ಪರಿಸರ ಕಾಳಜಿಯೊಂದಿಗೆ ಗಣೇಶೋತ್ಸವವನ್ನು ಆಚರಿಸಿ:ಶಾಸಕ ಎ.ಎಸ್ ಪೊನ್ನಣ್ಣ ಸಲಹೆ
ವಿರಾಜಪೇಟೆಯ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ, ವಿರಾಜಪೇಟೆ ನಗರ ಐತಿಹಾಸಿಕ ಜನೋತ್ಸವ ಸಮಿತಿ ಸಭೆಯಲ್ಲಿ ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಭಾಗವಹಿಸಿದರು. ಈ ಸಮಿತಿಯ ಅಧ್ಯಕ್ಷರೂ ಆಗಿರುವ ಶಾಸಕರು, ಈ ವರ್ಷವೂ ಅದ್ಧೂರಿಯಿಂದ ಆಚರಿಸಲ್ಪಡುವ ಶ್ರೀ ಗಣೇಶೋತ್ಸವ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಿದರು.
ಅಧ್ಯಕ್ಷ ಸ್ಥಾನವಹಿಸಿ ಸಭೆಯಲ್ಲಿ ಮಾತನಾಡಿದ ಶಾಸಕರು, ಹಲವು ಸಲಹೆ ಸೂಚನೆಗಳನ್ನು ನೀಡಿದರು. ಅತೀ ಮುಖ್ಯವಾಗಿ,ಪರಿಸರ ಕಾಳಜಿ ಯೊಂದಿಗೆ ಈ ಗಣೇಶೋತ್ಸವವನ್ನು ಆಚರಿಸುವ ಸಲಹೆ ನೀಡಿದ ಶಾಸಕರು ಪ್ರಕೃತಿಗೆ ಹಾನಿಕಾರವಾದ, ಪ್ರಾಣಿ-ಪಕ್ಷಿಗಳಿಗೆ ಹಾಗೂ ಪರಿಸರಕ್ಕೆ ಮಾರಕವಾಗಬಹುದಾದಂತಹ ಯಾವುದೇ ಬಣ್ಣವಾಗಲಿ, ಪೇಪರ್ ವಸ್ತುಗಳನ್ನಾಗಲಿ ಬಳಸದೇ ಈ ಗಣೇಶೋತ್ಸವವನ್ನು ಆಚರಿಸೋಣ ಎಂಬ ಸಲಹೆ ನೀಡಿದರು. ನಾಡಿನ ಪರಂಪರೆ, ಸಂಸ್ಕೃತಿ ಹಾಗೂ ಕಲೆಯನ್ನು ಪ್ರೋತ್ಸಾಹಿಸುವಂತಹ ಕಾರ್ಯಕ್ರಮಗಳನ್ನು ನಡೆಸುತ್ತಿರುವ ವಿರಾಜಪೇಟೆ ನಗರ ಐತಿಹಾಸಿಕ ಜನೋತ್ಸವ ಸಮಿತಿಯ ಕೆಲಸ ಕಾರ್ಯಗಳನ್ನು ಮತ್ತಷ್ಟು ಅದ್ಧೂರಿಯಾಗಿ ಮಾಡುವ ಸಲಹೆ ನೀಡಿದ ಶಾಸಕರು, ತನ್ನ ವ್ಯಾಪ್ತಿಯಲ್ಲಿ ಎಲ್ಲಾ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಮಿತಿಯ ಕಾರ್ಯಧ್ಯಕ್ಷರಾದ ಶಬರಿಷ್ ಶೆಟ್ಟಿ, ತಹಶೀಲ್ದಾರ್ ಪ್ರವೀಣ್, ಮುಖ್ಯ ಅಧಿಕಾರಿ ನಾಚಪ್ಪ, ಪುರಸಭೆ ಉಪಾಧ್ಯಕ್ಷರಾದ ಫಸಿಯಾ ತಬ್ಸುಂ, ಸದಸ್ಯರು, ಪುರಾಸಭೆ ಸದಸ್ಯರು, ಸಮಿತಿಯ ಪದಾಧಿಕಾರಿಗಳು, ಹಾಗೂ ಪ್ರಮುಖರು ಉಪಸ್ಥಿತರಿದ್ದರು.