ಚೆನ್ನಯ್ಯನಕೋಟೆ: ಕಾಡಾನೆ ದಾಳಿಗೆ ಯತ್ನ,ಭಯದಿಂದ ಓಡುವ ವೇಳೆ ವ್ಯಕ್ತಿ ಬಿದ್ದು ಗಾಯ
ಸಿದ್ದಾಪುರ: ಕಾಡಾನೆ ದಾಳಿಗೆ ಮುಂದಾದ ಸಂದರ್ಭ ಭಯದಿಂದ ಓಡುವ ವೇಳೆ ವ್ಯಕ್ತಿಯೋರ್ವ ರಸ್ತೆಯಲ್ಲಿ ಬಿದ್ದು ಗಾಯಗೊಂಡಿರುವ ಘಟನೆ ಚೆನ್ನಯ್ಯನಕೋಟೆ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ.
ಚೆನ್ನಯನಕೋಟೆ ಗ್ರಾಮದ ಖಾಸಗಿ ಶಾಲೆಯ ಸಮೀಪ ವಾಸವಿರುವ ಚಂದ್ರ (೪೯) ಎಂಬವರು ರಾತ್ರಿ ಕೆಲಸದ ನಿಮಿತ್ತ ಪಟ್ಟಣಕ್ಕೆ ಹೋಗಿ ಹಿಂತಿರುಗಿ ಮನೆಗೆ ಬರುವ ಸಂದರ್ಭ ರಸ್ತೆ ಮಧ್ಯದಲ್ಲಿ ಏಕಾಏಕಿ ಕಾಡಾನೆ ಅಡ್ಡಲಾಗಿ ಬಂದಿದ್ದು, ಕಾಡಾನೆಯನ್ನು ಕಂಡು ಭಯದಿಂದ ಓಡುವ ಸಂದರ್ಭ ಕಾಲು ಜಾರಿ ಬಿದ್ದು ಸಣ್ಣ ಪುಟ್ಟ ಗಾಯಗಳಾಗಿವೆ.
ಈ ಸಂದರ್ಭದಲ್ಲಿ ಚಂದ್ರ ಕಿರುಚಿಕೊಂಡಾಗ ಸ್ಥಳೀಯರು ಕೂಡಲೇ ಬಂದು ಆತನನ್ನು ಗೋಣಿಕೊಪ್ಪಲುವಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗೆ ದಾಖಲಿಸಿದ್ದಾರೆ. ಈ ಬಗ್ಗೆ ಮಾಹಿತಿ ತಿಳಿದು ಆಸ್ಪತ್ರೆಗೆ ತಿತಿಮತಿ ವಲಯ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
