ಶಿಕ್ಷಣದ ಮೂಲಕ ಮುಖ್ಯ ವಾಹಿನಿಗೆ ಬನ್ನಿ : ಜೈ ಕಿರಣ್ : ಸರ್ಕಾರಿ ಶಾಲೆಯ 200 ವಿದ್ಯಾರ್ಥಿಗಳಿಗೆ ಬ್ಯಾಗ್, ಕಲಿಕಾ ಸಾಮಗ್ರಿಗಳ ವಿತರಣೆ
admincoorgdaily

ಸಿದ್ದಾಪುರ:- ಕಳೆದ 9 ವರ್ಷಗಳಿಂದಲೂ ಕೊಡಗು ಜಿಲ್ಲೆಯಲ್ಲಿ ಪ್ರವಾಹ ಪ್ರಕೃತಿ ವಿಕೋಪ, ಕೋವಿಡ್ ಸಂದರ್ಭದಲ್ಲಿ ಸಮಾಜಮುಖಿ ಕಾರ್ಯಗಳೊಂದಿಗೆ ಆರ್ಥಿಕವಾಗಿ ಸಂಕಷ್ಟದಲ್ಲಿರುವವರಿಗೆ ನೆರವಾಗುವುದರ ಮೂಲಕ ಸರ್ಕಾರಿ ಶಾಲೆಯ ಉಳಿವಿಗಾಗಿ ಶಾಲೆಯ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಪೂರಕವಾದ ಕಲಿಕಾ ಸಾಮಗ್ರಿಗಳನ್ನು ವಿತರಿಸಿಕೊಂಡು ಬರಲಾಗುತ್ತಿದ್ದು ವಿದ್ಯಾರ್ಥಿಗಳು ಶಿಕ್ಷಣದ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಂಡು ಸಮಾಜದ ಮುಖ್ಯ ವಾಹಿನಿಗೆ ಬರಬೇಕೆಂದು ಬನವಾಸಿ ಕನ್ನಡಿಗರು, ಕನ್ನಡಮಯ ಟ್ರಸ್ಟ್ ಅಧ್ಯಕ್ಷ ಜೈ ಕಿರಣ್ ಕರೆ ನೀಡಿದರು.
ವಿರಾಜಪೇಟೆ ತಾಲೂಕಿನ ಮಾಲ್ದಾರೆ ಸರ್ಕಾರಿ ಪ್ರೌಢಶಾಲಾ ಸಭಾಂಗಣದಲ್ಲಿ U.ST ಸಂಸ್ಥೆ ಬೆಂಗಳೂರು, ಬನವಾಸಿ ಕನ್ನಡಿಗರು, ಕನ್ನಡಮಯ ಟ್ರಸ್ಟ್ ಬೆಂಗಳೂರು, ನಮ್ಮ ಕೊಡಗು ತಂಡ ಮತ್ತು ಕೊಡಗು ಪತ್ರಕರ್ತರ ಸಂಘದ ಸಂಯುಕ್ತ ಅಶ್ರದಲ್ಲಿ ನಡೆದ ಕಲಿಕಾ ಸಾಮಗ್ರಿಗಳ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಇದುವರೆಗೂ 10ಕ್ಕೂ ಹೆಚ್ಚು ಶಾಲೆಗಳ 600 ವಿದ್ಯಾರ್ಥಿಗಳಿಗೆ ಕಲಿಕಾ ಪರಿಕರಗಳನ್ನು ವಿತರಣೆ ಮಾಡಲಾಗಿದೆ ಹಾಗೂ ಪ್ರವಾಹ ಕೋವಿಡ್ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಒಂದು ಲಕ್ಷಕ್ಕೂ ಹೆಚ್ಚು ಕೆಟ್ಟುಗಳನ್ನ ವಿತರಿಸಲಾಗಿದೆ.
ಪತ್ರಕರ್ತರ ಸಹಕಾರದಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನು ಗುರುತಿಸಲು ಸಾಧ್ಯವಾಗಿದೆ ಎಂದು ಹೇಳಿದ ಅವರು ಪ್ರಕೃತಿ ಸೌಂದರ್ಯದಿಂದ ಕೂಡಿರುವ ಕೊಡಗು ಜಿಲ್ಲೆಯಿಂದ ಬೆಂಗಳೂರು ಜನರ ದಾಹ ನೀಗಿಸಲು ಕಾವೇರಿ ನೀರು ಸಿಗುತ್ತಿದ್ದು ಮಣ್ಣಿನ ಋಣ ತೀರಿಸಲು ವಿವಿಧ ಸಂಸ್ಥೆಗಳ ಸಹಕಾರದೊಂದಿಗೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇವೆ ಸರ್ಕಾರಿ ಶಾಲೆಯ ಉಳಿವಿನೊಂದಿಗೆ ಗ್ರಾಮೀಣ ಭಾಗದ ಮಕ್ಕಳು ಶಿಕ್ಷಣ ಕಲಿಯುವ ಮೂಲಕ ಸಮಾಜದ ಮುಖ್ಯ ವಾಹಿನಿಗೆ ಬಂದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗಲಿದೆ ಆರ್ಥಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳ ಶಿಕ್ಷಣ ಕಲಿಕೆಗೆ ದಾನಿಗಳು ಹೆಚ್ಚಿನ ಸಹಕಾರ ನೀಡಬೇಕಾಗಿದೆ ಎಂದರು.
ಅಂಬೇಡ್ಕರ್ ಸೇನೆ ಜಿಲ್ಲಾಧ್ಯಕ್ಷ ಸತೀಶ್ ಮಾತನಾಡಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಿಗೆ ಹೆಚ್ಚಾಗಿ ಆಗಮಿಸುತ್ತಿದ್ದು ವಿದ್ಯಾರ್ಥಿಗಳ ಶಿಕ್ಷಣದ ಭವಿಷ್ಯಕ್ಕೆ ನೆರವಾಗಲು ಸರ್ಕಾರಗಳು ಹಾಗೂ ವಿವಿಧ ಸಮಾಜ ಸೇವಾ ಸಂಸ್ಥೆಗಳು ಎಲ್ಲ ರೀತಿಯ ಸಹಕಾರ ನೀಡುತ್ತಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ಶಿಕ್ಷಣದ ಮೂಲಕ ಮುಖ್ಯ ವಾಹಿನಿಗೆ ಬಂದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗಲಿದೆ. ಸರ್ಕಾರಿ ಶಾಲೆಗಳ ಉಳಿವಿಗಾಗಿ ಸಮಾಜ ಸೇವಾ ಸಂಘಟನೆಗಳು ನಿರಂತರ ಶ್ರಮಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಆದಿವಾಸಿ ಮುಖಂಡ ಜೆ ಕೆ ರಾಮ ಮಾತನಾಡಿ ಕಾಡಂಚಿನ ಗ್ರಾಮೀಣ ಭಾಗದ ಜನರು ಹಾಗೂ ವಿದ್ಯಾರ್ಥಿಗಳನ್ನು ಗುರುತಿಸಿ ಶಿಕ್ಷಣದ ಮೂಲಕ ಸಮಾಜದ ಮುಖ್ಯ ವಾಹಿನಿಗೆ ತರಲು ಪತ್ರಕರ್ತರ ಸಾಮಾಜಿಕ ಕಳಕಳಿಯೊಂದಿಗೆ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವುದರಿಂದಲೇ ಬೆಂಗಳೂರಿನ U.ST ಸಂಸ್ಥೆ , ಬನವಾಸಿ ಕನ್ನಡಿಗರು, ಕನ್ನಡಮಯ ಟ್ರಸ್ಟ್ , ನಮ್ಮ ಕೊಡಗು ತಂಡದವರು ಕಳೆದ 9 ವರ್ಷಗಳಿಂದಲೂ ಹಾಡಿ ಜನರ ಕಷ್ಟ ಸುಖಗಳನ್ನ ಕೇಳಿ ಕಿಟ್ಟು ಗಳನ್ನು ವಿತರಣೆ ಮಾಡುವುದರ ಮೂಲಕ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಸಹಕಾರ ನೀಡುತ್ತಿದ್ದಾರೆ. ಪತ್ರಕರ್ತರು ಸುದ್ದಿಗೆ ಮಾತ್ರ ಸೀಮಿತವಾಗದೆ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವುದರಿಂದಲೇ ಅರಣ್ಯದಂಚಿನ ಆದಿವಾಸಿಗಳು ಅಭಿವೃದ್ಧಿಯೊಂದಿಗೆ ಮುಂದೆ ಬರಲು ಸಾಧ್ಯವಾಗುತ್ತಿದೆ ಎಂದರು.
ಬನವಾಸಿ ಕನ್ನಡಿಗರು,ಕನ್ನಡಮಯ ಟ್ರಸ್ಟ್ ನ ಪ್ರಮುಖರಾದ ಶಮಂತ್ ಹೊಸಹೊಳಲು ಮಾತನಾಡಿ ಪ್ರಕೃತಿ ಸೌಂದರ್ಯವನ್ನು ಉಳಿಸಿ ಬೆಳೆಸಲು ಪರಿಸರ ರಕ್ಷಣೆಗೆ ಎಲ್ಲರೂ ಕೈಜೋಡಿಸುವುದರ ಮೂಲಕ ಮೂಲಕ ಆಚಾರ ವಿಚಾರ ಸಂಸ್ಕೃತಿ ಪರಂಪರೆಯನ್ನು ಮುಂದಿನ ಪೀಳಿಗೆಗೂ ಪರಿಚಯಿಸುವುದರೊಂದಿಗೆ ಶಾಲಾ ಮಕ್ಕಳ ಶಿಸ್ತು ಮತ್ತು ಭೌದ್ಧಿಕ ಚುರುಕುತನ , ಮರಗಿಡಗಳ ಮತ್ತು ಫಲಪುಷ್ಪಗಳ ನೈಸರ್ಗಿಕ ಅರಿವು ಮತ್ತು ಔಷಧೀಯ ಗುಣಗಳ ಕುರಿತು ವಿದ್ಯಾರ್ಥಿಗಳಲ್ಲಿರುವ ಜ್ಞಾನವು ಪ್ರಶಂಸನೀಯ ಎಂದು ಅಭಿಪ್ರಾಯ ಪಟ್ಟರು.
ಈ ಸಂದರ್ಭ ಯು ಎಸ್ ಟಿ ಸಂಸ್ಥೆಯ ಸಿ ಎಸ್ ಆರ್ ಹೆಡ್ ಸೃಷ್ಟಿ,ವಿಶ್ವಾಸ್, ಶ್ರೀವಸ್ತವ, ನಿಪುನ್, ನಿತಿನ್, ಮನು, ಬನವಾಸಿ ಕನ್ನಡಿಗರು ಕನ್ನಡಮಯ ಟ್ರಸ್ಟ್, ಕಿರಣ್ಮಯಿ, ತೇಜಸ್, ಧರಣಿ ರೆಡ್ಡಿ, ಧನುಷ್ ಕುಮಾರ್,ಸಮಾಜ ಸೇವಕ ಸುರೇಶ್ ಜನಪರ ಸಂಘದ ಅಧ್ಯಕ್ಷ ಬಾವ ಮಾಲ್ದಾರೆ, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರುಗಳಾದ ಸೈಯದ್ ಉಸ್ಮಾನ್, ಪ್ರೀಜಾ, ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಇಂದಿರಾ ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಈಶ್ವರಿ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ರಾಜೇಶ್ , ಕೊಡಗು ಪತ್ರಕರ್ತರ ಸಂಘದ ಗುರುದರ್ಶನ್ , ಎಸ್ ಎಂ ಮುಬಾರಕ್ ಎಂ.ಎಸ್ ಸೈನುಲ್ಲಾ, ಚೆಪ್ಪುಡೀರ ರೋಷನ್, ಖಲೀಲ್ ಸೇರಿದಂತೆ ಶಿಕ್ಷಕರುಗಳು, ವಿದ್ಯಾರ್ಥಿಗಳು, ಧರ್ಮಸ್ಥಳ ಸಂಘದ ಪ್ರಮುಖರು ಉಪಸ್ಥಿತರಿದ್ದರು.
ರಂಜಿಸಿದ ಆದಿವಾಸಿ ನೃತ್ಯ: ನಾಣಚಿ ಹಾಡಿಯ ರಮೇಶ್ ತಂಡ ಹಾಡಿದ ಶಭಾಷ್ ಚಿತ್ರದ "ಆಡಲೇ ಮರಳು ತೊಟ್ಟಿಲು ಕಟ್ಟಿ" ಹಾಡಿಗೆ ವಿಭಿನ್ನ ವೇಷಭೂಷಣ ಗಳೊಂದಿಗೆ ವಿದ್ಯಾರ್ಥಿಗಳು ಹೆಜ್ಜೆ ಹಾಕಿದ ನೃತ್ಯ ಮನಮೋಹಕವಾಗಿ ಮೂಡಿ ಬಂತು.