State News

ಚಾಮರಾಜನಗರ: ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಕನ್ನ; ₹14.12 ಲಕ್ಷ ಕಳವು

admincoorgdaily

Photo credit: Etv bharath

ಚಾಮರಾಜನಗರ, ಡಿ.18: ಗುಂಡ್ಲುಪೇಟೆ ತಾಲೂಕಿನ ಮೂಡುಗೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿಗೆ ಕಳ್ಳರು ನುಗ್ಗಿ ರೈತರಿಂದ ಸಂಗ್ರಹಿಸಲಾಗಿದ್ದ ಸಾಲದ ಹಾಗೂ ಬಡ್ಡಿ ಹಣ ಸೇರಿ ₹14 ಲಕ್ಷ 12 ಸಾವಿರ ನಗದು ಕಳವು ಮಾಡಿದ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ.

ಸಂಘದ ಕಚೇರಿ ಬಾಗಿಲಿನ ಬೀಗ ಒಡೆದು ಒಳನುಗ್ಗಿದ ಕಳ್ಳರು , ಟೇಬಲ್‌ನಲ್ಲಿದ್ದ ಕಬೋರ್ಡ್ ಅನ್ನು ಕಬ್ಬಿಣದ ರಾಡ್‌ನಿಂದ ಮುರಿದು ಅದರಲ್ಲಿದ್ದ ನಗದು ದೋಚಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಸಂಬಂಧ ಸಂಘದ ಕಾರ್ಯದರ್ಶಿ ಚಂದ್ರಶೇಖರ್ ಅವರು ತೆರಕಣಾಂಬಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮಾಹಿತಿ ಪಡೆದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತಾ, ಡಿವೈಎಸ್‌ಪಿ ಸ್ನೇಹಾರಾಜ್, ಸರ್ಕಲ್ ಇನ್ಸ್‌ಪೆಕ್ಟರ್ ರಘು, ಸಬ್‌ಇನ್ಸ್‌ಪೆಕ್ಟರ್ ಲೋಕೇಶ್ ಸೇರಿದಂತೆ ಅಧಿಕಾರಿಗಳು ಶ್ವಾನದಳ, ಬೆರಳಚ್ಚು ತಜ್ಞರು ಹಾಗೂ ಅಪರಾಧ ತಡೆ ಪಡೆ ಜೊತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕಳ್ಳತನಕ್ಕೆ ಸಂಬಂಧಿಸಿದಂತೆ ಸುತ್ತಮುತ್ತಲ ಪ್ರದೇಶಗಳ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದ್ದು, ಆರೋಪಿಗಳ ಬಂಧನಕ್ಕೆ ಶೋಧ ಕಾರ್ಯ ತೀವ್ರಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.