ಬೇಳೂರು ಗ್ರಾ.ಪಂ. ಕಚೇರಿಯಲ್ಲಿ ವಿಷ ಸೇವಿಸಲು ಕಂಪ್ಯೂಟರ್ ಆಪರೇಟರ್ ಯತ್ನ
ಸೋಮವಾರಪೇಟೆ: ಸಮೀಪದ ಬೇಳೂರು ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಎ ಮಾಡಿಕೊಂಡಿರುವ ಸಿಬ್ಬಂದಿಯೋರ್ವರು ಕಚೇರಿಯಲ್ಲಿಯೇ ವಿಷ ಸೇವಿಸಲು ಯತ್ನಿಸಿದ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.
ಗ್ರಾಮ ಪಂಚಾಯಿತಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿರುವ ಪವಿತ್ರ ಎಂಬವರು ಇಂದು ಮಧ್ಯಾಹ್ನ 1.45ರ ಸುಮಾರಿಗೆ ಕಚೇರಿಯಲ್ಲಿ ಈ ವಿಷ ಸೇವಿಸಲು ಯತ್ನಿಸಿದ್ದು, ಅಷ್ಟರಲ್ಲಿ ಸ್ಥಳದಲ್ಲಿದ್ದ ಸಿಬ್ಬಂದಿಗಳು ತಡೆದು, ಆಸ್ಪತ್ರೆಗೆ ಸಾಗಿಸಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಗ್ರಾ.ಪಂ. ಸಿಬ್ಬಂದಿ ಪವಿತ್ರ ಹಾಗೂ ಪಿಡಿಓ. ಕೆಲ ಸದಸ್ಯರುಗಳ ನಡುವೆ ಕ ಈ ಹಿಂದಿನಿಂದಲೂ ಕಚೇರಿ ಕೆಲಸದ ವಿಷಯಕ್ಕೆ ಸಂಬಂಧಿಸಿದಂತೆ,ತಗಾದೆಗಳು ಇದ್ದು, ಸಾರ್ವಜನಿಕ ಕೆಲಸ ಕಾರ್ಯಗಳಿಗೆ ಸಂಬಂಧಿಸಿದಂತೆ ಕಂಪ್ಯೂಟರ್ ಆಪರೇಟರ್ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬ ಆರೋಪ ಕೆಲವು ಸದಸ್ಯರುಗಳ ಕಡೆಯಿಂದ ಇದ್ದರೆ, ಗ್ರಾ.ಪಂ. ಪಿಡಿಓ ಹಾಗೂ ಕೆಲ ಸದಸ್ಯರು ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಕಂಪ್ಯೂಟರ್ ಆಪರೇಟರ್ ಈಗಾಗಲೇ ಪೊಲೀಸ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಸೇರಿದಂತೆ ಮಹಿಳಾ ಆಯೋಗಕ್ಕೂ ದೂರು ನೀಡಿದ್ದಾರೆ.
ಇದೇ ವಿಚಾರವಾಗಿ ಕಳೆದ ಹಲವು ದಿನಗಳಿಂದ ವಾಗ್ವಾದಗಳು ನಡೆಯುತ್ತಿದ್ದು, ಇದೆಲ್ಲದರ ನಡುವೆ ಇಂದು ಮಧ್ಯಾಹ್ನದ ವೇಳೆಯಲ್ಲಿ ಕಚೇರಿಯಲ್ಲಿಯೇ ಕಂಪ್ಯೂಟರ್ ಆಪರೇಟರ್ ವಿಷ ಸೇವಿಸಲು ಮುಂದಾಗಿದ್ದಾರೆ. ಅಲ್ಪ ಪ್ರಮಾಣದ ವಿಷ ಸೇವನೆಯಾಗಿರಬಹುದು ಎಂಬ ಸಂಶಯವಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ. ಸೋಮವಾರಪೇಟೆ ಪೊಲೀಸ್ ಠಾಣಾ ಸಿಬ್ಬಂದಿಗಳು ಆಸ್ಪತ್ರೆಗೆ ತೆರಳಿ ಮಾಹಿತಿ ಪಡೆದಿದ್ದಾರೆ.