ನಿಶಾನಿ ಮೇಲೇರಿ ಸಂಭ್ರಮಿಸಿದ ಚಿಣ್ಣರು; ಮಡಿಕೇರಿಯ ವಾಂಡರರ‍್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಮಕ್ಕಳ ಚಾರಣ

Apr 30, 2026 - 20:24
 0  182
ನಿಶಾನಿ ಮೇಲೇರಿ ಸಂಭ್ರಮಿಸಿದ ಚಿಣ್ಣರು; ಮಡಿಕೇರಿಯ ವಾಂಡರರ‍್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಮಕ್ಕಳ ಚಾರಣ

ಮಡಿಕೇರಿ; ಆರು ಕಿ.ಮೀ.ಗಳ ಬಸ್‌ನಲ್ಲಿನ ಪಯಣ., ನಂತರ ಅಲ್ಲಿಂದ ಮೂರು ಕಿ.ಮೀ.ನಷ್ಟು ರಸ್ತೆಯಲ್ಲೇ ನಡಿಗೆ., ಬಳಿಕ ಕಾಡಿನೊಳಗೆ ಕಠಿಣ ಹಾದಿಯಲಿ ಮೂರು ಕಿ.ಮೀ.ಗಳಷ್ಟು ನಡಿಗೆ., ಕೊನೆಗೆ ತಲಪಿದ್ದು ನಿಸರ್ಗದ ಸಿರಿಯ ತುತ್ತ ತುದಿಯ ನಿಶಾನಿ ಮೊಟ್ಟೆಗೆ..! ಇಲ್ಲಿ ನಡೆದದ್ದು ಹವ್ಯಾಸಿ ಚಾರಣಿಗರಲ್ಲ., ಪುಟಾಣಿ ಮಕ್ಕಳು.., ಬೆಟ್ಟವನ್ನೇರಿ ಪ್ರಕೃತಿಯ ಸೊಬಗನ್ನು ಸವಿದ ಮಕ್ಕಳ ಸಂಭ್ರಮ ಹೇಳತೀರದ್ದಾಗಿತ್ತು., ದಣಿವು ಎಂಬ ಪದದ ಅರ್ಥವೇ ಇಲ್ಲಿ ಮಾಯವಾಗಿತ್ತು..! ಈ ಒಂದು ಸುಂದರ ಚಿತ್ರಣ ಕಂಡುಬಂದಿದ್ದು ಮಡಿಕೇರಿಯ ವಾಂಡರರ‍್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಏರ್ಪಡಿಸಲಾಗಿದ್ದ ಮಕ್ಕಳ ಚಾರಣ ಕಾರ್ಯಕ್ರಮದಲ್ಲಿ., ವಾಂಡರ‍್ರ್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ದಿ.ಸಿ.ವಿ. ಶಂಕರ್ ಸ್ವಾಮಿ ಸ್ಮರಣಾರ್ಥ ನಡೆಯುತ್ತಿರುವ ಮಕ್ಕಳ ಉಚಿತ ಬೇಸಿಗೆ ಕ್ರೀಡಾ ತರಬೇತಿ ಶಿಬಿರದ ಅಂಗವಾಗಿ ಮಕ್ಕಳಿಗೆ ನಿಶಾನಿ ಮೊಟ್ಟೆಗೆ ಚಾರಣ ಹಮ್ಮಿಕೊಳ್ಳಲಾಗಿತ್ತು.

ಜಿಲ್ಲಾ ಕ್ರೀಡಾಂಗಣದಿಂದ ೧೧೫ ಮಂದಿಯನ್ನು ಹೊತ್ತುಕೊಂಡು ಹೊರಟ ಕೊಡಗು ವಿದ್ಯಾಲಯದ ಎರಡು ಬಸ್‌ಗಳು ಮದೆನಾಡು ಬಳಿಯ ಎರಡನೇ ಮೊಣ್ಣಂಗೇರಿಯಲ್ಲಿ ಮಕ್ಕಳನ್ನು ಇಳಿಸಿತು. ಅಲ್ಲಿಂದ ರಸ್ತೆ ಮೂಲಕ ಮೊಣ್ಣಂಗೇರಿ ಶಾಲೆವರೆಗೆ ನಡೆದು ಅಲ್ಲಿ ಕೊಂಚ ವಿಶ್ರಾಂತಿ ಪಡೆದು ಮುಂದಕ್ಕೆ ಸಾಗಿ ‘ಕುಡಿಯ ಹಾರಿದ ಕಲ್ಲಿನ’ ಪ್ರದೇಶದಲ್ಲಿ ಸೇರಿದರು. ಇಲ್ಲಿಗೆ ಮೂರು ಕಿ.ಮೀ. ಕ್ರಮಿಸಿಯಾಗಿತ್ತು.

ಲಘು ಪಾನೀಯ, ತಿನಿಸುಗಳಾದ ಬಳಿಕ ಯೋಗ ಗುರು ಕೆ.ಕೆ. ಮಹೇಶ್ ಕುಮಾರ್ ಕುಡಿಯ ಹಾರಿದ ಕಲ್ಲಿನ ವಿಶೇಷತೆ ಬಗ್ಗೆ ಮಕ್ಕಳಿಗೆ ವಿವರಿಸಿ ಮಾಹಿತಿ ನೀಡಿದರು. ಕಠಿಣ ಮಾರ್ಗದ ಪಯಣ ಇಲ್ಲಿಂದ ಕಠಿಣ ಹಾದಿಯ ಪಯಣ ಆರಂಭವಾಯಿತು. ಕೆಲವು ಪುಟಾಣಿಗಳು ಕಡಿದಾದ ಮಾರ್ಗವನ್ನು ಏರಲಾಗದೆ ಹಿಂದಕ್ಕೆ ಸರಿದರು. ಕೆಲವು ಪೋಷಕರು ಹಿಂದೇಟು ಹಾಕಿದರು.

ಆದರೆ, ಇನ್ನುಳಿದ ಎಲ್ಲರೂ ಉತ್ಸಾಹ ಭರಿತರಾಗಿ ನೋಡ ನೋಡುತ್ತಿದ್ದಂತೆಯೇ ಬೆಟ್ಟದ ತುತ್ತ ತುದಿಗೆ ಏರಿಯೇಬಿಟ್ಟರು. ದೂರದಿಂದ ನೋಡುವಾಗ ಬೆಟ್ಟದ ಮೇಲೆ ಸಾಲು ಸಾಲಾಗಿ ಬಣ್ಣ ಬಣ್ಣದ ಹೂಗಳು ಅರಳಿ ನಗುತ್ತಿರುವಂತೆ ಭಾಸವಾಗುತ್ತಿತ್ತು..

! ೭೦ರ ಹರಯದವರ ಉತ್ಸಾಹ..! ಚಾರಣದಲ್ಲಿ ಮಕ್ಕಳೊಂದಿಗೆ ಪೋಷಕರು, ತರಬೇತುದಾರರೂ ಭಾಗವಹಿಸಿದ್ದರು. ಅದರಲ್ಲೂ ೭೦ವರ್ಷ ದಾಟಿದ ವಾಂಡರರ‍್ಸ್ ಕ್ಲಬ್ ಅಧ್ಯಕ್ಷ ಕೋಟೇರ ಮುದ್ದಯ್ಯ ಹಾಗೂ ಸಂಚಾಲಕ ಬಾಬು ಸೋಮಯ್ಯ ಅವರುಗಳು ಕೂಡ ತಾವೂ ಯಾರಿಗೂ ಕಡಿಮೆ ಇಲ್ಲವೆಂಬಂತೆ, ಮಕ್ಕಳನ್ನು ನಾಚಿಸುವಂತೆ ಬೆಟ್ಟವನ್ನೇರಿ ಇಳಿದು ಅಚ್ಚರಿ ಮೂಡಿಸಿದರು..!

ಭೋಜನದ ವ್ಯವಸ್ಥೆ ಚಾರಣದಲ್ಲಿ ಪಾಲ್ಗೊಂಡಿದ್ದ ಮಕ್ಕಳಿಗೆ ಮೊಣ್ಣಂಗೇರಿಯ ಶ್ರೀ ರಾಜರಾಜೇಶ್ವರಿ ಭಜನಾ ಮಂಡಳಿಯವರಿಂದ ಭಜನಾ ಮಂಡಳಿಯಲ್ಲಿ ವಿಶ್ರಮಿಸಲು ಅವಕಾಶ ಮಾಡಿಕೊಡಲಾಯಿತು. ಮಧ್ಯಾಹ್ನದ ವೇಳೆ ಭೋಜನಕ್ಕೆ ಸ್ಥಳೀಯರಾದ ತಿರುಮಲೇಶ್ ಅವರ ಮನೆಯ ಪ್ರಾಂಗಣದಲ್ಲಿ ವ್ಯವಸ್ಥೆ ಮಾಡಿ ಸಹಕರಿಸಿದರು.

ನೀರಾಟ ಆಡಿದರು..! ಬೆಟ್ಟದಿಂದ ಇಳಿದ ಬಳಿಕ ಜೋಡುಪಾಲದಲ್ಲಿರುವ ಜಲಪಾತದ ಬಳಿ ನೀರಿಗಿಳಿದ ಮಕ್ಕಳು ನೀರಾಟವಾಡಿ ಸಂಭ್ರಮಿಸಿದರು. ಬೆಳಿಗ್ಗೆಯಿಂದ ಸಂಜೆವರೆಗೆ ನಡೆದುದೆಲ್ಲವನ್ನೂ ಬದಿಗಿಟ್ಟು ನೀರಿನಲ್ಲಿ ಆಟವಾಡಿ ಉಲ್ಲಾಸಭರಿತರಾದರು..! ಬೆಟ್ಟ ಹತ್ತಿಳಿದ ಸಂದರ್ಭ ಕಾಡಿನಲ್ಲಿ ಸಿಕ್ಕ ವಿವಿಧ ಕಾಡು ಹಣ್ಣಿನ ರುಚಿಯನ್ನೂ ಸವಿದರು..!

ಸ್ಥಳೀಯರಾದ ವೆಂಕಪ್ಪ ಅವರು ಮಾರ್ಗದರ್ಶಕರಾಗಿ ಮಕ್ಕಳನ್ನು ಮುನ್ನಡೆಸಿದರೆ, ವಾಂಡ ರರ‍್ಸ್ ತರಬೇತುದಾರರುಗಳಾದ ಬೊಪ್ಪಂಡ ಶಾಂ ಪೂಣಚ್ಚ, ಕೋಟೇರ ನಾಣಯ್ಯ, ಕುಡೆಕಲ್ ಸಂತೋಷ್, ಲೋಕೇಶ್ ನಾಯ್ಡು, ಪೋಷಕರಾದ ಜನಾರ್ದನ್ ಇತರರು ಮಕ್ಕಳ ಬಗ್ಗೆ ಕಾಳಜಿ ವಹಿಸಿದ್ದರು.

ಆಪತ್ಭಾಂಧವರು..

ಚಾರಣದ ಸಂದರ್ಭದಲ್ಲಿ ಮಕ್ಕಳಿಗೆ ಮಧ್ಯಾಹ್ನದ ಊಟ ಸರಬರಾಜು ಮಾಡಲು ಬಂದಿದ್ದ ವಾಹನವೊಂದು ಸಂಜೆ ಹಿಂತಿರುಗುವ ವೇಳೆಗೆ ಮಾರ್ಗ ತಪ್ಪಿ ಇಳಿಜಾರು ಪ್ರದೇಶಕ್ಕೆ ಹೋಗಿ ಸಿಲುಕಿಕೊಂಡಿತು. ಎಷ್ಟೇ ಪ್ರಯತ್ನಪಟ್ಟರೂ ಮಣ್ಣು ರಸ್ತೆಯಲ್ಲಿ ವಾಹನ ಮುಂದೆ ಸಾಗುತ್ತಿರಲಿಲ್ಲ. ಈ ಸಂದರ್ಭದಲ್ಲಿ ಅಲ್ಲಿನ ಮರಾಟಿ ನಾಯಕ ಸಮುದಾಯಕ್ಕೆ ಸೇರಿದ ಚಂದಪ್ಪ, ಕೆ.ಕೆ. ಲೋಕೇಶ್, ಕೆ.ಎಸ್. ಅನುರಾಧ, ಪುನಿತ್ ಹಾಗೂ ವೇದಾವತಿ ಅವರುಗಳು ಹಗ್ಗ ಬಳಸಿ ವಾಹನವನ್ನು ಎಳೆದು ಮುಖ್ಯ ರಸ್ತೆಗೆ ಸರಿಸುವಲ್ಲಿ ಸಹಕಾರಿಯಾದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0