ವಿದ್ಯಾರ್ಥಿಗಳ ಹೋರಾಟಕ್ಕೆ ಸಿಪಿಐ ಬೆಂಬಲ; ನೆಲ್ಯಹುದಿಕೇರಿಯಲ್ಲಿ ಪ್ರತಿಭಟನಾ ಸಭೆ
ಸಿದ್ದಾಪುರ:ದೆಹಲಿಯಲ್ಲಿ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಹೋರಾಟ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಬೆಂಬಲ ಸೂಚಿಸಿ ಭಾರತ ಕಮ್ಯೂನಿಸ್ಟ್ ಪಕ್ಷ (ಸಿಪಿಐ) ವತಿಯಿಂದ ಶುಕ್ರವಾರ ಸಂಜೆ ನೆಲ್ಯಹುದಿಕೇರಿ ಪಟ್ಟಣದಲ್ಲಿ ಪ್ರತಿಭಟನಾ ಸಭೆ ನಡೆಯಿತು. ಸಭೆಯಲ್ಲಿ ಮಾತನಾಡಿದ ಸಿಪಿಐ ಮುಖಂಡ ಪಿ.ಆರ್. ಭರತ್ , ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳ ನ್ಯಾಯಸಮ್ಮತ ಬೇಡಿಕೆಗಳನ್ನು ಕೇಂದ್ರ ಸರ್ಕಾರ ಕೂಡಲೇ ಈಡೇರಿಸಬೇಕು ಎಂದು ಒತ್ತಾಯಿಸಿದರು.
ಅಲ್ಲದೆ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ನೈತಿಕ ಹೊಣೆ ಹೊತ್ತು ತಕ್ಷಣವೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ವಿದ್ಯಾರ್ಥಿಗಳ ಸಾವು ಹಾಗೂ ಶಿಕ್ಷಣದ ವ್ಯಾಪಾರೀಕರಣದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಅವರು, ಘಟನೆಯಲ್ಲಿ ಮೃತಪಟ್ಟ 22 ಮಕ್ಕಳ ಕುಟುಂಬಗಳಿಗೆ ಸರ್ಕಾರ ಸೂಕ್ತ ಪರಿಹಾರ ಮತ್ತು ಅಗತ್ಯ ನೆರವು ನೀಡಬೇಕು ಎಂದು ಒತ್ತಾಯಿಸಿದರು.
ದೇಶದಲ್ಲಿ ಹೆಚ್ಚುತ್ತಿರುವ ಶಿಕ್ಷಣದ ವ್ಯಾಪಾರೀಕರಣವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕೆಂದೂ ಆಗ್ರಹಿಸಿದರು. ಪ್ರತಿಭಟನಾ ಸಭೆಯಲ್ಲಿ ಸಿಪಿಐ ಮುಖಂಡರಾದ ಎನ್.ಡಿ. ಕುಟ್ಟಪ್ಪನ್, ಟಿ.ಟಿ. ಉದಯಕುಮಾರ್, ಎಂ.ಜಿ. ಜೋಸ್, ಶಾಲಿ ಪೌಲೋಸ್, ಶೌಕತ್, ಹಬೀಬ್ ಸೇರಿದಂತೆ ಹಲವು ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಭಾಗವಹಿಸಿ ವಿದ್ಯಾರ್ಥಿಗಳ ಹೋರಾಟಕ್ಕೆ ಐಕ್ಯತೆ ವ್ಯಕ್ತಪಡಿಸಿದರು.
What's Your Reaction?
Like
0
Dislike
0
Love
1
Funny
0
Angry
0
Sad
0
Wow
0
