ಒಣಹಾಕಿದ್ದ ಬಟ್ಟೆ ತರಲು ಹೋದಾಗ ಬಕೆಟ್‌ಗೆ ಬಿದ್ದು ಮಗು ಸಾವು; ಶಾಕ್‌ಗೆ ಒಳಗಾಗಿ ತಾಯಿ ಆತ್ಮಹತ್ಯೆ

Apr 2, 2026 - 23:24
 0  846
ಒಣಹಾಕಿದ್ದ ಬಟ್ಟೆ ತರಲು ಹೋದಾಗ ಬಕೆಟ್‌ಗೆ ಬಿದ್ದು ಮಗು ಸಾವು; ಶಾಕ್‌ಗೆ ಒಳಗಾಗಿ ತಾಯಿ ಆತ್ಮಹತ್ಯೆ
ಪ್ರಾತಿನಿಧಿಕ ಚಿತ್ರ

ಬೆಂಗಳೂರು: ಒಣಹಾಕಿದ್ದ ಬಟ್ಟೆ ತರಲು ಹೋಗಿದ್ದ ವೇಳೆ ನೀರಿನ ಬಕೆಟ್‌ನಲ್ಲಿ ಮುಳುಗಿ ಮಗು (Baby) ಸಾವನ್ನಪ್ಪಿದ್ದನ್ನು ನೋಡಿ ಶಾಕ್‌ಗೆ ಒಳಗಾಗಿ ತಾಯಿಯೂ (Mother) ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಚಂದ್ರಾಲೇಔಟ್ (Chandra Layout) ಠಾಣೆಯ ಭೈರವೇಶ್ವರ ನಗರದಲ್ಲಿ (Bhyraveshwara Nagar) ನಡೆದಿದೆ.

ಅಗಸ್ತ್ಯ ಮೃತ ಮಗು. ಪ್ರತಿಭಾ (29) ಆತ್ಮಹತ್ಯೆ ಮಾಡಿಕೊಂಡ ತಾಯಿ. ಮನೆಯಲ್ಲಿ ತಾಯಿ, ಮಗು ಇಬ್ಬರೇ ಇದ್ದಾಗ ಘಟನೆ ನಡೆದಿದೆ.

ಪ್ರತಿಭಾ ಮತ್ತು ಮಹಂತೇಶ್ ವೃತ್ತಿಯಲ್ಲಿ ಸಾಫ್ಟ್‌ವೇರ್ ಉದ್ಯೋಗಿಗಳಾಗಿದ್ದರು. ಪ್ರತಿಭಾ ವರ್ಕ್ ಫ್ರಂ ಹೋಂ ಮಾಡುತ್ತಿದ್ದರು. ಗಂಡ ಮಹಂತೇಶ್ ಕೆಲಸದ ನಿಮಿತ್ತ ಹೊರಗೆ ಹೋಗಿದ್ದರು. ರಾತ್ರಿ ಪತಿ ಮಹಂತೇಶ್ ವಾಪಸ್ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.

ಪತ್ನಿ ಬಾಗಿಲು ಓಪನ್ ಮಾಡದಿದ್ದಾಗ ಮಹಂತೇಶ್ ತನ್ನ ಬಳಿ ಇದ್ದ ಕೀಲಿಯಿಂದ ಬಾಗಿಲು ಓಪನ್ ಮಾಡಿದ್ದಾರೆ. ಒಳಗೆ ಬಂದು ನೋಡಿದಾಗ ಪ್ರತಿಭಾ ನೇಣಿಗೆ ಶರಣಾಗಿದ್ದರೆ ಮಗು ಹಾಸಿಗೆ ಮೇಲೆ ಮಲಗಿದ ಸ್ಥಿತಿಯಲ್ಲಿತ್ತು. ಮಗುವನ್ನು ನೋಡಿದಾಗ ಮಗು ಕೂಡ ಮೃತ ಪಟ್ಟಿರೋದು ದೃಢಪಟ್ಟಿದೆ.

 ಪಕ್ಕದಲ್ಲಿ ಪತ್ನಿ ಬರೆದಿಟ್ಟ ಡೆತ್ ನೋಟ್ ಕೂಡ ಪತ್ತೆಯಾಗಿದೆ. ಡೆತ್ ನೋಟ್ ಪಕ್ಕದಲ್ಲಿ ಖಾಲಿಯಾಗಿದ್ದ 15 ಮಾತ್ರೆ ಶೀಟ್ ಪತ್ತೆಯಾಗಿದೆ. ಡೆತ್‌ನೋಟ್‌ನಲ್ಲಿ ಪತ್ನಿ ಬಿಚ್ಚಿಟ್ಟ ಸತ್ಯ ನೋಡಿ ಪತಿ ಶಾಕ್ ಆಗಿದ್ದಾರೆ.

 ಡೆತ್‌ನೋಟ್‌ನಲ್ಲಿ ಏನಿದೆ? ನಾನು ಬಟ್ಟೆ ಒಣಹಾಕಿದ್ದು, ಅದನ್ನ ತರಲು ಟೆರೆಸ್‌ಗೆ ಹೋಗಿದ್ದೆ. ಈ ವೇಳೆ ಮಗು ಆಟ ಆಡಿಕೊಂಡು ಬಚ್ಚಲು ಮನೆಗೆ ಹೋಗಿದೆ. ಆ ವೇಳೆ ಬಕೆಟ್‌ನಲ್ಲಿ ಮುಳುಗಿ ಸತ್ತಿದೆ. ನನ್ನ ಮಗುವನ್ನ ಉಳಿಸಿಕೊಳ್ಳಲು ಆಗಿಲ್ಲ. ನನ್ನ ಮಗುವಿನ ಸಾವಿಗೆ ನಾನೇ ಕಾರಣ. ಹೀಗಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರೋದಾಗಿ ಪ್ರತಿಭಾ ಡೆತ್ ನೋಟ್‌ನಲ್ಲಿ ಬರೆದಿದ್ದಾರೆ.

ಮೊದಲಿಗೆ ಪ್ರತಿಭಾ ಮಾತ್ರೆ ನುಂಗಿ ಕೈ ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆದರೆ ರಕ್ತ ಬಾರದ ಹಿನ್ನೆಲೆ ನೇಣಿಗೆ ಶರಣಾಗಿದ್ದಾರೆ. ಘಟನೆ ಸಂಬಂಧ ಚಂದ್ರಾಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

What's Your Reaction?

Like Like 0
Dislike Dislike 0
Love Love 1
Funny Funny 1
Angry Angry 0
Sad Sad 4
Wow Wow 0