Kodagu

ಸೆ.5ರಂದು ಮಾದಾಪುರದಲ್ಲಿ ಸಿಎನ್‌ಸಿ ಮಾನವ ಸರಪಳಿ

admincoorgdaily

ಸೆ.5ರಂದು ಮಾದಾಪುರದಲ್ಲಿ ಸಿಎನ್‌ಸಿ ಮಾನವ ಸರಪಳಿ

ಮಡಿಕೇರಿ ಸೆ.2: ಕೊಡವ ಪ್ರಾಂತ್ಯದಾದ್ಯಂತ ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‌ಸಿ) ವತಿಯಿಂದ ಹಮ್ಮಿಕೊಂಡಿರುವ ಶಾಂತಿಯುತ ಮಾನವ ಸರಪಳಿ ಹಾಗೂ ಜನಸಂಪರ್ಕ ಅಭಿಯಾನದ ಅಂಗವಾಗಿ ಸೆಪ್ಟೆಂಬರ್ 5ರಂದು ಬೆಳಿಗ್ಗೆ 10.30ಕ್ಕೆ ಸೂರ್ಲಬ್ಬಿನಾಡ್ ಹಾಗೂ ಗಡಿನಾಡಿನ ಮಾದಾಪುರದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು. ನಾಚಪ್ಪ ಕೊಡವ ತಿಳಿಸಿದ್ದಾರೆ.

ಕೊಡವಲ್ಯಾಂಡ್‌ಗೆ ಭೂ-ರಾಜಕೀಯ ಸ್ವಾಯತ್ತತೆ, ಸಂವಿಧಾನದ ವಿಧಿ 371ರ ಅಡಿಯಲ್ಲಿ ಸ್ವಯಂ ಆಡಳಿತ, ವಿಶ್ವಸಂಸ್ಥೆಯ ಸನ್ನದು ಹಾಗೂ ಭಾರತೀಯ ಸಂವಿಧಾನದ ಅಡಿಯಲ್ಲಿ ಕೊಡವರನ್ನು ಆದಿಮಸಂಜಾತ ಸಮುದಾಯವಾಗಿ ಗುರುತಿಸಿ ಸಾಂವಿಧಾನಿಕ ರಕ್ಷಣೆ ಮತ್ತು ವಿಶೇಷ ಮಾನ್ಯತೆ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಜನಸಂಪರ್ಕ ಅಭಿಯಾನದಲ್ಲಿ ಪ್ರಸ್ತಾಪಿಸಲಾಗುವುದು ಎಂದು ಅವರು ಹೇಳಿದ್ದಾರೆ. .

ಕೊಡವರ ಧಾರ್ಮಿಕ ಸಂಸ್ಕಾರವಾದ ‘ಕೋವಿ-ತೋಕ್’ (ಬಂದೂಕು) ಸಂಪ್ರದಾಯವನ್ನು ಸಂವಿಧಾನದ ವಿಧಿ 25, 26 ಮತ್ತು 28ರ ಅಡಿಯಲ್ಲಿ ಮುಂದುವರಿಸಲು ಅವಕಾಶ ನೀಡಬೇಕು. ಸಿಕ್ಕಿಂನ ಬೌದ್ಧ ಸನ್ಯಾಸಿ ಸಮುದಾಯಕ್ಕೆ ನೀಡಲಾಗಿರುವ ‘ಸಂಘ’ ಕ್ಷೇತ್ರದ ಮಾದರಿಯಲ್ಲಿ, ಆದಿಮಸಂಜಾತ ಅನಿಮಿಸ್ಟಿಕ್ (ಪ್ರಕೃತಿ ಆರಾಧಕ) ಕೊಡವ ಸಮುದಾಯಕ್ಕೆ ಸಂಸತ್ತು ಮತ್ತು ಶಾಸನಸಭೆಗಳಲ್ಲಿ ಪ್ರತ್ಯೇಕ ಪ್ರಾತಿನಿಧ್ಯ ಕಲ್ಪಿಸಬೇಕು ಎಂಬ ಬೇಡಿಕೆಯನ್ನೂ ಸಿಎನ್‌ಸಿ ಮುಂದಿಟ್ಟಿದೆ.

ಜನಗಣತಿಯಲ್ಲಿ ಕೊಡವರನ್ನು ಪ್ರತ್ಯೇಕ ಸಮುದಾಯವಾಗಿ ದಾಖಲಿಸಲು ಒತ್ತಾಯ:

ಕೇಂದ್ರ ಸರ್ಕಾರ ನಡೆಸಲಿರುವ ರಾಷ್ಟ್ರೀಯ ಜನಗಣತಿ 2027 ಹಾಗೂ ಜಾತಿ ಗಣತಿಯಲ್ಲಿ ಕೊಡವರನ್ನು ಪ್ರತ್ಯೇಕ ಜನಾಂಗೀಯ ಸಮುದಾಯವಾಗಿ ನಮೂದಿಸಿ ದಾಖಲಿಸಬೇಕು ಎಂದು ಸಿಎನ್‌ಸಿ ಆಗ್ರಹಿಸಿದೆ. 1871-72ರಿಂದ 1941ರವರೆಗಿನ ಜನಗಣತಿಗಳಲ್ಲಿ ಕೊಡವರನ್ನು ಪ್ರತ್ಯೇಕ ಜನಾಂಗೀಯ ಸಮುದಾಯವಾಗಿ ಪರಿಗಣಿಸಲಾಗಿತ್ತು. ಆದರೆ 1941ರ ನಂತರ ಕೊಡವರ ಪ್ರತ್ಯೇಕ ಅಸ್ಮಿತೆ ಕಳೆದು ದೊಡ್ಡ ಸಮುದಾಯಗಳೊಂದಿಗೆ ವಿಲೀನಗೊಳಿಸಲಾಯಿತು. 1956ರವರೆಗೆ ಕೊಡಗು ಪ್ರತ್ಯೇಕ ‘ಸಿ’ ರಾಜ್ಯವಾಗಿ ಅಸ್ತಿತ್ವದಲ್ಲಿತ್ತು. ರಾಜ್ಯಗಳ ಮರುಸಂಘಟನೆ ಕಾಯ್ದೆಯಡಿ 1956ರಲ್ಲಿ ಕೊಡಗು ಕರ್ನಾಟಕದೊಂದಿಗೆ ವಿಲೀನಗೊಂಡಿತು. 1941ರ ಜನಗಣತಿಯಲ್ಲಿ ಕೊಡವರ ಪ್ರತ್ಯೇಕ ಗುರುತಿನ ಅಳಿಸುವಿಕೆ ಹಾಗೂ 1956ರ ಕೊಡಗು ವಿಲೀನ—ಇವೆರಡೂ ಕೊಡವರ ಅಸ್ಮಿತೆಗೆ ಉಂಟಾದ ಪ್ರಮುಖ ಐತಿಹಾಸಿಕ ಅನ್ಯಾಯಗಳಾಗಿವೆ ಎಂದು ನಾಚಪ್ಪ ಆರೋಪಿಸಿದ್ದಾರೆ.

ಇದೇ ವೇಳೆ, ಕರ್ನಾಟಕ ಭೂ ಕಂದಾಯ ಕಾಯ್ದೆ ಹಾಗೂ ಭೂ ಸುಧಾರಣಾ ಕಾಯ್ದೆಗಳಿಗೆ ಮಾಡಲಾದ ತಿದ್ದುಪಡಿಗಳ ಪರಿಣಾಮವಾಗಿ ವಾಣಿಜ್ಯ ಉದ್ದೇಶಗಳಿಗೆ ಭೂ ಪರಿವರ್ತನೆಗೆ ಅವಕಾಶ ದೊರೆತಿದ್ದು, ಹೊರಗಿನ ಉದ್ಯಮಿಗಳು ಹಾಗೂ ಬಂಡವಾಳಶಾಹಿಗಳು ದೊಡ್ಡ ಪ್ರಮಾಣದಲ್ಲಿ ಭೂಮಿ ಖರೀದಿಸಿ ಟೌನ್‌ಶಿಪ್‌ಗಳು, ರೆಸಾರ್ಟ್‌ಗಳು ಮತ್ತು ಲೇಔಟ್‌ಗಳನ್ನು ನಿರ್ಮಿಸುತ್ತಿದ್ದಾರೆ. ಇಂತಹ ಬೆಳವಣಿಗೆಗಳಿಂದ ಕಾವೇರಿ ನದಿಯ ಜಲಮೂಲಗಳು, ಕಾಫಿ ತೋಟಗಳು ಮತ್ತು ಕೃಷಿ ಪ್ರದೇಶಗಳಿಗೆ ಧಕ್ಕೆಯಾಗುವುದರೊಂದಿಗೆ ಕೊಡಗಿನ ಜನಸಂಖ್ಯಾ ಸ್ವರೂಪ, ಭೂಪ್ರದೇಶ ಹಾಗೂ ನಿತ್ಯಹರಿದ್ವರ್ಣ ಅರಣ್ಯ ಪ್ರದೇಶದಲ್ಲೂ ಬದಲಾವಣೆ ಉಂಟಾಗುವ ಆತಂಕವಿದೆ ಎಂದು ನಾಚಪ್ಪ ತಿಳಿಸಿದ್ದಾರೆ.

ಕೊಡವರ ಅಸ್ಮಿತೆ, ಭೂಮಿ, ಭಾಷೆ, ಸಾಂಸ್ಕೃತಿಕ ಪರಂಪರೆ, ಆರ್ಥಿಕ ಹಾಗೂ ರಾಜಕೀಯ ಸ್ವಾತಂತ್ರ್ಯವನ್ನು ರಕ್ಷಿಸುವ ಉದ್ದೇಶದಿಂದ ಸಿಎನ್‌ಸಿ ಸಾರ್ವಜನಿಕ ಜಾಗೃತಿ ಹಾಗೂ ಜನಸಂಪರ್ಕ ಕಾರ್ಯಕ್ರಮವನ್ನು ರೂಪಿಸಿದೆ. ಕೊಡವರ ಜನಾಂಗೀಯ ಜಗತ್ತು, ಕೊಡವಲ್ಯಾಂಡ್ ಮತ್ತು ಕೊಡವ ಅಸ್ಮಿತೆಯ ರಕ್ಷಕ ಹಾಗೂ ಸಾಕ್ಷಿಪ್ರಜ್ಞೆಯಾಗಿ ಈ ಅಭಿಯಾನವನ್ನು ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.