ಪಡಿತರಕ್ಕೆ ಜಾತಿ ಪ್ರಮಾಣ ಪತ್ರ ಮ್ಯಾಪಿಂಗ್; ಸಿಪಿಐ(ಎಂ) ಆಕ್ಷೇಪ
admincoorgdaily

ಸಿದ್ದಾಪುರ:-ಪಡಿತರ ಚೀಟಿದಾರರ ರೇಷನ್ ಕಾರ್ಡ್ ಮಾಹಿತಿಯನ್ನು ಜಾತಿ ಪ್ರಮಾಣ ಪತ್ರದೊಂದಿಗೆ ಮ್ಯಾಪಿಂಗ್ ಮಾಡುವ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ಆರಂಭಿಸಿರುವುದಕ್ಕೆ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ಜಿಲ್ಲಾ ಸಮಿತಿ ಆಕ್ಷೇಪ ವ್ಯಕ್ತಪಡಿಸಿದೆ.
ಜಿಲ್ಲಾ ಕಾರ್ಯದರ್ಶಿ ಹೆಚ್. ಬಿ. ರಮೇಶ್ ಅವರು ಪ್ರಕಟಣೆಯಲ್ಲಿ, ಸರ್ಕಾರದ ಉದ್ದೇಶ ಕಲ್ಯಾಣ ಯೋಜನೆಗಳ ಅರ್ಹ ಫಲಾನುಭವಿಗಳನ್ನು ನಿಖರವಾಗಿ ಗುರುತಿಸುವುದಾಗಿದ್ದರೂ, ಕೊಡಗು ಜಿಲ್ಲೆಯ ಹಲವು ನ್ಯಾಯಬೆಲೆ ಅಂಗಡಿಗಳಲ್ಲಿ ಎಸ್‌ಸಿ/ಎಸ್‌ಟಿ ಮಾತ್ರವಲ್ಲದೆ ಇತರ ಜಾತಿಯ ಪಡಿತರ ಚೀಟಿದಾರರಲ್ಲಿಯೂ ಜಾತಿ ದೃಢೀಕರಣ ಪತ್ರ ಕೇಳುತ್ತಿರುವುದರಿಂದ ಸಾರ್ವಜನಿಕರಲ್ಲಿ ಗೊಂದಲ ಉಂಟಾಗಿದೆ ಎಂದು ತಿಳಿಸಿದ್ದಾರೆ.
ಆಹಾರ ಇಲಾಖೆ ತಕ್ಷಣವೇ ಎಲ್ಲಾ ನ್ಯಾಯಬೆಲೆ ಅಂಗಡಿಗಳಿಗೆ ಸ್ಪಷ್ಟ ನಿರ್ದೇಶನ ನೀಡುವ ಮೂಲಕ ಜನರಲ್ಲಿ ಉಂಟಾಗಿರುವ ಗೊಂದಲ ನಿವಾರಿಸಬೇಕು. ರಾಜ್ಯದಲ್ಲಿ ಎಸ್‌ಐಆರ್ ಪ್ರಕ್ರಿಯೆ ನಡೆಯುತ್ತಿರುವ ಸಂದರ್ಭದಲ್ಲಿ ಈ ರೀತಿಯ ಮ್ಯಾಪಿಂಗ್ ಕಾರ್ಯ ಕೈಗೊಂಡಿರುವುದು ಸೂಕ್ತವಲ್ಲ. ಆದ್ದರಿಂದ ಎಸ್‌ಐಆರ್ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಜಾತಿ ಪ್ರಮಾಣ ಪತ್ರ ಮ್ಯಾಪಿಂಗ್ ಪ್ರಕ್ರಿಯೆಯನ್ನು ಮುಂದೂಡಬೇಕು ಎಂದು ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರವನ್ನು ಒತ್ತಾಯಿಸಲಾಗಿದೆ.
ಇದೇ ವೇಳೆ ಗೃಹ ಜ್ಯೋತಿ ಯೋಜನೆಗೆ ಸಂಬಂಧಿಸಿದ ಸರ್ವೆ ಹಾಗೂ ಮಾಹಿತಿ ಸಂಗ್ರಹ ಕಾರ್ಯವನ್ನೂ ಎಸ್‌ಐಆರ್ ಪ್ರಕ್ರಿಯೆ ಮುಗಿದ ಬಳಿಕ ಮುಂದುವರಿಸಬೇಕು. ಸರ್ಕಾರ ಈ ಬೇಡಿಕೆಗಳನ್ನು ಪರಿಗಣಿಸದಿದ್ದಲ್ಲಿ ಸಂಬಂಧಿತ ಎರಡು ಇಲಾಖೆಗಳ ಕಚೇರಿಗಳ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಹೆಚ್. ಬಿ. ರಮೇಶ್ ಎಚ್ಚರಿಕೆ ನೀಡಿದ್ದಾರೆ.