ಆ.2 ರಂದು ಸಿಎನ್‌ಸಿಯಿಂದ 31ನೇ ಸಾರ್ವತ್ರಿಕ ಕಕ್ಕಡ ಪದ್ನೆಟ್ ಆಚರಣೆ

Jul 30, 2026 - 23:52
 0  1
ಆ.2 ರಂದು ಸಿಎನ್‌ಸಿಯಿಂದ 31ನೇ ಸಾರ್ವತ್ರಿಕ ಕಕ್ಕಡ ಪದ್ನೆಟ್ ಆಚರಣೆ

ಮಡಿಕೇರಿ ಜು.30 : ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ವತಿಯಿಂದ ಆ.2 ರಂದು 31ನೇ ಸಾರ್ವತ್ರಿಕ ಕಕ್ಕಡ ಪದ್ನೆಟ್ ಆಚರಣೆ ನಡೆಯಲಿದೆ ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ.

ಮಡಿಕೇರಿ ಸಮೀಪದ ಕ್ಯಾಪಿಟಲ್ ವಿಲೇಜ್ ನಲ್ಲಿ ಭಾನುವಾರ ಬೆಳಿಗ್ಗೆ 10.30 ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು, ಹಿರಿಯ ಮಾಧ್ಯಮ ವರದಿಗಾರರು ಹಾಗೂ ಹಿಂದಿನ ಉಪ ಮುಖ್ಯಮಂತ್ರಿಗಳ ಮಾಜಿ ಮಾಧ್ಯಮ ಮತ್ತು ರಾಜಕೀಯ ಸಲಹೆಗಾರ ದೀಪಕ್ ತಿಮ್ಮಯ್ಯ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಪತ್ರಿಕಾ ಪ್ರಕಟಣೆ ನೀಡಿದ್ದಾರೆ.

ಸಾರ್ವಜನಿಕವಾಗಿ "ಕಕ್ಕಡ ಪದ್ನೆಟ್" ಆಚರಣೆ ಆರಂಭವಾಗಿ ಈ ವರ್ಷಕ್ಕೆ ಮೂರು ದಶಕಗಳು (31 ವರ್ಷಗಳು) ಪಾದಾರ್ಪಣೆ ಮಾಡುತ್ತಿದೆ. ಈ ಪರಂಪರೆಯನ್ನು ಮೂಲತಃ ಕೊಡವ ಕಾರಣವರು (ಪೂರ್ವಜರು) ಪ್ರಾರಂಭಿಸಿದ್ದು, ಅದನ್ನು ಸಿಎನ್‌ಸಿ ಸಾರ್ವತ್ರಿಕ ಆಚರಣೆಯ ಮೂಲಕ ಅತ್ಯಂತ ಗೌರವದಿಂದ ಮುಂದುವರಿಸಿಕೊಂಡು ಬರುತ್ತಿದೆ.

"ಕಕ್ಕಡ ಪದ್ನೆಟ್" ಕಾವೇರಿ ಮಾತೆ, ಪ್ರಕೃತಿ ಮಾತೆ, ಪವಿತ್ರ ಕೋವಿ (ತೋಕ್), ಕೊಡವ ವಂಶಾವಳಿಯ ಪವಿತ್ರ ಸ್ಥಳಗಳಾದ ಮಂದ್ ಮತ್ತು ದೇವಕಾಡು ಹಾಗೂ ಕೊಡವ ಜನರ ನಡುವಿನ ಅವಿನಾಭಾವ ಸಂಬಂಧವನ್ನು ಸಂಕೇತಿಸುತ್ತದೆ. ಆದಿಮಸಂಜಾತ ಕೊಡವರ ಪ್ರಕೃತಿ ಆರಾಧನೆ, ಯೋಧ ಪರಂಪರೆ ಮತ್ತು ಕೃಷಿ ಸಂಸ್ಕೃತಿಯನ್ನು ಸಾಕ್ಷೀಕರಿಸುತ್ತದೆ. ಇದು ಕೊಡವ ಜಾನಪದ ಮತ್ತು ಧಾರ್ಮಿಕ ಆಚರಣೆಗಳಲ್ಲಿ ಅತ್ಯಂತ ಪ್ರಮುಖವಾದ ಹಬ್ಬವಾಗಿದೆ ಎಂದು ತಿಳಿಸಿರುವ ಎನ್.ಯು.ನಾಚಪ್ಪ ಅವರು, "ಕಕ್ಕಡ ಪದ್ನೆಟ್" ಸಂಭ್ರಮವನ್ನು ಯಶಸ್ವಿಗೊಳಿಸಲು ಕೊಡವ ಹಾಗೂ ಕೊಡವತಿಯರು ಸಾಂಪ್ರದಾಯಿಕ ಕೊಡವ ಉಡುಪಿನಲ್ಲಿ ಆಗಮಿಸುವಂತೆ ಕೋರಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0