ಈದ್ ಮಿಲಾದ್ ಪ್ರಯುಕ್ತ ಕೊಟ್ಟಮುಡಿಯಲ್ಲಿ ಬಡವರ ನೆರವು ಸಂಘಟನೆ ಹಾಗೂ ಅಭಿವೃದ್ಧಿ ಸಮಿತಿಯಿಂದ ಸ್ವಚ್ಛತಾ ಅಭಿಯಾನ
admincoorgdaily

ವರದಿ :ಝಕರಿಯ ನಾಪೋಕ್ಲು
ನಾಪೋಕ್ಲು : ಪ್ರವಾದಿ ಮಹಮ್ಮದ್ ಪೈಗಂಬರ್ ರವರ 1501ನೇ ಜನ್ಮದಿನಾಚರಣೆಯ ಅಂಗವಾಗಿ ಆಚರಿಸಲ್ಪಡುವ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಕೊಟ್ಟಮುಡಿಯಲ್ಲಿ ಬಡವರ ನೆರವು ಸಂಘಟನೆ ಹಾಗೂ ಅಭಿವೃದ್ಧಿ ಸಮಿತಿ ವತಿಯಿಂದ ಕೊಟ್ಟಮುಡಿ ನಾಪೋಕ್ಲು ಮುಖ್ಯರಸ್ತೆಯಲ್ಲಿ ಸ್ವಚ್ಛತಾ ಅಭಿಯಾನ ನಡೆಸಲಾಯಿತು.
ನಾಪೋಕ್ಲು ಮಡಿಕೇರಿ ಮುಖ್ಯ ರಸ್ತೆಯ ಕೊಟ್ಟಮುಡಿ ಜಂಕ್ಷನ್‌ನಿಂದ ಕೇಮಾಟ್ ವರೆಗೆ ರಸ್ತೆಯ ಎರಡು ಬದಿಗಳ ಇಕ್ಕೆಲಗಳಲ್ಲಿ ಆವರಿಸಿಕೊಂಡಿದ್ದ ಕಾಡುಗಳನ್ನು ಕಡಿದು ಪ್ಲಾಸ್ಟಿಕ್ ಇನ್ನಿತರ ಕಸ ತ್ಯಾಜ್ಯಗಳನ್ನು ಸ್ವಚ್ಛತಾ ಶ್ರಮದಾನದ ಮೂಲಕ ತೆರವುಗೊಳಿಸಿ ಸಾರ್ವಜನಿಕರ ಹಾಗೂ ವಾಹನ ಸವಾರರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.
ಹೊದ್ದೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವತ್ಸಲ ಅವರು ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ ಸಾಮಾಜಿಕ ಜವಾಬ್ದಾರಿಯ ನೆಲೆಯಲ್ಲಿ ಕೊಟ್ಟಮುಡಿಯ ಯುವಕರು ಹಮ್ಮಿಕೊಂಡಿರುವ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ಶ್ಲಾಘನೀಯವಾದದ್ದು.ಗ್ರಾಮಗಳ ಸ್ವಚ್ಛತೆ ಪಂಚಾಯಿತಿಯ ಜವಾಬ್ದಾರಿ ಮಾತ್ರವಲ್ಲ ಜನಗಳ ಪಾಲ್ಗೊಳ್ಳುವಿಕೆ ಕೂಡ ಬಹಳ ಮುಖ್ಯವಾಗಿದೆ. ಇದಕ್ಕೆ ಇಲ್ಲಿನ ಯುವಕರು ಹಮ್ಮಿಕೊಂಡಿರುವ ಅಭಿಯಾನ ಮಾದರಿಯಾಗಿದೆ. ಇಂತಹ ಸ್ವಚ್ಛತಾ ಅಭಿಯಾನ ಪಂಚಾಯಿತಿ ವ್ಯಾಪ್ತಿಯ ಎಲ್ಲಕಡೆ ನಡೆಯುವಂತ್ತಾಗಬೇಕು. ಸ್ವಚ್ಛತಾ ಅಭಿಯಾನ ಒಂದು ದಿನಕ್ಕೆ ಮಾತ್ರ ಸೀಮಿತವಾಗದೆ ಸ್ವಚ್ಛಪಡಿಸಿದ ಸ್ಥಳದಲ್ಲಿ ಮತ್ತೊಮ್ಮೆ ಕಸ ಹಾಕದ ರೀತಿಯಲ್ಲಿ ಜನರಿಗೆ ಅರಿವು ಮೂಡಿಸಬೇಕು. ನಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಸಗಳು ಉತ್ಪತ್ತಿಯಾಗದ ರೀತಿಯಲ್ಲಿ ಜನರಿಗೆ ಅರಿವು ಬರಬೇಕಾಗಿದೆ. ಅದರಂತೆ ನಮ್ಮ ಗ್ರಾಮ ವ್ಯಾಪ್ತಿಯನ್ನು ಪ್ಲಾಸ್ಟಿಕ್ ಮುಕ್ತವಾಗಿಸಲು ಎಲ್ಲರಿಗೂ ಜವಾಬ್ದಾರಿ ಬರುವಂತಾಗಲಿ ಎಂದು ಸ್ವಚ್ಛತಾ ಅಭಿಯಾನ ತಂಡಕ್ಕೆ ಶುಭ ಕೋರಿದರು.
ಬಡವರ ನೆರವು ಸಂಘಟನೆ ಸದಸ್ಯ,ಸಮಾಜ ಸೇವಕ ಮೈಸಿ ಕತ್ತಣೀರ ಮಾತನಾಡಿ ಈದ್ ಮಿಲಾದ್ ಹಬ್ಬದ ಪ್ರಯುಕ್ತ ನಮ್ಮ ಗ್ರಾಮದ ಮುಖ್ಯರಸ್ತೆಗಳಲ್ಲಿ ಸಂದೇಶ ಜಾತ ನಡೆಯಲಿದೆ. ಇದರಿಂದ ವಾಹನ ಸಂಚಾರಕ್ಕೆ ಅಡಚಣೆ ಆಗಬಾರದು ಎಂಬ ಉದ್ದೇಶ ಹಾಗೂ ಗ್ರಾಮದಲ್ಲಿ ಸ್ವಚ್ಛತೆಯನ್ನು ಕಾಪಾಡುವ ನಿಟ್ಟಿನಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸ್ವಚ್ಛತಾ ಅಭಿಯಾನವನ್ನು ಕೈಗೊಳ್ಳಲಾಗಿದೆ ಎಂದರು.
ಸ್ವಚ್ಛತಾ ಅಭಿಯಾನ ಕಾರ್ಯಕ್ರಮದಲ್ಲಿ ಬಡವರ ನೆರವು ಸಂಘಟನೆ ಹಾಗೂ ಅಭಿವೃದ್ಧಿ ಸಮಿತಿಯ ಸದಸ್ಯರಾದ ಕೆ.ಎಚ್.ಶೌಕತ್, ಎಂ. ಬಿ.ಹಮೀದ್ ,ಮಹಮ್ಮದ್, ಆಬಿದ್ ಕೆ. ಎಚ್, ರಫೀಕ್, ಜಾಫರ್, ಜಕರಿಯ, ಆಟೋ ಹಂಸ, ಬಷೀರ್, ಸರ್ದಾರ್, ಅಜ್ಮಲ್, ಸೈಫುದ್ದೀನ್, ಮುಜೀಬ್, ಅಬ್ದುಲ್ಲಾ, ಹಮೀದ್, ಸಹೀರ್ ಮತ್ತಿತರರು ಪಾಲ್ಗೊಂಡಿದ್ದರು.