State News

ಅಕ್ರಮ ಆನ್‌ಲೈನ್ ಜೂಜು ವಿರುದ್ಧ ಕೇಂದ್ರದ ಕ್ರಮ; ಒಂದೇ ದಿನ 242 ಜಾಲತಾಣಗಳ ನಿರ್ಬಂಧ

admincoorgdaily

Photo credit: TV09

ನವದೆಹಲಿ, ಜ.16: ಅಕ್ರಮ ಆನ್‌ಲೈನ್ ಬೆಟ್ಟಿಂಗ್ ಮತ್ತು ಗ್ಯಾಂಬ್ಲಿಂಗ್ ಚಟುವಟಿಕೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಒಂದೇ ದಿನ 242 ಅಕ್ರಮ ಬೆಟ್ಟಿಂಗ್ ಹಾಗೂ ಜೂಜು ಜಾಲತಾಣಗಳ ಲಿಂಕ್‌ಗಳನ್ನು ನಿರ್ಬಂಧಿಸಿದೆ.

2025ರ ಆಗಸ್ಟ್‌ನಲ್ಲಿ ಆನ್‌ಲೈನ್ ಗೇಮಿಂಗ್ ಕಾಯ್ದೆ ಜಾರಿಯಾದ ನಂತರ ಇದುವರೆಗೆ ದೇಶಾದ್ಯಂತ 7,800ಕ್ಕೂ ಹೆಚ್ಚು ಅಕ್ರಮ ಬೆಟ್ಟಿಂಗ್ ಮತ್ತು ಗ್ಯಾಂಬ್ಲಿಂಗ್ ವೆಬ್‌ಸೈಟ್‌ಗಳನ್ನು ಸರ್ಕಾರ ಬ್ಲಾಕ್ ಮಾಡಿದೆ. ಹೊಸ ಕಾಯ್ದೆ ಜಾರಿಯಾದ ಕೆಲವೇ ತಿಂಗಳಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದ ಜಾಲತಾಣಗಳ ಮೇಲೆ ಕ್ರಮ ಕೈಗೊಳ್ಳಲಾಗಿದೆ.

ಕಾಯ್ದೆ ಜಾರಿಗೆ ಮುನ್ನ, 2022ರಿಂದ 2025ರ ಜೂನ್‌ವರೆಗೆ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್‌ 69ಎ ಅಡಿಯಲ್ಲಿ 1,524 ಅಕ್ರಮ ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಂಗ್ ವೆಬ್‌ಸೈಟ್‌ಗಳು ಮತ್ತು ಮೊಬೈಲ್ ಆ್ಯಪ್‌ಗಳನ್ನು ಸರ್ಕಾರ ನಿರ್ಬಂಧಿಸಿತ್ತು. ಆದರೆ ಗೇಮಿಂಗ್ ಕಾಯ್ದೆ ಜಾರಿಯಾದ ಬಳಿಕ ಈ ಕ್ರಮಗಳು ಮತ್ತಷ್ಟು ತೀವ್ರಗೊಂಡಿವೆ.

ಆನ್‌ಲೈನ್ ಜೂಜು ಮತ್ತು ಬೆಟ್ಟಿಂಗ್‌ನಿಂದ ಯುವಜನತೆ ಗಂಭೀರವಾಗಿ ಹಾನಿಗೊಳಗಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಕಠಿಣ ನಿಲುವು ತಳೆದಿದೆ. ಅಕ್ರಮ ಪ್ಲಾಟ್‌ಫಾರ್ಮ್‌ಗಳಲ್ಲಿ ಹಣ ಕಳೆದುಕೊಂಡು ಹಲವರು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.

ಸಾರ್ವಜನಿಕ ಹಿತದೃಷ್ಟಿಯಿಂದ ಅಕ್ರಮ ಆನ್‌ಲೈನ್ ಬೆಟ್ಟಿಂಗ್ ಮತ್ತು ಗ್ಯಾಂಬ್ಲಿಂಗ್ ದಂಧೆಗಳ ವಿರುದ್ಧ ಕ್ರಮ ಮುಂದುವರಿಯಲಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.