ಡಿವೈಡರ್ ಹಾರಿ KSRTC ಬಸ್ಸಿಗೆ ಕಾರು ಡಿಕ್ಕಿ; ಮೂವರು ಸ್ಥಳದಲ್ಲೇ ಮೃತ್ಯು

Dec 11, 2025 - 18:41
 0  3k
ಡಿವೈಡರ್ ಹಾರಿ KSRTC ಬಸ್ಸಿಗೆ ಕಾರು ಡಿಕ್ಕಿ; ಮೂವರು ಸ್ಥಳದಲ್ಲೇ ಮೃತ್ಯು
Photo credit: TV09

ದೇವನಹಳ್ಳಿ, ಡಿ.11: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಹೊರವಲಯದ ಲಾಲಗೊಂಡನಹಳ್ಳಿ ಗೇಟ್ ಸಮೀಪ ಬುಧವಾರ ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ದೇವನಹಳ್ಳಿ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ಪ್ರಕರಣ ದಾಖಲಾಗಿದೆ.

ಚಿಕ್ಕಬಳ್ಳಾಪುರ ಕಡೆಯಿಂದ ದೇವನಹಳ್ಳಿ ಕಡೆಗೆ ಅತಿವೇಗದಲ್ಲಿ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಹಾರಿ ಎದುರುಗಡೆಯಿಂದ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿ ಒಳಗಿದ್ದ ಮೂವರು ಘಟನಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಮೃತರನ್ನು ಮೋಹನ್ ಕುಮಾರ್ (33), ಸುಮನ್ (28) ಮತ್ತು ಸಾಗರ್ (23) ಎಂದು ಗುರುತಿಸಲಾಗಿದೆ. ಮೂವರೂ ದೇವನಹಳ್ಳಿ ತಾಲೂಕಿನ ಸಾದಹಳ್ಳಿ ನಿವಾಸಿಗಳಾಗಿದ್ದಾರೆ. ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಕೆಲವರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.

ಘಟನೆಯ ನಂತರ ದೇವನಹಳ್ಳಿ ಸಂಚಾರಿ ಪೊಲೀಸರು ಸ್ಥಳಕ್ಕಾಗಮಿಸಿ ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತರಾದರು. ನಜ್ಜುಗುಜ್ಜಾದ ಕಾರಿನಿಂದ ಮೃತದೇಹಗಳನ್ನು ಹೊರತೆಗೆಯಲು ಪೊಲೀಸರು ಹರಸಾಹಸ ಪಡಬೇಕಾಯಿತು. ಅತಿವೇಗದ ಚಾಲನೆ ಈ ದುರಂತಕ್ಕೆ ಕಾರಣವೆಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.

ಅಪಘಾತದ ಪರಿಣಾಮ ಹೈದರಾಬಾದ್–ಬೆಂಗಳೂರು ಹೆದ್ದಾರಿಯಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಯಿತು. ಮೃತದೇಹಗಳನ್ನು ಆಕಾಶ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.

What's Your Reaction?

Like Like 1
Dislike Dislike 0
Love Love 2
Funny Funny 0
Angry Angry 0
Sad Sad 7
Wow Wow 0