ಕುಶಾಲನಗರದಲ್ಲಿಸ್ವಚ್ಛ ಕೊಡಗು- ಸುಂದರ ಕೊಡಗು ಅಭಿಯಾನ: ಛೇಂಬರ್, ರೆಸಾರ್ಟ್ ಸಂಘಟನೆ ಸೇರಿದಂತೆ ವಿವಿಧ ಸಂಸ್ಥೆಗಳ ವತಿಯಿಂದ ಸ್ವಚ್ಛತಾ ಆಂದೋಲನ

ಕುಶಾಲನಗರದಲ್ಲಿಸ್ವಚ್ಛ ಕೊಡಗು- ಸುಂದರ ಕೊಡಗು ಅಭಿಯಾನ:  ಛೇಂಬರ್, ರೆಸಾರ್ಟ್ ಸಂಘಟನೆ ಸೇರಿದಂತೆ ವಿವಿಧ ಸಂಸ್ಥೆಗಳ ವತಿಯಿಂದ ಸ್ವಚ್ಛತಾ ಆಂದೋಲನ

ಕುಶಾಲನಗರ ಅ.15: ಕೊಡಗು ಜಿಲ್ಲೆಯಲ್ಲಿ ಜಿಲ್ಲಾ ಹೋಟೆಲ್ ಮತ್ತು ರೆಸಾರ್ಟ್ ಅಸೋಸಿಯೇಷನ್ ಮತ್ತು ಜಿಲ್ಲಾ ಛೇಂಬರ್ ಆಫ್ ಕಾಮರ್ಸ್ ಸಂಘಟನೆ ಹಾಗೂ ಮತ್ತಿತರ ಸಂಘಟನೆಗಳ ಸಹಯೋಗದೊಂದಿಗೆ ಬುಧವಾರ ಜಿಲ್ಲೆಯಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛ ಕೊಡಗು- ಸುಂದರ ಕೊಡಗು: ಸ್ವಚ್ಛತಾ ಅಭಿಯಾನವನ್ನು ಜಿಲ್ಲೆಯ ವಾಣಿಜ್ಯ ನಗರಿಯಾದ ಕುಶಾಲನಗರ ಪಟ್ಟಣದಲ್ಲಿ ವಿವಿಧ ಸಂಘ- ಸಂಸ್ಥೆಗಳು ಹಾಗೂ ನಾಗರಿಕರ ಸಮ್ಮುಖದಲ್ಲಿ ಯಶಸ್ವಿಯಾಗಿ ನಡೆಸಲಾಯಿತು.

 ಕುಶಾಲನಗರ ಪಟ್ಟಣದಲ್ಲಿಗಣಪತಿ ದೇವಸ್ಥಾನದ ಮುಂಭಾಗದಲ್ಲಿನ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ವೃತ್ತದಲ್ಲಿ ಸ್ವಚ್ಛತಾ ಆಂದೋಲನಕ್ಕೆ ಬುಧವಾರ ಚಾಲನೆ ನೀಡಲಾಯಿತು. ಸ್ವಚ್ಛತೆ ಕುರಿತ ಘೋಷಣೆಗಳು ಹಾಗೂ ಸ್ವಚ್ಚತಾ ಪ್ರತಿಜ್ಞಾ ವಿಧಿ ಸ್ವೀಕರಿಸುವ ಮೂಲಕ ದಾರಿಯಲ್ಲಿ ಬಿದ್ದಿದ್ದ ಕಸ,ಕಡ್ಡಿ, ಪ್ಲಾಸ್ಟಿಕ್ ತ್ಯಾಜ್ಯ ಮತ್ತಿತರ ಕಸವನ್ನು ಹೆರಕಿ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛ ಮಾಡಲಾಯಿತು.

 ಸ್ವಚ್ಚತಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಪುರಸಭೆ ಅಧ್ಯಕ್ಷೆ ಜಯಲಕ್ಷ್ಮಿ ಚಂದ್ರು, ಕುಶಾಲನಗರ ಪಟ್ಟಣ ಸೇರಿದಂತೆ ಜಿಲ್ಲೆಯಲ್ಲಿ ಸ್ವಚ್ಚತೆ ಕಾಪಾಡಲು ಸಾರ್ವಜನಿಕರ ಸಹ­ಭಾಗಿತ್ವ ಅಗತ್ಯ ಎಂದರು.

ಸ್ವಚ್ಛತಾ ಕಾರ್ಯದ ಉದ್ದೇಶ ಕುರಿತು ಮಾಹಿತಿ ನೀಡಿದ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ನ ಅಧ್ಯಕ್ಷ ಬಿ.ಆರ್.ನಾಗೇಂದ್ರಪ್ರಸಾದ್ ಮಾತನಾಡಿ, ಜಿಲ್ಲೆಯಲ್ಲಿ ಸ್ವಚ್ಛ, ಹಸಿರು ಹಾಗೂ ಸುಂದರ ಪರಿಸರ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು. ಜಿಲ್ಲೆಯಲ್ಲಿ ಈ ದಿನ ಏಕಕಾಲದಲ್ಲಿ ಹಮ್ಮಿಕೊಂಡಿರುವ ಸ್ವಚ್ಚತಾ ಅಭಿಯಾನವನ್ನು ನಿರಂತರವಾಗಿ ಮುಂದುವರಿಸಿಕೊಂಡು ಹೋಗುವ ಮೂಲಕ ಜಿಲ್ಲೆಯನ್ನು ಸ್ವಚ್ಛ ಕೊಡಗು ಮತ್ತು ಸುಂದರ‌ ಕೊಡಗು ಜಿಲ್ಲೆಯನ್ನಾಗಿ ರೂಪಿಸಲು ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.

ಚೇಂಬರ್ ಆಫ್ ಕಾಮರ್ಸ್ ನ ಕುಶಾಲನಗರ ಸ್ಥಾನೀಯ ಸಮಿತಿಯ ಅಧ್ಯಕ್ಷ ಕೆ.ಎಸ್.ನಾಗೇಶ್ ಮಾತನಾಡಿ, ಈ ಸ್ವಚ್ಚತಾ ಆಂದೋಲನವು ಒಂದು ದಿನಕ್ಕೆ ಸೀಮಿತಗೊಳ್ಳದೇ ನಿರಂತರವಾಗಿ ಮುಂದುವರೆಯುವ ಮೂಲಕ ಸ್ವಚ್ಚ ಪರಿಸರ ನಿರ್ಮಾಣಕ್ಕೆ ಪಣ ತೊಡಬೇಕಿದೆ ಎಂದರು.

ಸ್ವಚ್ಚತಾ ಪ್ರತಿಜ್ಞಾ ವಿಧಿ ಬೋಧಿಸಿದರ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿಯ ಅಧ್ಯಕ್ಷರೂ ಆದ ಜಿಲ್ಲಾ ಪರಿಸರ ಜಾಗೃತಿ ಆಂದೋಲನದ ಸಂಚಾಲಕ ಟಿ.ಜಿ.ಪ್ರೇಮಕುಮಾರ್ ಮಾತನಾಡಿ, ಪರಿಸರಕ್ಕೆ ಮಾರಕವಾದ ಏಕ ಬಳಕೆಯ ಪ್ಲಾಸ್ಟಿಕ್ ತ್ಯಜಿಸುವ ಮೂಲಕ ಪರಿಸರ ಸ್ನೇಹಿ ವಸ್ತುಗಳನ್ನು ಬಳಕೆ ಮಾಡುವ ಮೂಲಕ ಸ್ವಚ್ಛ, ನೈರ್ಮಲ್ಯ, ಹಸಿರು ಹಾಗೂ ಸುಂದರ ಪರಿಸರ ನಿರ್ಮಾಣಕ್ಕೆ ಸಂಕಲ್ಪ ತೊಡಬೇಕು. ಕಸವನ್ನು ಎಲ್ಲೆಂದರಲ್ಲಿ ಬಿಸಾಕದೆ ಸೂಕ್ತವಾಗಿ ವಿಲೇವಾರಿ ಮಾಡುವ ಮೂಲಕ ಪರಿಸರ ಸ್ವಚ್ಚತೆ ಕಾಪಾಡುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದರು.

ಕುಡಾ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಕುಡಾ ಮಾಜಿ ಅಧ್ಯಕ್ಷ ಬಿ.ಜಿ.ಮಂಜುನಾಥ್ ಗುಂಡೂರಾವ್, ಪೊಲೀಸ್ ವೃತ್ತ‌ ನಿರೀಕ್ಷಿಕ ದಿನೇಶ್ ಕುಮಾರ್, ಪುರಸಭೆಯ ಮುಖ್ಯಾಧಿಕಾರಿ ಟಿ.ಜೆ.ಗಿರೀಶ್, ಹಿರಿಯ ಆರೋಗ್ಯ ನಿರೀಕ್ಷಕ ಉದಯ್ ಕುಮಾರ್, ಟ್ರಾವೆಲ್ಸ್ ಅಸೋಸಿಯೇಷನ್ ನ ಪ್ರಮುಖರಾದ ಜನಾರ್ದನ ಪ್ರಭು, ಡಿ.ಕೆ.ಮಂಜುನಾಥ್, ಚಂದ್ರು, ವಿವಿಧ ಸಂಘಟನೆಗಳ ಪ್ರಮುಖರಾದ ಜೋಸೆಫ್ ವಿಕ್ಟರ್ ಸೋನ್ಸ್, ಚೇಂಬರ್ ನ ಪ್ರಮುಖರಾದ ಎಂ.ಡಿ.ರಂಗಸ್ವಾಮಿ, ಚಿತ್ರಾ ರಮೇಶ್, ಕೆ.ಎಸ್.ರಾಜಶೇಖರ್, ಟ್ರಾವೆಲ್ಸ್ ಅಸೋಸಿಯೇಷನ್ ನ ಪ್ರಮುಖರಾದ ಜನಾರ್ದನ ಪ್ರಭು, ಡಿ.ಕೆ.ಮಂಜುನಾಥ್, ಚಂದ್ರು, ವಿವಿಧ ಸಂಘಟನೆಗಳ ಪ್ರಮುಖರಾದ ಜೋಸೆಫ್ ವಿಕ್ಟರ್ ಸೋನ್ಸ್, ಕೆ.ಜಿ.ಸತೀಶ್,ಕೆ.ಬಿ.ರಾಜು, ವಿ.ಪಿ.ಮುರುಳಿ, ಪಿ.ಎಸ್. ಸುಂದರ್ , ವಿ.ಆರ್.ಮಂಜುನಾಥ್ ಸೇರಿದಂತೆ ಪೌರ ಕಾರ್ಮಿಕರು, ನಾಗರಿಕರು ಪಾಲ್ಗೊಂಡಿದ್ದರು.

ಪಟ್ಟಣದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ವೃತ್ತದಿಂದ ಆರಂಭಗೊಂಡ ಸ್ವಚ್ಚತಾ ಕಾರ್ಯವು ಪಟ್ಟಣದ ಪ್ರಮುಖ ಬೀದಿ, ಅಯ್ಯಪ್ಪ ಸ್ವಾಮಿ ರಸ್ತೆ, ರಥಬೀದಿ, ಬಸ್ ನಿಲ್ದಾಣದ ಬಳಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ವಚ್ಚತೆ ನಡೆಸಲಾಯಿತು. ಪಟ್ಟಣದ ಪ್ರಮುಖ ರಸ್ತೆ, ರಥಬೀದಿ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಪುರಸಭೆಯ ಪೌರ ಕಾರ್ಮಿಕರು ಕಸ,ಕಡ್ಡಿ ಮತ್ತಿತರ ತ್ಯಾಜ್ಯವನ್ನು ತೆಗೆದು ಸ್ವಚ್ಚಗೊಳಿಸಿದ್ದು ಗಮನ ಸೆಳೆಯಿತು.

ಕುಶಾಲನಗರ ಪಟ್ಟಣದ ಹೃದಯಭಾಗವಾದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ವೃತ್ತದಿಂದ ಆರಂಭಗೊಂಡ ಸ್ವಚ್ಚತಾ ಆಂದೋಲನದಲ್ಲಿ ಕುಶಾಲನಗರ ಪುರಸಭೆ, ಛೇಂಬರ್ ಆಫ್ ಕಾಮರ್ಸ್, ಹೋಟೆಲ್ ಮತ್ತು ರೆಸಾರ್ಟ್ ಅಸೋಸಿಯೇಷನ್, ಕುಡಾ, ಜೆಸಿಐ, ಟ್ರಾವೆಲ್ಸ್ ಅಸೋಸಿಯೇಷನ್, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಭಾರತ್ ಸ್ಕೌಟ್ಸ್, ಗೈಡ್ಸ್ ಸಂಸ್ಥೆ, ವಾಸವಿ ಕ್ಲಬ್ ಸೇರಿದಂತೆ ಮತ್ತಿತರ ಸಂಘ ಸಂಸ್ಥೆಗಳು , ನಾಗರಿಕರು ಪಾಲ್ಗೊಂಡಿದ್ದರು .