ಮಹಿಳೆಯರಿಗೆ ಅಧಿಕಾರ ನೀಡುವುದನ್ನು ಸಹಿಸದ ಕಾಂಗ್ರೆಸ್ : ಸೋಮವಾರಪೇಟೆ ಬಿಜೆಪಿ ಅಸಮಾಧಾನ

Apr 22, 2026 - 11:14
 0  313
ಮಹಿಳೆಯರಿಗೆ ಅಧಿಕಾರ ನೀಡುವುದನ್ನು ಸಹಿಸದ ಕಾಂಗ್ರೆಸ್ : ಸೋಮವಾರಪೇಟೆ ಬಿಜೆಪಿ ಅಸಮಾಧಾನ

ಮಡಿಕೇರಿ : ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಅಧಿಕಾರ ನೀಡುವುದನ್ನು ಸಹಿಸದ ಕಾಂಗ್ರೆಸ್ ಹಾಗೂ ಅದರ ಮಿತ್ರ ಪಕ್ಷಗಳು ಮಹಿಳಾ ಮೀಸಲಾತಿ ಮಸೂದೆಯನ್ನು ವಿರೋಧಿಸುವ ಮೂಲಕ ಮಹಿಳಾ ವಿರೋಧಿ ಧೋರಣೆಯನ್ನು ಅನುಸರಿಸಿವೆ ಎಂದು ಸೋಮವಾರಪೇಟೆ ಬಿಜೆಪಿ ಮಂಡಲದ ವಕ್ತಾರ ಬಲ್ಲಾರಂಡ ಕಂಠಿ ಕಾರ್ಯಪ್ಪ ಆರೋಪಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕೇಂದ್ರದ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಆರಂಭದಿಂದಲೂ ಮಹಿಳಾ ಸಮಾನತೆಯನ್ನು ಪ್ರತಿಪಾದಿಸುತ್ತಾ ಬಂದಿದೆ. ಇದರ ಭಾಗವಾಗಿ ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿ ನೀಡುವ ಐತಿಹಾಸಿಕ ಮಸೂದೆಯನ್ನು ಮಂಡಿಸಿದೆ. ಆದರೆ ಸದಾ ಮಹಿಳಾ ವಿರೋಧಿ ನಡೆಯನ್ನೇ ಅನುಸರಿಸಿಕೊಂಡು ಬಂದಿರುವ ಕಾಂಗ್ರೆಸ್ ಮಸೂದೆಯನ್ನು ವಿರೋಧಿಸುವ ಮೂಲಕ ದೇಶದ ಮಹಿಳಾ ಸಮೂಹವನ್ನು ಅಪಮಾನಿಸಿದೆ ಎಂದು ಟೀಕಿಸಿದ್ದಾರೆ.

ಮಹಿಳೆಯರು ರಾಜಕೀಯ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲೂ ಸಮಾನ ಅವಕಾಶಗಳನ್ನು ಪಡೆದುಕೊಂಡು ಸಬಲರಾಗಬೇಕು. ಆ ಮೂಲಕ ಸ್ವಾಭಿಮಾನದಿಂದ ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳಬೇಕು ಎನ್ನುವ ಮನೋಭಾವವನ್ನು ಪ್ರಧಾನಿ ನರೇಂದ್ರಮೋದಿಯವರು ಹೊಂದಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷ ಮಹಿಳೆಯರ ಸ್ವಾಭಿಮಾನಿ ಬದುಕಿಗೆ ವಿರುದ್ಧವಾಗಿ ಉಚಿತ ಭಾಗ್ಯಗಳನ್ನು ನೀಡಿ ಅಧಿಕಾರದಿಂದ ದೂರ ಇಡುವ ಪ್ರಯತ್ನವನ್ನು ಮಾಡುತ್ತಿದೆ. ಇದನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ ಎಂದು ಕಂಠಿ ಕಾರ್ಯಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಹಿಳಾ ಸಬಲೀಕರಣದ ಬಗ್ಗೆ ಕಾಳಜಿ ಇಲ್ಲದ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಅಧಿವೇಶನದಲ್ಲಿ ತಮ್ಮ ಸ್ಥಾನದ ಗಾಂಭೀರ್ಯತೆಯನ್ನು ಮರೆತು ಹಾಸ್ಯಾಸ್ಪದವಾಗಿ ನಡೆದುಕೊಂಡಿದ್ದಾರೆ. ಕ್ಷೇತ್ರಗಳ ಪುನರ್ ವಿಂಗಡಣೆಯಿoದ ದೇಶದ ಅಭಿವೃದ್ಧಿಗೆ ಪೂರಕ ವಾತಾವರಣ ಸೃಷ್ಟಿಯಾಗುತ್ತಿತ್ತು, ಪ್ರತಿಯೊಂದು ಪ್ರದೇಶಕ್ಕೂ ಇದರಿಂದ ಅನುಕೂಲವಾಗುತ್ತಿತ್ತು. ಆದರೆ ಇದರ ಬಗ್ಗೆ ಅರಿವಿಲ್ಲದ ಕಾಂಗ್ರೆಸ್ ಹಾಗೂ ಅದರ ಮಿತ್ರ ಪಕ್ಷಗಳು ಕ್ಷೇತ್ರಗಳ ಪುನರ್ ವಿಂಗಡಣೆಯನ್ನೇ ನೆಪ ಮಾಡಿಕೊಂಡು ಮಹಿಳೆಯರಿಗೆ ಅನ್ಯಾಯ ಮಾಡಿವೆ ಎಂದು ಆರೋಪಿಸಿದ್ದಾರೆ.

ಮಹಿಳಾ ಮೀಸಲಾತಿ ಮಸೂದೆಯನ್ನು ವಿರೋಧಿಸಿದವರಿಗೆ ದೇಶದ ಸ್ವಾಭಿಮಾನಿ ಮಹಿಳೆಯರು ಮುಂದಿನ ಎಲ್ಲಾ ರಾಜಕೀಯ ಮತ್ತು ಸಾಮಾಜಿಕ ಬೆಳವಣಿಗೆಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕಂಠಿ ಕಾರ್ಯಪ್ಪ ತಿಳಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 1
Angry Angry 0
Sad Sad 0
Wow Wow 0