State News

ಕೋಳಿ ಅಂಕಕ್ಕೆ ಪೊಲೀಸರ ನಿರ್ಬಂಧ ಮೀರಿ ತಾನೇ ಮುಂದೆ ನಿಂತು ಅಂಕ ಕಟ್ಟಿಸಿದ ಕಾಂಗ್ರೆಸ್ ಶಾಸಕ!

admincoorgdaily

Photo credit: TV09

ಮಂಗಳೂರು, ಡಿ. 21: ಧಾರ್ಮಿಕ ಆಚರಣೆಯ ನೆಪದಲ್ಲಿ ನಡೆಯುವ ಕೋಳಿ ಅಂಕಕ್ಕೆ ಪೊಲೀಸರು ನಿರ್ಬಂಧ ವಿಧಿಸಿದ್ದರೂ, ಅದನ್ನು ಮೀರಿ ಪುತ್ತೂರು ಕ್ಷೇತ್ರದ ಶಾಸಕ ಸ್ವತಃ ಸ್ಥಳದಲ್ಲಿ ನಿಂತು ಕೋಳಿ ಅಂಕ ನಡೆಸಲು ಅವಕಾಶ ಕಲ್ಪಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ವಿಟ್ಲ ಸಮೀಪದ ಕೇಪು ಗ್ರಾಮದಲ್ಲಿ ನಡೆದಿದೆ.

ಉಳ್ಳಾಲ್ತಿ ದುರ್ಗಾಪರಮೇಶ್ವರಿ ದೇವಸ್ಥಾನದ ಜಾತ್ರೆಯ ಹಿನ್ನೆಲೆಯಲ್ಲಿ ವರ್ಷಂಪ್ರತಿ ನಡೆಯುವ ಕೋಳಿ ಅಂಕವನ್ನು ಈ ಬಾರಿ ನಡೆಸದಂತೆ ವಿಟ್ಲ ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ನಿರ್ಬಂಧ ಹೇರಿದ್ದರು. ಆದರೆ ಗ್ರಾಮಸ್ಥರ ಒತ್ತಾಯದ ಹಿನ್ನೆಲೆಯಲ್ಲಿ ಸ್ಥಳಕ್ಕೆ ತೆರಳಿದ ಶಾಸಕ ಅಶೋಕ್ ಕುಮಾರ್ ರೈ, ಇದು ಜೂಜು ಅಲ್ಲ, ಧಾರ್ಮಿಕ ಪದ್ಧತಿ ಎಂದು ವಾದಿಸಿ ಕೋಳಿ ಅಂಕ ಮುಂದುವರಿಯಲು ಅವಕಾಶ ನೀಡಿದರು.

ಈ ವೇಳೆ ಪೊಲೀಸರು ಕೋಳಿ ಅಂಕ ಕಾನೂನುಬಾಹಿರ ಎಂದು ಸೂಚಿಸಿದಾಗ, “ಬಂಧಿಸುವುದಾದರೆ ಮೊದಲು ನನ್ನನ್ನೇ ಬಂಧಿಸಿ” ಎಂದು ಶಾಸಕರು ಹೇಳಿದ ಘಟನೆ ಸ್ಥಳದಲ್ಲಿ ಉದ್ವಿಗ್ನತೆಗೆ ಕಾರಣವಾಯಿತು. ಮೂರು ದಿನ ನಡೆಯುವ ಆಚರಣೆಯನ್ನು ಒಂದೇ ದಿನಕ್ಕೆ ಸೀಮಿತಗೊಳಿಸುವಂತೆ ಮೇಲಾಧಿಕಾರಿಗಳಿಗೆ ಮಾಹಿತಿ ನೀಡುವಂತೆ ಅವರು ಸೂಚಿಸಿದರು.

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕರು, “ಇಲ್ಲಿ ಯಾವುದೇ ಜೂಜು ನಡೆಯುವುದಿಲ್ಲ. ಸಾವಿರಾರು ಭಕ್ತರು ದೇವರಲ್ಲಿ ಹರಕೆ ಹೊತ್ತು ಕೋಳಿ ಅಂಕ ಮಾಡಿಸುತ್ತಾರೆ. ಇದು ಶುದ್ಧ ಧಾರ್ಮಿಕ ನಂಬಿಕೆ. ಕಾನೂನು ಉಲ್ಲಂಘನೆಯ ಯಾವುದೇ ಉದ್ದೇಶ ನಮ್ಮದಲ್ಲ” ಎಂದು ಹೇಳಿದರು.  

ಈ ಘಟನೆ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಶಾಸಕ ಅಶೋಕ್ ಕುಮಾರ್ ರೈ ಸೇರಿದಂತೆ ಒಟ್ಟು 17 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಕಾನೂನುಬಾಹಿರ ಕೃತ್ಯಕ್ಕೆ ಪ್ರಚೋದನೆ ಹಾಗೂ ದುಷ್ಪ್ರೇರಣೆ ನೀಡಿದ ಆರೋಪದ ಮೇಲೆ ಶಾಸಕರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಉಳಿದ 16 ಜನರ ಮೇಲೂ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.