ನಾಪೋಕ್ಲುವಿನ ಮೇರಿ ಮಾತೆ ಚರ್ಚ್ ನಲ್ಲಿ ಕ್ರೈಸ್ತ ಬಾಂಧವರಿಂದ ಸಂಭ್ರಮದ ಕ್ರಿಸ್ಮಸ್ ಆಚರಣೆ
admincoorgdaily

ವರದಿ :ಝಕರಿಯ ನಾಪೋಕ್ಲು
ನಾಪೋಕ್ಲು :ನಾಪೋಕ್ಲುವಿನ ಮೇರಿಮಾತೆ ಚರ್ಚ್ ನಲ್ಲಿ ಕ್ರೈಸ್ತ ಬಾಂಧವರು ಸಂಭ್ರಮ ಶ್ರದ್ದಾ ಭಕ್ತಿಯಿಂದ ಕ್ರಿಸ್ಮಸ್ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದರು.
ಚರ್ಚ್ ಧರ್ಮ ಗುರುಗಳಾದ ಜ್ಞಾನ ಪ್ರಕಾಶ್ ಅವರ ನೇತೃತ್ವದಲ್ಲಿ ಸುಂದರವಾಗಿ ನಿರ್ಮಿಸಿದ್ದ ಗೋದಲಿಯಲ್ಲಿ ಯೇಸುವಿನ ಬಾಲರೂಪವನ್ನು ಪ್ರತಿಷ್ಠಾಪಿಸಲಾಯಿತು. ಬಳಿಕ ದಿವ್ಯ ಆಡಂಬರ ಗಾಯನ ಬಲಿ ಪೂಜೆ ಅರ್ಪಿಸಿ ಊರಿನ ಸಮಸ್ತ ಜನರಿಗೋಸ್ಕರ ಸಾಮೂಹಿಕವಾಗಿ ವಿಶೇಷ ಪ್ರಾರ್ಥನೆಯನ್ನು ನೆರವೇರಿಸಿ ಕ್ರಿಸ್ಮಸ್ ಹಬ್ಬದ ಶುಭಾಶಯ ಕೋರಿದರು.
ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಯೇಸುವಿನ ಗೋದಲಿ ನಿರ್ಮಿಸುವ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಬಾಬಿ ವೇಗಸ್ ಪಡೆದುಕೊಂಡರು. ದ್ವಿತೀಯ ಬಹುಮಾನವನ್ನು ಕೆ. ಜೆ.ರಾಯ್ ಪಡೆದುಕೊಂಡರೆ, ತೃತೀಯ ಬಹುಮಾನವನ್ನು ಜಾಲಿ ಅಬ್ರಹಾಂ ಪಡೆದುಕೊಂಡರು. ಸ್ಪರ್ಧೆಯಲ್ಲಿ ವಿಜೇತರಿಗೆ ಕೆ.ಜೆ. ಜಾಯ್ ಅವರ ಪ್ರಾಯೋಜಕತ್ವದಲ್ಲಿ ನೀಡಿರುವ ರೋಲಿಂಗ್ ಟ್ರೋಫಿ ಹಾಗೂ ಬಹುಮಾನವನ್ನು ಚರ್ಚ್ ನ ಧರ್ಮ ಗುರುಗಳಾದ ಜ್ಞಾನಪ್ರಕಾಶ್ ಅವರು ವಿತರಿಸಿದರು.ಇದೇ ಸಂದರ್ಭ ಸಾಂತ ಕ್ಲಾಸ್ ವೇಷಧಾರಿ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಲ್ಲಿ ಪಾಲ್ಗೊಂಡ ಮಕ್ಕಳಿಗೆ ಉಡುಗೊರೆ
ವಿತರಿಸಿದರು. ಬಳಿಕ ಕೇಕ್ ಕತ್ತರಿಸಿ ಎಲ್ಲರಿಗೂ ಹಂಚುವ ಮೂಲಕ ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿ ಸಂಭ್ರಮ ಸಡಗರದಿಂದ ಕ್ರಿಸ್ಮಸ್ ಹಬ್ಬವನ್ನು ಆಚರಿಸಿದರು. ಹಬ್ಬದ ಪ್ರಯುಕ್ತ ಚರ್ಚ್ ನಲ್ಲಿ ನಿರ್ಮಿಸಲಾದ ಭವ್ಯ ಯೇಸುವಿನ ಗೋದಲಿ ಹಾಗೂ ಚರ್ಚ್ ನ ದೀಪಾಲಂಕಾರ ನೋಡುಗರ ಗಮನ ಸೆಳೆಯಿತು.
ಈ ಸಂದರ್ಭ ದೇವಾಲಯದ ಆಡಳಿತ ಮಂಡಳಿ ಪದಾಧಿಕಾರಿಗಳು, ಯುವಕ ಸಂಘದ ಸದಸ್ಯರು ನಾಡಿನ ಎಲ್ಲಾ ಕ್ರೈಸ್ತ ಬಾಂಧವರು ಪಾಲ್ಗೊಂಡಿದ್ದರು.