Kodagu

ಹೆಬ್ಬಾಲೆ ಸರ್ಕಾರಿ ಶಾಲೆಗೆ ಸಿಎಂ ವಿಶೇಷ ಅನುದಾನ: ಗ್ಯಾಲರಿ-ರಂಗಮಂದಿರಕ್ಕೆ 20 ಲಕ್ಷ ರೂ

admincoorgdaily

ಹೆಬ್ಬಾಲೆ ಸರ್ಕಾರಿ ಶಾಲೆಗೆ ಸಿಎಂ ವಿಶೇಷ ಅನುದಾನ: ಗ್ಯಾಲರಿ-ರಂಗಮಂದಿರಕ್ಕೆ 20 ಲಕ್ಷ ರೂ

ಕುಶಾಲನಗರ, ಜೂನ್ 29: ಮುಖ್ಯಮಂತ್ರಿ ವಿಶೇಷ ಅನುದಾನದಡಿ ಕುಶಾಲನಗರ ತಾಲ್ಲೂಕಿನ ಹೆಬ್ಬಾಲೆ ಸರ್ಕಾರಿ ಪ್ರೌಢಶಾಲೆಯಲ್ಲಿ ಗ್ಯಾಲರಿ ಹಾಗೂ ಮಿನಿ ರಂಗಮಂದಿರ ನಿರ್ಮಾಣಕ್ಕೆ 20 ಲಕ್ಷ ರೂ. ಅನುದಾನ ಮಂಜೂರಾಗಿದೆ ಎಂದು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ತಿಳಿಸಿದ್ದಾರೆ.

 ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿ ಹಾಗೂ ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಒತ್ತು ನೀಡುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳಿಗೆ ಶಿಫಾರಸು ಮಾಡಲಾಗಿತ್ತು. ಅದರಂತೆ ಈ ಅನುದಾನ ಬಿಡುಗಡೆಯಾಗಿದೆ ಎಂದು ಅವರು ಹೇಳಿದರು. ಹೆಬ್ಬಾಲೆ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಆಧುನಿಕ ಸೌಲಭ್ಯಗಳೊಂದಿಗೆ ತೆರೆದ ಗ್ಯಾಲರಿ ಹಾಗೂ ಮಿನಿ ರಂಗಮಂದಿರ ನಿರ್ಮಾಣವಾಗಲಿದೆ.

ಇದರಿಂದ ಶಾಲಾ ವಾರ್ಷಿಕೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮ, ವಿಚಾರ ಸಂಕಿರಣ, ಕ್ರೀಡಾ ಚಟುವಟಿಕೆಗಳಿಗೆ ವೇದಿಕೆ ಲಭ್ಯವಾಗಲಿದೆ. "ಗ್ರಾಮೀಣ ಮಕ್ಕಳಿಗೆ ನಗರದ ಮಕ್ಕಳಿಗೆ ಸರಿಸಮನಾದ ವೇದಿಕೆ ಕಲ್ಪಿಸುವುದು ನನ್ನ ಆದ್ಯತೆ. ಮುಖ್ಯಮಂತ್ರಿಗಳ ವಿಶೇಷ ಕಾಳಜಿಯಿಂದ ಈ ಅನುದಾನ ದೊರೆತಿದೆ. ಶೀಘ್ರದಲ್ಲೇ ಕಾಮಗಾರಿ ಆರಂಭಿಸಿ, ಗುಣಮಟ್ಟದಿಂದ ಪೂರ್ಣಗೊಳಿಸಲಾಗುವುದು. ಎಸ್‌ಡಿಎಂಸಿ ಹಾಗೂ ಶಿಕ್ಷಕರ ಸಹಕಾರ ಅಗತ್ಯ" ಎಂದು ಶಾಸಕ ಡಾ. ಮಂತರ್ ಗೌಡ ತಿಳಿಸಿದರು.

ಅನುದಾನ ಮಂಜೂರಾದ ಸುದ್ದಿ ತಿಳಿಯುತ್ತಿದ್ದಂತೆ ಹೆಬ್ಬಾಲೆ ಗ್ರಾಮಸ್ಥರು, ಎಸ್‌ಡಿಎಂಸಿ ಸದಸ್ಯರು ಹಾಗೂ ಶಾಲಾ ಶಿಕ್ಷಕ ವೃಂದ ಹರ್ಷ ವ್ಯಕ್ತಪಡಿಸಿ, ಮುಖ್ಯಮಂತ್ರಿ ಹಾಗೂ ಶಾಸಕರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.