ರಮಿಸುವ ಆದಿವಾಸಿ ಕಾರ್ಮಿಕರಿಗೆ ಕಡಿಮೆ ಕೂಲಿ ನೀಡಲಾಗುತ್ತಿದ್ದು, ಇದು ಕಾನೂನಿನ ತೀವ್ರ ಉಲ್ಲಂಘನೆಯಾಗಿದೆ.
ಕಾರ್ಮಿಕ ಕಾಯ್ದೆಯ ಪ್ರಕಾರ 12.5 ಎಕರೆಗಿಂತ ಮೇಲ್ಪಟ್ಟ ಜಮೀನು/ಎಸ್ಟೇಟ್ ಹೊಂದಿರುವ ಪ್ರತಿಯೊಬ್ಬ ಮಾಲೀಕರು ಕಡ್ಡಾಯವಾಗಿ ಕಾರ್ಮಿಕ ಕಾಯ್ದೆಯಡಿ ಬರುತ್ತವೆ. ಕೊಡಗು ಜಿಲ್ಲೆಯ ಚಿಕ್ಕಪುಟ್ಟ ರೈತರ ಬಗ್ಗೆ ಸಂಘಟನೆಗೆ ಯಾವುದೇ ಆಕ್ಷೇಪವಿಲ್ಲ, ಆದರೆ 12.5 ಎಕರೆಗಿಂತ ಹೆಚ್ಚು ಜಮೀನು ಹೊಂದಿರುವ ದೊಡ್ಡ ಬೆಳೆಗಾರರು ನಿಯಮಾನುಸಾರ ಎಲ್ಲ ಕಾರ್ಮಿಕರಿಗೆ ಕನಿಷ್ಠವೇತನ ನೀಡಲೇಬೇಕು ಎಂದು ಆಗ್ರಹಿಸಿ ಮಾತನಾಡಿದರು.
ಸಿಐಟಿಯು ರಾಜ್ಯ ಉಪಾಧ್ಯಕ್ಷ ಧರ್ಮೇಶ್ ಕಾರ್ಯಾಗಾರ ಉದ್ದೇಶಿಸಿ ಮಾತನಾಡಿದರು. ವೇದಿಕೆಯಲ್ಲಿ ತೋಟ ಕಾರ್ಮಿಕ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಎನ್.ಡಿ.ಕುಟ್ಟಪ್ಪ, ಕರ್ಯದರ್ಶಿ ಸೌಮ್ಯ, ಸದಸ್ಯರಾದ ಟಿ ರಮೇಶ್ ಸೇರಿದಂತೆ ಇತರರು ಇದ್ದರು.
ಕಾರ್ಯಾಗಾರದಲ್ಲಿ ವಿವಿಧ ಸಂಘಟನೆಯ ಸದಸ್ಯರು, ಕಾರ್ಮಿಕರು ಭಾಗವಹಿಸಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
