ಸ್ವಚ್ಛ ಕೊಡಗು- ಸುಂದರ ಕೊಡಗು ಅಭಿಯಾನದ ಪ್ರಯುಕ್ತ ನಾಪೋಕ್ಲುವಿನಲ್ಲಿ ಸ್ವಚ್ಛತಾ ಶ್ರಮದಾನ

ಸ್ವಚ್ಛ ಕೊಡಗು- ಸುಂದರ ಕೊಡಗು ಅಭಿಯಾನದ ಪ್ರಯುಕ್ತ ನಾಪೋಕ್ಲುವಿನಲ್ಲಿ ಸ್ವಚ್ಛತಾ ಶ್ರಮದಾನ

ವರದಿ:ಝಕರಿಯ ನಾಪೋಕ್ಲು

 ನಾಪೋಕ್ಲು : ಕೂರ್ಗ್ ಹೋಟೆಲ್, ರೆಸಾರ್ಟ್ ಅಸೋಸಿಯೇಷನ್ ವತಿಯಿಂದ ಜಿಲ್ಲಾದ್ಯಂತ ಹಮ್ಮಿಕೊಂಡಿರುವ ಸ್ವಚ್ಛಗೊಡಗು ಸುಂದರ ಕೊಡಗು ಸ್ವಚ್ಛತಾ ಅಭಿಯಾನದ ಅಂಗವಾಗಿ ನಾಪೋಕ್ಲುವಿನಲ್ಲಿ ಗ್ರಾಮ ಪಂಚಾಯಿತಿ ಹಾಗೂ ವಿವಿಧ ಸಂಘ ಸಂಸ್ಥೆ, ಶಾಲೆಗಳ ಸಹಯೋಗದಲ್ಲಿ ಸ್ವಚ್ಛತಾ ಶ್ರಮದಾನ ನಡೆಯಿತು.

ನಾಪೋಕ್ಲು ಪಟ್ಟಣದಿಂದ ಮಡಿಕೇರಿ ತೆರಳುವ ಮುಖ್ಯರಸ್ತೆಯ ಕೊಟ್ಟಮುಡಿ ಜಂಕ್ಷನ್ ವರೆಗೆ, ಬೇತು ಗ್ರಾಮದ ಮುಖ್ಯರಸ್ತೆ, ನಾಪೋಕ್ಲು ಹಳೇ ತಾಲೂಕು ಮುಖ್ಯ ರಸ್ತೆ ಸೇರಿದಂತೆ ನಾಪೋಕ್ಲುಪಟ್ಟಣದಿಂದ ವಿವಿಧ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಎರಡು ಬದಿಗಳಲ್ಲಿ ಸಂಗ್ರಹವಾಗಿದ್ದ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಹೆಕ್ಕಿ ಶ್ರಮದಾನದ ಮೂಲಕ ಸ್ವಚ್ಛಗೊಳಿಸಲಾಯಿತು.

ಈ ಸಂದರ್ಭ ಪಿಪಿ ಫೌಂಡೇಶನ್ ನ ಕಾರ್ಯಾಧ್ಯಕ್ಷರಾದ ಪಿ.ಎಂ.ಸಲೀಂ ಹಾರಿಸ್ ಮಾತನಾಡಿ,  ಜಿಲ್ಲಾಧ್ಯಂತ ಹಮ್ಮಿಕೊಂಡಿರುವ ಸ್ವಚ್ಛಕೊಡಗು ಸುಂದರ ಕೊಡಗು ಅಭಿಯಾನದಲ್ಲಿ ನಾವೆಲ್ಲರೂ ಪಾಲ್ಗೊಂಡಿದ್ದೇವೆ. ನಮ್ಮ ಜಿಲ್ಲೆಯ ಸೌಂದರ್ಯವನ್ನು ಹಾಗೂ ಪರಿಸರವನ್ನು ಸಂರಕ್ಷಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಈ ಒಂದು ಸ್ವಚ್ಛತಾ ಕಾರ್ಯವು ಒಂದು ದಿನಕ್ಕೆ ಮಾತ್ರ ಸೀಮಿತವಾಗದೆ ಮುಂದಿನ ದಿನಗಳಲ್ಲಿ ಜಿಲ್ಲೆಯ ಪ್ರತಿಯೊಬ್ಬ ನಾಗರಿಕರು ತಮ್ಮ ಪರಿಸರವನ್ನು ಸ್ವಚ್ಛವಾಗಿಡಲು ಪಣ ತೊಡಬೇಕೆಂದು ಸಲಹೆ ನೀಡಿದರು.

 ಗ್ರಾಮ ಪಂಚಾಯಿತಿ ಸದಸ್ಯ ಮಾಚೇಟ್ಟಿರ ಕುಶು ಕುಶಾಲಪ್ಪ ಮಾತನಾಡಿ ಸ್ವಚ್ಛಕೊಡಗು ಸುಂದರ ಕೊಡಗು ಅಭಿಯಾನಕ್ಕೆ ನಾಪೋಕ್ಲು ವಿಭಾಗದ ಎಲ್ಲಾ ಸಂಘ ಸಂಸ್ಥೆಗಳು ಶಾಲಾ ಕಾಲೇಜುಗಳು ಉತ್ಸಾಹದಿಂದ ಕೈಜೋಡಿಸಿದ್ದಾರೆ.ನಮ್ಮ ಪರಿಸರ ಸ್ವಚ್ಛವಾಗಿದ್ದರೆ ಮಾತ್ರ ನಮ್ಮಜಿಲ್ಲೆ, ರಾಜ್ಯ ಹಾಗೂ ದೇಶ ಸ್ವಚ್ಛ ವಾಗಿರಲು ಸಾಧ್ಯ, ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಪರಿಸರ ಸ್ವಚ್ಛತೆಗೆ ಮುಂದಾಗಬೇಕೆಂದರು.

ಸ್ವಚ್ಛತಾ ಅಭಿಯಾನದಲ್ಲಿ ನಾಪೋಕ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ,ವನಜಾಕ್ಷಿ ರೇಣುಕೇಶ್,ಅಭಿವೃದ್ಧಿ ಅಧಿಕಾರಿ ಚೋಂದಕ್ಕಿ, ಸದಸ್ಯರಾದ ಮಹಮ್ಮದ್ ಕುರೇಶಿ,ಕಾಳೆಯಂಡ ಸಾಬ ತಿಮ್ಮಯ್ಯ,ಆಮಿನ, ಟಿ. ಎ. ಮಹಮ್ಮದ್,ಪಿ.ಪಿ ಫೌಂಡೇಶನ್ ನ ಪದಾಧಿಕಾರಿಗಳು,ನಾಪೋಕ್ಲು ಕೊಡವ ಸಮಾಜದ ಪದಾಧಿಕಾರಿಗಳು, ನಾಪೋಕ್ಲು ಚೇಂಬರ್ ಆಫ್ ಕಾಮರ್ಸ್ ದಸ್ಯರು,ಶ್ರೀ ಮಕ್ಕಿಶಾಸ್ತಾವು ಸೇವಾ ಕಾರ್ಯ ಪಡೆ ಸದಸ್ಯರು,ನಾಪೋಕ್ಲುವಿನ ಸೇಕ್ರೆಡ್ ಹಾರ್ಟ್ಸ್, ಎಕ್ಸೆಲ್, ಶ್ರೀ ರಾಮ ಟ್ರಸ್ಟ್, ಅಂಕುರ್ ಆಂಗ್ಲಮಾಧ್ಯಮ ಶಾಲೆ ಸೇರಿದಂತೆ ಶಾಲೆ ಕಾಲೇಜುಗಳು, ಸಂಘ-ಸಂಸ್ಥೆಗಳು ಹಾಗೂ ವಿವಿಧ ಶಾಲೆಗಳ ಶಿಕ್ಷಕರು, ವಿದ್ಯಾರ್ಥಿಗಳು,ಅಂಗನವಾಡಿ, ಆಶಾ ಕಾರ್ಯಕರ್ತೆಯರು, ನಾಗರೀಕರು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.