Kodagu

ರಾಹುಲ್ ಗಾಂಧಿ ವಿರುದ್ಧದ ಎಫ್‌ಐಆರ್ ರದ್ದಿಗೆ ಒತ್ತಾಯಿಸಿ ಕಾಂಗ್ರೆಸ್ ಪ್ರತಿಭಟನೆ

admincoorgdaily

ರಾಹುಲ್ ಗಾಂಧಿ ವಿರುದ್ಧದ ಎಫ್‌ಐಆರ್ ರದ್ದಿಗೆ ಒತ್ತಾಯಿಸಿ ಕಾಂಗ್ರೆಸ್ ಪ್ರತಿಭಟನೆ

ಮಡಿಕೇರಿ: ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಉತ್ತರಾಖಂಡದ ಹಲ್ದ್ವಾನಿಯಲ್ಲಿ ದಾಖಲಿಸಿರುವ ದುರುದ್ದೇಶಪೂರಿತ ಎಫ್‌ಐಆರ್ ಅನ್ನು ಕೂಡಲೇ ರದ್ದುಪಡಿಸಬೇಕು ಎಂದು ಆಗ್ರಹಿಸಿ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ ಮಾತನಾಡಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹಲ್ದ್ವಾನಿ ರ‌್ಯಾಲಿ ನಂತರ ಬಿಜೆಪಿ-ಆರ್‌ಎಸ್‌ಎಸ್ ಕಾರ್ಯಕರ್ತರು ರ‌್ಯಾಲಿ ನಡೆದ ಸ್ಥಳವನ್ನು ಶುದ್ಧೀಕರಿಸುವ ಆಚರಣೆ ನಡೆಸಿದ್ದರು. ಸಂವಿಧಾನಿಕ ಮೌಲ್ಯಗಳಿಗೆ ಅವಮಾನ ಎಸಗಿದವರ ವಿರುದ್ಧ ಕ್ರಮಕ್ಕೆ ರಾಹುಲ್ ಗಾಂಧಿ ಆಗ್ರಹಿಸಿದ್ದರು.

ಆದರೆ, ಬಿಜೆಪಿ ಸರ್ಕಾರದ ಪ್ರಚೋದನೆಯಿಂದ ಉತ್ತರಾಖಂಡ ಪೊಲೀಸರು ರಾಹುಲ್ ಗಾಂಧಿ ವಿರುದ್ಧವೇ ಹಲ್ದ್ವಾನಿ ಕೊತ್ವಾಲಿ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿರುವುದು ನಾಚಿಕೆಗೇಡಿನ ಸಂಗತಿ. ಇದು ಸೇಡಿನ ರಾಜಕಾರಣವಾಗಿದ್ದು, ಜಿಲ್ಲಾ ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ ಎಂದರು.

ರಾಹುಲ್ ಗಾಂಧಿ ಮೇಲಿನ ಎಫ್‌ಐಆರ್ ಹಿಂಪಡೆಯಬೇಕು ಮತ್ತು ಬಿಜೆಪಿ ಕಾರ್ಯಕರ್ತರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಯಿತು. ಪ್ರತಿಭಟನೆಯಲ್ಲಿ ಕೆಪಿಸಿಸಿ ವೀಕ್ಷಕರಾದ ಬ್ರಿಜೇಶ್, ವಿಧಾನ ಪರಿಷತ್ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ, ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷರು ಮತ್ತು ಪ್ರಚಾರ ಸಮಿತಿ ಅಧ್ಯಕ್ಷರಾದ ಟಿ.ಪಿ.ರಮೇಶ್, ಪ್ರಮುಖರಾದ ರಾಜೇಶ್ ಯಲ್ಲಪ್ಪ, ಪ್ರಕಾಶ್ ಆಚಾರ್ಯ, ಮಿನಾಜ್ಹ್ ಪ್ರವೀಣ್, ಚಂದ್ರಶೇಖರ್, ಕೊಟ್ಟಮುಡಿ ಹಂಸ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.