ಕೆರಿಯರ್ ಇನ್ ದ ಇಂಡಿಯನ್ ಡಿಫೆನ್ಸ್ ಫೋರ್ಸ್' ಕೃತಿ ಅರ್ಪಣೆ
ಕುಶಾಲನಗರ, ಜೂ. 29: ಕೊಡಗು ಸೇರಿದಂತೆ ರಾಜ್ಯದ ಹಾಗೂ ದೇಶದ ವಿವಿಧ ಭಾಗಗಳ ಯುವಜನರಿಗೆ ಒಂದೇ ವೇದಿಕೆಯಲ್ಲಿ ನಿಖರ, ಪ್ರಾಮಾಣಿಕ ಹಾಗೂ ಗುಣಮಟ್ಟದ ಮಾಹಿತಿಯನ್ನು ನೀಡುವ ಉದ್ದೇಶದಿಂದ, ಭಾರತೀಯ ಸಶಸ್ತ್ರ ಪಡೆಗಳಲ್ಲಿ ಲಭ್ಯವಿರುವ ವಿವಿಧ ವೃತ್ತಿ ಅವಕಾಶಗಳು ಹಾಗೂ ಸೈನಿಕ ಶಿಕ್ಷಣ ಸಂಸ್ಥೆಗಳ ಕುರಿತು ಸಮಗ್ರ ಮಾಹಿತಿಯನ್ನು ಒಳಗೊಂಡಿರುವ, ' ಕೆರಿಯರ್ ಇನ್ ದ ಇಂಡಿಯನ್ ಡಿಫೆನ್ಸ್ ಫೋರ್ಸಸ್'' ಎಂಬ ಮಾರ್ಗದರ್ಶಿ ಕೃತಿಯನ್ನು ಮೇಜರ್ ಸತೀಶ್ ಡಿ. ಪ್ರಕಟಿಸಿದ್ದಾರೆ.
ಈ ಕೃತಿಯನ್ನು ಅವರು ಮಾಜಿ ಸಚಿವ ಅಪ್ಪಚ್ಚು ರಂಜನ್ ಅವರಿಗೆ ತಾ.26 ರಂದು ಅರ್ಪಿಸಿದ್ದಾರೆ. ಭಾರತೀಯ ಸೇನಾಪಡೆಗಳಲ್ಲಿ ಲಭ್ಯವಿರುವ ವಿವಿಧ ವೃತ್ತಿ ಅವಕಾಶಗಳು ಹಾಗೂ ಸೈನಿಕ ಶಿಕ್ಷಣ ಸಂಸ್ಥೆಗಳ ಕುರಿತು ಸಮಗ್ರ ಮಾಹಿತಿಯ ಕೊರತೆಯಿಂದ ಅನೇಕ ಪ್ರತಿಭಾವಂತ ಯುವಕರು ಅವಕಾಶಗಳಿಂದ ವಂಚಿತರಾಗುತ್ತಾರೆ ಎಂಬ ದೂರದೃಷ್ಟಿಯ ಚಿಂತನೆಯನ್ನು ರಂಜನ್ ಅವರು ಈ ಹಿಂದೆ ವ್ಯಕ್ತಪಡಿಸಿದ್ದು ಇದರಿಂದ ಪ್ರೇರಿತರಾಗಿ ಈ ಕೃತಿ ರಚಿಸಲಾಗಿದೆ ಎಂದು ಮೇಜರ್ ಸತೀಶ್ ಅವರು ತಿಳಿಸಿದ್ದಾರೆ.
ಈ ಕೃತಿಯ ಪ್ರಕಟಣೆಗೆ ಮುನ್ನ ಭಾರತೀಯ ಸೇನೆಯ ಅಧಿಕೃತ ಅನುಮೋದನೆ ಹಾಗೂ ಪ್ರಕಟಣೆ ಶಿಫಾರಸ್ಸು ಪಡೆಯಲಾಗಿದೆ ಎಂದು ತಿಳಿಸಿರುವ ಅವರು , ಒಂದೇ ಕೃತಿಯಲ್ಲಿ ಸೇನೆಯ ಪ್ರತಿಯೊಂದು ಹುದ್ದೆಗೆ ಸಂಬಂಧಿಸಿದಂತೆ ಸಂಪೂರ್ಣ ಮಾರ್ಗದರ್ಶನ ದೊರೆಯಲಿದೆ ಎಂದು ತಿಳಿಸಿದ್ದಾರೆ.
ಈ ಕೃತಿಯ ಲೇಖಕರಾದ ಮೇಜರ್ ಸತೀಶ ಡಿ. ಭಾರತೀಯ ಸೇನೆಯಲ್ಲಿ ಕಮಿಷನ್ಡ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದು, ಸಹಲೇಖಕಿ ಪಾವನಿ ಪಿ. ಸೋಮವಾರಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಕುಶಾಲನಗರದ ದಂಪತಿಗಳಾದ ಡಿ. ವಿ. ಪುಂಡರೀಕಾಕ್ಷ ಹಾಗೂ ಶೈಲಜಾರವರ ಅಳಿಯ ಮತ್ತು ಪುತ್ರಿಯಾಗಿದ್ದಾರೆ.
What's Your Reaction?
Like
1
Dislike
0
Love
0
Funny
0
Angry
0
Sad
0
Wow
0
