ಸಿಎನ್‌ಸಿ ವತಿಯಿಂದ 31ನೇ ವರ್ಷದ ಸಂಭ್ರಮದ ಕಕ್ಕಡ ಪದ್ನೆಟ್ ಆಚರಣೆ

Aug 3, 2026 - 13:47
 0  113
ಸಿಎನ್‌ಸಿ ವತಿಯಿಂದ 31ನೇ ವರ್ಷದ ಸಂಭ್ರಮದ ಕಕ್ಕಡ ಪದ್ನೆಟ್ ಆಚರಣೆ

ಮಡಿಕೇರಿ ಆ.2 : ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ವತಿಯಿಂದ 31ನೇ ವರ್ಷದ ಕೊಡವ ಸಾಂಪ್ರದಾಯಿಕ “ಕಕ್ಕಡ ಪದ್ನೆಟ್” ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಹಿರಿಯ ಮಾಧ್ಯಮ ವರದಿಗಾರರು ಹಾಗೂ ಹಿಂದಿನ ಉಪ ಮುಖ್ಯಮಂತ್ರಿಗಳ ಮಾಜಿ ಮಾಧ್ಯಮ ಮತ್ತು ರಾಜಕೀಯ ಸಲಹೆಗಾರ ದೀಪಕ್ ತಿಮ್ಮಯ್ಯ ಅವರು ಕೊಡವ ಭೂಮಿಯನ್ನು ಕಳೆದುಕೊಂಡರೆ ಮುಂದೆ ಕೊಡವರ ಅಸ್ತಿತ್ವಕ್ಕೆ ದಕ್ಕೆ ಬರಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಮಡಿಕೇರಿ ಸಮೀಪದ ಕ್ಯಾಪಿಟಲ್ ವಿಲೇಜ್ ನಲ್ಲಿ ನಡೆದ “ಕಕ್ಕಡ ಪದ್ನೆಟ್” ಹಬ್ಬವನ್ನು ಕೊಡವ ಪರಂಪರೆಯ ಪವಿತ್ರ ಮಂದ್ ನಲ್ಲಿ ಆರಂಭಿಸಲಾಯಿತು. ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ, ಮುಖ್ಯ ಅತಿಥಿ ದೀಪಕ್ ತಿಮ್ಮಯ್ಯ ಹಾಗೂ ಮಂದಪಂಡ ಮನೋಜ್ ಮಂದಣ್ಣ ಅವರು ಪೂರ್ವಜರ ಗೌರವ ಸೂಚಕವಾಗಿ ಗಾಳಿಯಲ್ಲಿ ಗುಂಡು ಹಾರಿಸಿದರು. ನಂತರ ಬಾಳೆಕಂಬ ಕತ್ತರಿಸುವ ಬಾಳೆಬೆಂಗುವ ವಿಧಿಯನ್ನು ನೆರವೇರಿಸಲಾಯಿತು. ಮೆರವಣಿಗೆಯ ಮೂಲಕ ಭತ್ತದ ಗದ್ದೆಗೆ ತೆರಳಿದ ನಾಚಪ್ಪ ಅವರು ಕೃಷಿ ಋತುವಿನ ಆರಂಭವನ್ನು ಸೂಚಿಸಲು ಗಾಳಿಯಲ್ಲಿ ಗುಂಡು ಹಾರಿಸಿದರು. ಸಿಎನ್‌ಸಿ ಸದಸ್ಯರು, ಸ್ವಯಂಸೇವಕರು ಹಾಗೂ ಕೊಡವ, ಕೊಡವತಿಯರು ಸಾಂಪ್ರದಾಯಿಕವಾಗಿ ಭತ್ತದ ನಾಟಿ ಕಾರ್ಯ ಮಾಡಿದರು.

ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಎನ್.ಯು.ನಾಚಪ್ಪ ಅವರು 10 ಅಂಶಗಳ ಸಾಂವಿಧಾನಿಕ ನಿರ್ಣಯವನ್ನು ಮಂಡಿಸಿದರು. ನೆರರೆದಿದ್ದವರು ಸರ್ವಾನುಮತದಿಂದ ಸಹಿ ಮಾಡಿ ನಿರ್ಣಯವನ್ನು ಅಂಗೀಕರಿಸಿದರು. ಗುರು-ಕಾರೋಣ, ಸೂರ್ಯ-ಚಂದ್ರ, ಭೂತಾಯಿ, ಪ್ರಕೃತಿ ಮತ್ತು ಸಂವಿಧಾನದ ಹೆಸರಿನಲ್ಲಿ ಸಿಎನ್‌ಸಿಯ 36 ವರ್ಷಗಳ ಸಾಂವಿಧಾನಿಕ ಹೋರಾಟಕ್ಕೆ ಸಂಪೂರ್ಣ ಬೆಂಬಲವಾಗಿ ಪವಿತ್ರ ಪ್ರತಿಜ್ಞೆ ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದವರು ಕೊಡವ ಸಾಂಪ್ರದಾಯಿಕ ನಾಡ್ ಕೋಳಿ ಊಟ, ಮದ್ದ್ ಪಾಯಸ ಮತ್ತು ವಿವಿಧ ಕಕ್ಕಡ ಖಾದ್ಯಗಳನ್ನು ಸವಿದರು. 

ಕೊಡವ ಭೂಮಿಯೇ ಕೊಡವರ ಆತ್ಮ: 

ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯ ಅತಿಥಿ ದೀಪಕ್ ತಿಮ್ಮಯ್ಯ ಅವರು ಕೊಡವ ಭೂಮಿಯೇ ಕೊಡವರ ಆತ್ಮವಾಗಿದೆ ಎಂದರು.

ಕೊಡವ ಉಡುಗೆ ತೊಡುಗೆ ತೊಟ್ಟು ನೃತ್ಯವನ್ನು ಪ್ರದರ್ಶಿಸುವುದರಿಂದ ಮಾತ್ರ ಕೊಡವ ಗುರುತನ್ನು ನಿರ್ಧರಿಸಲು ಸಾಧ್ಯವಿಲ್ಲ. ಕೊಡವರ ಆತ್ಮಗೌರವ ಮತ್ತು ನೈತಿಕತೆ ನಮ್ಮ ಪೂರ್ವಿಕರ ಭೂಮಿಯಲ್ಲಿ, ನಮ್ಮ ತಾಯ್ನಾಡಿನಲ್ಲಿ ಮಾತ್ರ ನೆಲೆಸಿದೆ. ಕೊಡವ ಭೂಮಿಯನ್ನು ಕಳೆದುಕೊಂಡರೆ ಕೊಡವರು, ಕೊಡವರನ್ನು ಕಳೆದುಕೊಂಡರೆ ಕೊಡವಲ್ಯಾಂಡ್ ಮತ್ತು ಕೊಡಗು ಇರುವುದಿಲ್ಲ. ಕೊಡವರು ಮತ್ತು ಕೊಡಗು ಪರಸ್ಪರ ಹೆಣೆದುಕೊಂಡಿದೆ, ಅವಿನಾಭಾವ ಸಂಬಂಧ ಹೊಂದಿವೆ. ಕೊಡವರ ಜೀವನಚಕ್ರವು ಭೂಮಿ, ನೀರು ಮತ್ತು ಪ್ರಕೃತಿಯ ಸುತ್ತ ಸುತ್ತುತ್ತದೆ. ನಾವು ಇವುಗಳನ್ನು ಬಿಟ್ಟುಕೊಟ್ಟರೆ ಕೊಡವ ಅಸ್ತಿತ್ವಕ್ಕೆ ದಕ್ಕೆಯಾಗಲಿದೆ. ಕೊಡವ ತಾಯ್ನಾಡಿನ ಭೂಮಿಯನ್ನು ಕಳೆದುಕೊಂಡರೆ, ನೀವು ಎಲ್ಲಿ ಕೊಡವ ನೃತ್ಯ ಮಾಡುತ್ತೀರಿ ಎಂದು ಪ್ರಶ್ನಿಸಿದರು.

ಕೊಡವರು ಈ ಮಣ್ಣಿಗೆ ಅಂಟಿಕೊಂಡಿರುವ ಪೂರ್ವಜರನ್ನು ಪೂಜಿಸುವ ಪ್ರಾಚೀನ ಜನಾಂಗೀಯ ಸಮುದಾಯ. ನಮ್ಮ ಪೂರ್ವಜರು ಉನ್ನತ ಮೌಲ್ಯಗಳೊಂದಿಗೆ ಬದುಕಿದ್ದರು. ಇತ್ತೀಚಿನವರೆಗೆ ನಮಗೆ ಗುರಿ-ಕಾರೋಣ ಮಾತ್ರ ತಿಳಿದಿತ್ತು. ಈಗ ಅದನ್ನು ಹೊರಗಿನ ದೇವತೆಗಳಿಂದ ಬದಲಾಯಿಸಲಾಗುತ್ತಿದೆ. ಕೊಡವರು ಅರಿಯದೆ ರಾಜ್ಯದ ಬಹುಸಂಖ್ಯಾತ ಸಮುದಾಯದಲ್ಲಿ ಮುಳುಗಿ ಸಮೀಕರಣಗೊಳ್ಳುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಸಿಎನ್‌ಸಿ ಯ ಹೋರಾಟವನ್ನು ಶ್ಲಾಘಿಸಿದ ದೀಪಕ್ ತಿಮ್ಮಯ್ಯ ಅವರು ಎನ್.ಯು.ನಾಚಪ್ಪ ಅವರ ನಾಯಕತ್ವದಲ್ಲಿ ನಡೆಯುತ್ತಿರುವ ಅವಿರತ ಹೋರಾಟ ಕೊಡವ ಗುರುತು ಮತ್ತು ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸಲು, ಪ್ರತಿಧ್ವನಿಸಲು, ದೃಢಸಂಕಲ್ಪವನ್ನು ಪ್ರತಿಪಾದಿಸಲು ದೂರದೃಷ್ಟಿಯೊಂದಿಗೆ ಪ್ರಯಾಣಿಸುತ್ತಿದೆ. ನನ್ನ ಅಭಿಪ್ರಾಯದಲ್ಲಿ ಅವರು ನಿಜವಾದ ವೀರ ಕೊಡವ ಎಂದು ಹೆಮ್ಮೆ ವ್ಯಕ್ತಪಡಿಸಿದರು.  

ಪ್ರತಿಯೊಬ್ಬ ಕೊಡವರು ನಾಚಪ್ಪ ಅವರ ಉದಾತ್ತ ಕಾರ್ಯವನ್ನು ಮನಃಪೂರ್ವಕವಾಗಿ ಬೆಂಬಲಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎನ್.ಯು.ನಾಚಪ್ಪ ಅವರು ಭಾರತದ ಸಂವಿಧಾನದ 244 ಮತ್ತು 371ನೇ ವಿಧಿಗಳು ಆರ್/ಡಬ್ಲ್ಲೂ 5, 6 ಮತ್ತು 8ನೇ ಪರಿಚ್ಛೇದಗಳ ಅಡಿಯಲ್ಲಿ ಗೂರ್ಖಾಲ್ಯಾಂಡ್, ಲೇಹ್, ಲಡಾಖ್ ಮತ್ತು ಈಶಾನ್ಯ ಭಾರತದ ರಾಜ್ಯಗಳ ಮಾದರಿಯಲ್ಲಿ ಕೊಡವಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆ ಮತ್ತು ಸ್ವ-ಆಡಳಿತ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಮಂಡಿಸಿದರು.

ಪ್ರಾಚೀನ, ಮೂಲನಿವಾಸಿ, ಏಕ-ಜನಾಂಗೀಯ, ಪ್ರಕೃತಿ ಆರಾಧನಾ ಕೊಡವರನ್ನು ಭಾರತದ ಸಂವಿಧಾನ ಹಾಗೂ ವಿಶ್ವಸಂಸ್ಥೆಯ ಮೂಲನಿವಾಸಿ ಜನರ ಹಕ್ಕುಗಳ ಘೋಷಣೆಯಡಿಯಲ್ಲಿ ರಕ್ಷಿಸಬೇಕು. ಕೊಡವ ಸ್ಯಾಕ್ರಮೆಂಟ್ ಗನ್/ಥೋಕ್ ಅನ್ನು ಭಾರತದ ಸಂವಿಧಾನದ 25, 26ನೇ ವಿಧಿಗಳು ಆರ್/ಡಬ್ಲುö್ಯ 8ನೇ ಪರಿಚ್ಛೇದದಡಿಯಲ್ಲಿ ಅವಶ್ಯ ಧಾರ್ಮಿಕ ಆಚರಣೆ ಎಂದು ಗುರುತಿಸಿ ಸಂರಕ್ಷಿಸಬೇಕು.

ಮೂಲನಿವಾಸಿ ಕೊಡವರ ಮಾತೃಭಾಷೆಯಾದ ಶಾಸ್ತ್ರೀಯ ಕೊಡವ ಭಾಷೆಯನ್ನು ಭಾರತದ ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಬೇಕು. ಪವಿತ್ರ ನೆಲಗಳು, ದೇವರ ಕಾಡುಗಳು, ಮಂದ್‌ಗಳು, ಪವಿತ್ರ ಸ್ಥಳಗಳು, ಜಾನಪದ ಕಲೆಗಳು, ಹಾಡು, ಪರೆಯಕಾಳಿ, ಉಮ್ಮತ್ತಾಟ್, ಕೋಲಾಟ್, ಬೋಳ್ಕಾಟ್ ಸೇರಿದಂತೆ ಕೊಡವರ ಶ್ರೀಮಂತ ಸಾಂಸ್ಕೃತಿಕ ಮತ್ತು ಜಾನಪದ ಪರಂಪರೆಯನ್ನು ಯುನೆಸ್ಕೋ ಅಮೂರ್ತ ಸಾಂಸ್ಕೃತಿಕ ಪರಂಪರೆ ಪಟ್ಟಿಗೆ ಸೇರಿಸಬೇಕು.

ಕೊಡವ ಸ್ಮಾರಕಗಳು ಮತ್ತು ಕೊಡವ ದುರಂತಗಳಿಗೆ ಅಂತಾರಾಷ್ಟ್ರೀಯ ಮಾನ್ಯತೆ ನೀಡಬೇಕು. ದೇವಟ್ ಪರಂಬ್ ನಲ್ಲಿ ಕೊಡವ ಜನಾಂಗೀಯ ಹತ್ಯಾಕಾಂಡದ ಸ್ಮರಣಾರ್ಥ ಸ್ಮಾರಕ ನಿರ್ಮಿಸಬೇಕು.  

ನಾಲ್ನಾಡ್ ಅರಮನೆ ಮತ್ತು ಮಡಿಕೇರಿ ಕೋಟೆ ಅರಮನೆ ಸಂಚಿನಲ್ಲಿ ಕೊಡವ ರಾಜಕೀಯ ಹತ್ಯೆಗಳು ನಡೆದಿದ್ದು, ಈ ಅವಳಿ ದುರಂತಗಳನ್ನು ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಹತ್ಯಾಕಾಂಡ ಸ್ಮರಣೆ ಪಟ್ಟಿಗೆ ಸೇರಿಸಬೇಕು. ವಾಲ್ಗಳ್ಳಿ, ಮುಳ್ಳುಸೋಗೆ ಮತ್ತು ಲಕ್ಕಡಿಕೋಟೆಯಲ್ಲಿ ಕೊಡವರ ಪರಾಕ್ರಮವನ್ನು ಸಾರುವ ಯುದ್ಧ ಸ್ಮಾರಕಗಳನ್ನು ನಿರ್ಮಿಸಬೇಕು. ಜನಸಂಖ್ಯಾ ಬದಲಾವಣೆ ಮತ್ತು ಭೂಮಿ ಅನ್ಯರ ಪಾಲಾಗುವುದನ್ನು ತಡೆಯಲು ಇಡೀ ಕೊಡವ ಪ್ರದೇಶಕ್ಕೆ ಇನ್ನರ್ ಲೈನ್ ಪರ್ಮಿಟ್ ಜಾರಿಗೊಳಿಸಬೇಕು. ಕಾವೇರಿ ನದಿಯ ಜನ್ಮಸ್ಥಳವಾದ ತಲಕಾವೇರಿಯನ್ನು ಮೂಲನಿವಾಸಿ ಕೊಡವರ ಪವಿತ್ರ ಯಾತ್ರಾ ಸ್ಥಳವೆಂದು ಘೋಷಿಸಬೇಕು. ವಿಶ್ವಸಂಸ್ಥೆಯ ಹೆಲ್ಸಿಂಕಿ ನಿಯಮಗಳು 1966ರ ಪ್ರಕಾರ ಕೊಡವರಿಗೆ ಕಾವೇರಿ ನೀರಿನಲ್ಲಿ ನ್ಯಾಯಯುತ ಪಾಲು ನೀಡಬೇಕು. ಸಿಕ್ಕಿಂನ ಬೌದ್ಧ ಸನ್ಯಾಸಿ ಸಮುದಾಯದ ಅಮೂರ್ತ "ಸಂಘ" ಕ್ಷೇತ್ರದ ಮಾದರಿಯಲ್ಲಿ ಸಂಸತ್ತು ಮತ್ತು ರಾಜ್ಯ ವಿಧಾನಸಭೆಯಲ್ಲಿ ಕೊಡವರಿಗೆ ವಿಶೇಷ ಪ್ರಾತಿನಿಧ್ಯ ಕಡ್ಡಾಯಗೊಳಿಸಬೇಕು. ಪಾಲೇರಿ ರಾಜರುಗಳಿಂದ, ಬ್ರಿಟಿಷರಿಂದ ಕಸಿದುಕೊಳ್ಳಲ್ಪಟ್ಟ, ತೆರಿಗೆ ಕಟ್ಟದ ಕಾರಣಕ್ಕೆ ಹೊರಗಿನ ಸಾಲಗಾರರು ಮತ್ತು ವ್ಯಾಪಾರಿಗಳಿಗೆ ಅಡವಿಟ್ಟು, ಮಾರಿ, ಗುತ್ತಿಗೆಗೆ ನೀಡಿದ ಕೊಡವರ ಪೂರ್ವಿಕರ ಭೂಮಿಯನ್ನು ಮರಳಿ ನೀಡಬೇಕು ಎಂದು ಆಗ್ರಹಿಸಿದರು.  

2027 ರಾಷ್ಟ್ರೀಯ ಜನಗಣತಿ ಹಾಗೂ ಜಾತಿ ಗಣತಿಯಲ್ಲಿ ಕೊಡವ ಗುರುತನ್ನು ಖಚಿತಪಡಿಸಲು ಪ್ರತ್ಯೇಕ "ಕೋಡ್" ಮತ್ತು "ಕಾಲಮ್" ವ್ಯವಸ್ಥೆ ಮಾಡಬೇಕು. 1941 ರವರೆಗೆ ಕೊಡವರನ್ನು ಒಂದು "ಜನಾಂಗ" ಎಂದು ಗಣನೆ ಮಾಡಲಾಯಿತು. ಆಕ್ರಮಣದಿಂದ ಅದನ್ನು ಕಳೆದುಕೊಂಡೆವು. 1956 ರವರೆಗೆ ಕೊಡವರಿಗೆ ಕೊಡಗು ಎಂಬ ತಾಯ್ನಾಡು ಇತ್ತು. ವಿಲೀನದಿಂದ ಅದನ್ನು ಕಳೆದುಕೊಂಡೆವು. ಇದು ಗುರುತಿನ ಮತ್ತು ಅಸ್ತಿತ್ವದ ಎರಡು ಬಾರಿಯ ನಷ್ಟ. ಇದು ಕೊಡವರ ಭವಿಷ್ಯಕ್ಕೆ ಮಾರಕವಾಗಿದೆ ಎಂದು ಎನ್.ಯು.ನಾಚಪ್ಪ ಆರೋಪಿಸಿದರು.  

ಭಾರತ ಸರಕಾರ ಮತ್ತು ಕರ್ನಾಟಕ ಸರಕಾರ ಈ ಐತಿಹಾಸಿಕ ಅನ್ಯಾಯವನ್ನು ಮಾನವೀಯತೆಯ ನೆಲೆಗಟ್ಟಿನಲ್ಲಿ ಪರಿಹರಿಸಬೇಕು ಎಂದು ಒತ್ತಾಯಿಸಿದರು.

ಕಾರ್ಯಕ್ರಮದಲ್ಲಿ ಪುಲ್ಲೇರ ಸ್ವಾತಿ, ಅಪ್ಪಚ್ಚಿರ ರೀನಾ, ನಂದೇಟಿರ ಕವಿತಾ, ಚೋಳಪಂಡ ಜ್ಯೋತಿ, ನಂದಿನೆರವಂದ ರೇಖಾ, ಪಟ್ಟಮಾಡ ಲಲಿತಾ, ನಂದಿನೆರವಂಡ ಬೀನಾ, ಕೂತಂಡ ಸರ್ಸು ಅಪ್ಪಯ್ಯ, ನಂದಿನೆರವಂಡ ನಿಶಾ, ನಂದಿನೆರವಂಡ ಸುಮಿತ್ರಾ- ಪ್ರಾಂಶುಪಾಲರು ಕೊಡಗು ವಿದ್ಯಾಲಯ, ಈಳಪಂಡ ಪುಷ್ಪಾ ಉತ್ತಪ್ಪ, ಮೇಷ್ಟ್ರು ಅಪ್ಪಯ್ಯ, ಅಲ್ಮಂಡ ಜೈ ಗಣಪತಿ, ನಂದೇಟಿರ ರವಿ ಸುಬ್ಬಯ್ಯ, ಪೊರಿಮಂಡ ದಿನಮಣಿ ಪೂವಯ್ಯ, ಬಾಚಿರಣಿಯಂಡ ಚಿಪ್ಪಣ್ಣ, ಮಂದಪಂಡ ಮನೋಜ್, ಬೊಟ್ಟಂಗಡ ಗಿರೀಶ್ ಪೆಮ್ಮಯ್ಯ, ಪುಲ್ಲೇರ ಕಾಳಪ್ಪ, ಚೋಳಪಂಡ ನಾಣಯ್ಯ, ಕಿರಿಯಮಾಡ ರೀನ್ ಕೊಡವ, ಅಪ್ಪಚ್ಚಿರ ರಮ್ಮಿ ನಾಣಯ್ಯ, ಅಜ್ಜಿಕುಟ್ಟೀರ ಲೋಕೇಶ್ ಕೊಡವ, ನಂದಿನೆರವಂಡ ನಂದಾ, ನಂದಿನೆರವಂಡ ಟಿಪ್ಪು ಬಿದ್ದಪ್ಪ, ನಂದಿನೆರವಂಡ ಅಚ್ಚಯ್ಯ, ನಂದಿನೆರವಂಡ ಅಯ್ಯಣ್ಣ, ನಂದಿನೆರವಂಡ ದಿನೇಶ್, ನಂದಿನೆರವಂಡ ಮಿಟ್ಟು ಅಪ್ಪಯ್ಯ, ಅಪ್ಪೆಂಗಡ ಮಾಲೆ ಪೂಣಚ್ಚ, ಪೊರಿಮಂಡ ದಯನ್ ಪೊನ್ನಣ್ಣ, ಪೊರಿಮಂಡ ಮಣಿ ಈರಪ್ಪ, ಬಡಲೇರ ಕೌಶಿಕ್ ಬೆಳ್ಳಿಯಪ್ಪ, ಐತಿಚಂಡ ಪೂವಣ್ಣ, ಪಾಲೆಕಂಡ ಪ್ರಧಾನ್ ಪೂಣಚ್ಚ, ಪಾಲೆಕಂಡ ಪ್ರತಾಪ್, ಬೊಳ್ದಂಡ ಸತೀಶ್, ಮಣವಟ್ಟೀರ ಸೋಮೇಶ್, ಮಚ್ಚಮಾಡ ರಣಜಿ, ಕಾಟುಮಣಿಯಂಡ ಉಮೇಶ್, ಮಂದಪಂಡ ಸೂರಜ್, ಮಣವಟ್ಟೀರ ಸ್ವರೂಪ ಪೂವಯ್ಯ, ಮಣವಟ್ಟೀರ ನಂದಾ ಭೀಮಾ, ಅಜ್ಜಿನಿಕಂಡ ಸನ್ನಿ ಮಾಚಯ್ಯ, ತಂಬುಕುತ್ತೀತ ಸೋಮಯ್ಯ, ಅಚ್ಚಕಳೇರ ನವೀನ್ ಮೊಣ್ಣಪ್ಪ, ಪುಲ್ಲೇರ ಹರ್ಷ ಬೋಪಯ್ಯ, ಕೂತಂಡ ಅಕ್ಷತ್ ಅಯ್ಯಪ್ಪ, ಕೂತಂಡ ರೋಷನ್ ಉತ್ತಪ್ಪ, ಕಾಂತಿ ನಾಣಿಯಪ್ಪ, ಪುದಿಯೊಕ್ಕಡ ಬೋಪಣ್ಣ, ಕುಲ್ಲೇಟಿರ ಅರುಣ ಬೇಬ, ಬಡುವಂಡ ವಿಜಯ, ಪುದಿಯೊಕ್ಕಡ ಕಾಶಿ ಕರುಂಬಯ್ಯ, ಐಯಲಪಂಡ ಮಿಟ್ಟು ಉತ್ತಪ್ಪ, ಉದಿಯಂಡ ವಿನಯ್ ನವೀನ್ ಹಾಗೂ ಉದಿಯಂಡ ಸುಭಾಷ್ ಪಾಲ್ಗೊಂಡಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0