ಗೋಣಿಕೊಪ್ಪಲಿನಲ್ಲಿ ಏಡಿಗಳ ಮಾರಾಟ ಬಲು ಜೋರು..!!
ಗೋಣಿಕೊಪ್ಪ:-ಕೊಡಗಿನಲ್ಲಿ ವಾಯು ವರುಣನ ಅಬ್ಬರಕ್ಕೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಬಿಟ್ಟುಬಿಡದೇ ಸುರಿಯುವ ಮಳೆಯೊಂದಿಗೆ ಗಾಳಿಯ ತೀವ್ರತೆಯೂ ಸೇರಿಕೊಂಡು ಜನರು ಮನೆಯಿಂದ ಹೊರಗಿಳಿಯುವುದೇ ಕಷ್ಟಸಾಧ್ಯವಾಗಿದೆ. ಮಳೆಗಾಲದಲ್ಲಿ ದೇಹವನ್ನು ಬೆಚ್ಚಗಿಡುವ ವಿಶೇಷ ಖಾದಗಳನ್ನು ಸವಿಯುವುದು ಸಾಮಾನ್ಯ.
ಈ ಹಿನ್ನಲೆಯಲ್ಲಿ ಮರಕೆಸ, ಅಣಬೆ, ಕಣಿಲೆ, ಏಡಿ ಮುಂತಾದವುಗಳಿಗೆ ಮಳೆಗಾಲದಲ್ಲಿ ಬೇಡಿಕೆ ಹೆಚ್ಚು, ಜಿಲ್ಲೆಯ ನಗರ ಪ್ರದೇಶಗಳಲ್ಲಿ ಮರಕೆಸ, ಕಣಿಲೆ, ಅಣಬೆ, ಏಡಿ ಮುಂತಾದವುಗಳನ್ನು ಮಾರಾಟ ಮಾಡುವ ದೃಶ್ಯ ಮಳೆಗಾಲದಲ್ಲಿ ಸಾಮಾನ್ಯ. ಗೋಣಿಕೊಪ್ಪಲು-ಪೊನ್ನಂಪೇಟೆ ಮುಖ್ಯ ರಸ್ತೆಯಲ್ಲಿ ಏಡಿಗಳನ್ನು ಮಾರಾಟ ಮಾಡಲಾಗುತ್ತಿದ್ದು, ಬಿರುಸಿನ ಮಳೆಗೆ ಏಡಿಗಳಿಗೆ ಬೇಡಿಕೆಯೂ ಹೆಚ್ಚಿದೆ. ಕೆ.ಜಿ.ಯೊಂದಕ್ಕೆ 400 ರೂಪಾಯಿಗಳಿಗೆ ಏಡಿ ಮಾರಾಟ ಮಾಡಲಾಗುತ್ತಿದ್ದು, ಬೇಡಿಕೆಯೂ ಹೆಚ್ಚಿದೆ. ಬೆಳಗ್ಗಿನ ಜಾವ ನಾಲ್ಕು ಗಂಟೆಗೆ ಹಾರಂಗಿಗೆ ತೆರಳಿ ಎಂಟು ಒಂಬತ್ತು ಗಂಟೆಯೊಳಗೆ ಏಡಿಗಳನ್ನು ಗೋಣಿಕೊಪ್ಪಲು ನಗರಕ್ಕೆ ತಂದು ಮಾರಾಟ ಮಾಡಲಾಗುತ್ತಿದೆ. ಸುಮಾರು ಹತ್ತು ಹನ್ನೆರಡು ವರ್ಷಗಳಿಂದ ಏಡಿಗಳನ್ನು ಮಾರಾಟ ಮಾಡಲಾಗುತ್ತಿದ್ದು, ಇತ್ತೀಚಿನ ವರ್ಷಗಳಲ್ಲಿ ಮಾರಾಟಗಾರರು ಹೆಚ್ಚಿರುವುದರಿಂದ ವ್ಯಾಪಾರ ಕಡಿಮೆಯಾಗಿದೆ ಎಂದು ಮಾರಾಟಗಾರ ಉಮೇಶ್ ಹೇಳುತ್ತಾರೆ.
ಮಳೆಗಾಲದಲ್ಲಿ ಏಡಿಗಳ ಖಾದ್ಯ ದೇಹವನ್ನು ಬೆಚ್ಚಗಿಡುವಲ್ಲಿ ಸಹಕಾರಿಯಾಗುತ್ತದೆ. ಸುರಿಯುವ ಮಳೆಗೆ ಮನೆಯೊಳಗಡೆ ಬೆಚ್ಚಗೆ ಇರುವ ಇಚ್ಚೆಪಡುವ ಜನರು. ಮಳೆಗಾಲದಲ್ಲಿ ಸಿಗುವ ಇಂತಹ ಖಾದ್ಯಗಳ ಮೊರೆಹೋಗುವುದು ಕೊಡಗಿನಲ್ಲಿ ಸಾಮಾನ್ಯ.
ವರದಿ:ಚೆಪ್ಪುಡಿರ ರೋಷನ್