National News

ದೆಹಲಿಯ ಕೆಂಪುಕೋಟೆ ಬಳಿ ಕಾರು ಸ್ಫೋಟ; ಎಂಟು ಮಂದಿ ಮೃತ್ಯು

admincoorgdaily

ನವದೆಹಲಿ: ರಾಜಧಾನಿ ದೆಹಲಿಯ ಕೆಂಪುಕೋಟೆ ಮೆಟ್ರೋ ನಿಲ್ದಾಣದ ಬಳಿ ಸೋಮವಾರ ಸಂಜೆ ಸಂಭವಿಸಿದ ಭಾರೀ ಕಾರು ಸ್ಫೋಟದಲ್ಲಿ ಕನಿಷ್ಠ ಎಂಟು ಮಂದಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಫೋಟದ ತೀವ್ರತೆಯಿಂದಾಗಿ ಸುತ್ತಮುತ್ತಲಿನ ಹಲವಾರು ವಾಹನಗಳು ಬೆಂಕಿಗೆ ಆಹುತಿಯಾಗಿದ್ದು, ಪ್ರದೇಶದಲ್ಲಿ ಭೀತಿ ವಾತಾವರಣ ಆವರಿಸಿದೆ.

ಸೋಮವಾರ (ನವೆಂಬರ್ 10) ಸಂಜೆ 6.30ರ ಸುಮಾರಿಗೆ ಕೆಂಪುಕೋಟೆ ಮೆಟ್ರೋ ನಿಲ್ದಾಣದ ಗೇಟ್ ಸಂಖ್ಯೆ 1ರ ಬಳಿ ನಿಲ್ಲಿಸಿದ್ದ ಕಾರಿನಲ್ಲಿ ಅಚಾನಕ್ ಸ್ಫೋಟ ಸಂಭವಿಸಿದೆ. ಜೋರಾದ ಸ್ಫೋಟದ ಶಬ್ದದ ಬಳಿಕ ಬೆಂಕಿಯ ಕಿಡಿ ಆಕಾಶ ಮುಟ್ಟಿದೆ ಎಂದು ತಿಳಿದು ಬಂದಿದೆ.

ಘಟನೆಯ ನಂತರ ದೆಹಲಿ ಪೊಲೀಸರು ನಗರದಲ್ಲಿ ಹೈ ಅಲರ್ಟ್ ಘೋಷಿಸಿದ್ದು, ಪ್ರದೇಶವನ್ನು ಸಂಪೂರ್ಣ ಸುತ್ತುವರೆದು ಭದ್ರತೆ ಹೆಚ್ಚಿಸಲಾಗಿದೆ. ಏಳು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿವೆ ಎಂದು ದೆಹಲಿ ಅಗ್ನಿಶಾಮಕ ಸೇವೆಗಳು ತಿಳಿಸಿವೆ.

“ರೆಡ್ ಫೋರ್ಟ್ ಮೆಟ್ರೋ ನಿಲ್ದಾಣದ ಬಳಿ ನಿಲ್ಲಿಸಿದ್ದ ಕಾರಿನಲ್ಲಿ ಸ್ಫೋಟ ಸಂಭವಿಸಿದೆ. ತೀವ್ರತೆ ಬಹಳ ಜಾಸ್ತಿಯಿದ್ದುದರಿಂದ, ಗಾಯಗಳಾಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ,” ಎಂದು ಅಗ್ನಿಶಾಮಕ ಇಲಾಖೆಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಘಟನೆ ನಂತರ ಬಾಂಬ್ ನಿಷ್ಕ್ರಿಯ ದಳ ಹಾಗೂ ಅಪರಾಧ ತನಿಖಾ ತಂಡ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿವೆ.