ಮರಗೋಡುವಿನ ಗೌಡ ಇವಿನಿಂಗ್ ಸ್ಟಾರ್ ವತಿಯಿಂದ ಏಪ್ರಿಲ್ ತಿಂಗಳಲ್ಲಿ ಕ್ರಿಕೆಟ್ ಮತ್ತು ಹಗ್ಗಜಗ್ಗಾಟ ಸ್ಪರ್ಧೆ
ಮಡಿಕೇರಿ: ಮರಗೋಡುವಿನ ಗೌಡ ಇವಿನಿಂಗ್ ಸ್ಟಾರ್ ವತಿಯಿಂದ ಏಪ್ರಿಲ್ ತಿಂಗಳಿನಲ್ಲಿ 10 ಕುಟುಂಬ 18 ಗೋತ್ರದ ಬಾಂಧವರಿಗಾಗಿ ಗೌಡ ಕುಟುಂಬ ಕಲರವ - 2026 ನಡೆಸಲು ತೀರ್ಮಾನಿಸಲಾಗಿದ್ದು, ಮರಗೋಡುವಿನ ಭಾರತೀ ಜೂನಿಯರ್ ಕಾಲೇಜು ಮೈದಾನದಲ್ಲಿ ಕುಟುಂಬವಾರು ಕ್ರಿಕೆಟ್ ಹಾಗೂ ಹಗ್ಗ ಜಗ್ಗಾಟ ಮತ್ತು ವಿವಿಧ ರೀತಿಯ ಮನೋರಂಜನೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಗೌಡ ಇವಿನಿಂಗ್ ಸ್ಟಾರ್ ಅಧ್ಯಕ್ಷ ರೋಷನ್ ಕಟ್ಟೆಮನೆ ತಿಳಿಸಿದರು.
ಕ್ರಿಕೆಟ್ ಪಂದ್ಯಾಟದಲ್ಲಿ ಸುಮಾರು 100 ರಿಂದ 150 ಕುಟುಂಬ ತಂಡಗಳು ಬಾಗವಹಿಸುವ ನಿರೀಕ್ಷೆ ಇದ್ದು ಕುಟುಂಬದ ಹೆಸರು ನೋಂದಾಹಿಸಲು ಮಾ. 31 ರವರೆಗೆ ಅವಕಾಶವಿರುತ್ತದೆ. ಈ ಬಾರಿ ವಿಶೇಷತೆಯಾಗಿ ಕುಟುಂಬ ತಂಡದಲ್ಲಿ ಆಟಗಾರರ ಸಂಖ್ಯೆ ಕಡಿಮೆ ಇದ್ದಲ್ಲಿ ಮಹಿಳಾ ಆಟಗಾರರನ್ನು ಸೇರಿಸಿಕೊಂಡು ಆಡಲು ಅವಕಾಶ ಇದ್ದು, ಈ ಬಾರಿ ಮಹಿಳಾ ಆಟಗಾರರಿಗೆ ಬೌಲಿಂಗ್ ಮಾಡಲು ಕೂಡ ಅವಕಾಶ ನೀಡಲಾಗಿದೆ.
ಮಹಿಳಾ ಆಟಗಾರರಿಗೆ ಬೌಲಿಂಗ್ ಆಕ್ಷನ್ ಕಡ್ಡಾಯವಿರುವುದಿಲ್ಲ, ಥ್ರೋ ಬೌಲಿಂಗ್ ಆಕಾಶ ನೀಡಲಾಗುತ್ತದೆ ಎಂದು ವಿವರಿಸಿದರು. ಪಂದ್ಯಾಟವು ಏ.13 ರಿಂದ ನಡೆಯಲಿದೆ. ಏ.25 ಮತ್ತು 26 ರಂದು ಕುಟುಂಬವಾರು ಹಗ್ಗ ಜಗ್ಗಾಟ ಸ್ಪರ್ಧೆಗಳನ್ನು ಏರ್ಪಾಡು ಮಾಡಲಾಗಿದೆ.
ಭಾಗವಹಿಸುವ ಎಲ್ಲಾ ತಂಡದಲ್ಲಿ ಕಡ್ಡಾಯವಾಗಿ ಕುಟುಂಬದ ಪುರುಷರು ಹಾಗೂ ಮಹಿಳೆಯರು ಸ್ಪರ್ಧೆ ಮಾಡಬೇಕಾಗುತ್ತದೆ. ಪ್ರತಿ ಕುಟುಂಬ ತಂಡದಲ್ಲಿ 8 + 2 ಆಟಗಾರರು ಇರಬೇಕಾಗುತ್ತದೆ. ಹಗ್ಗ ಜಗ್ಗಾಟ ಸ್ಪರ್ಧೆಯ ಸಮಯದಲ್ಲಿ ಪ್ರತಿ ತಂಡದಲ್ಲಿ ನಾಲ್ಕು ಪುರುಷ ಸ್ಪರ್ಧಾಳುಗಳು ಹಾಗೂ ನಾಲ್ಕು ಮಹಿಳಾ ಸ್ಪರ್ಧಾಳುಗಳು ಸ್ಪರ್ಧೆಯನ್ನು ಮಾಡಬೇಕಾಗುತ್ತದೆ ಎಂದು ತಿಳಿಸಿದರು. ಕುಟುಂಬ ಕಲರವ ಕಾರ್ಯಕ್ರಮವನ್ನು ಸುಮಾರು 15 ಲಕ್ಷ ವೆಚ್ಚದಲ್ಲಿ ಆಯೋಜನೆ ಮಾಡುತ್ತಿದು, ಒಟ್ಟು ಬಹುಮಾನದ ಮೊತ್ತ 5 ಲಕ್ಷ ವಾಗಿದೆ. ಪಂದ್ಯಾಟದಲ್ಲಿ ವಿಜೇತರಾಗುವ ಪ್ರಥಮ, ದ್ವಿತೀಯ, ತೃತೀಯ ಹಾಗೂ ಚತುರ್ಥ ಬಹುಮಾನ ಪಡೆಯುವ ತಂಡಗಳಿಗೆ ಆಕರ್ಷಕ ನಗದು ಹಾಗೂ ಟ್ರೋಫಿಯನ್ನು ನೀಡಲಾಗುತ್ತಿದೆ. ಅಲ್ಲದೇ ಕ್ವಾರ್ಟರ್ ಫೈನಲ್ ಹಂತವನ್ನು ತಲುಪುವ ಪ್ರತಿ ತಂಡಕ್ಕೂ ನಗದು ಮತ್ತು ಆಕರ್ಷಕ ಟ್ರೋಫಿ ಬಹುಮಾನವನ್ನು ನೀಡಲಾಗುತ್ತದೆ.
ಹಾಗೆಯೇ ವೈಯಕ್ತಿಕ ಬಹುಮಾನಗಳಾಗಿ ಉತ್ತಮ ದಾಂಡಿಗ, ಉತ್ತಮ ಎಸೆತಗಾರ, ಸರಣಿ ಪುರುಷೋತ್ತಮ, ಮೋಸ್ಟ್ ವ್ಯಾಲ್ಯೂಬಲ್ ಪ್ಲೇಯರ್, ಉತ್ತಮ ಕ್ಷೇತ್ರರಕ್ಷಕ, ಉತ್ತಮ ಮಹಿಳಾ ಆಟಗಾರ್ತಿ, ಉದಯೋನ್ಮುಖ ಆಟಗಾರ ಹಾಗೂ ಪ್ರತಿ ಕುಟುಂಬದ ಓರ್ವ ಉತ್ತಮ ಆಟಗಾರನಿಗೆ ಆಕರ್ಷಕ ಉಡುಗೊರೆ ನೀಡಲಾಗುವುದು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಗೌಡ ಇವಿನಿಂಗ್ ಸ್ಟಾರ್‌ನ ಕಾರ್ಯದರ್ಶಿ ಕರ್ಣಯನ ವಿವೇಕ್, ಪ್ರಮುಖರಾದ ಶಿವಪ್ರಸನ್ನ, ಮಗೇರನ ರಂಜು, ಸದಸ್ಯರಾದ ಮೋನಿಶ್, ಸೋನಾ ಇದ್ದರು.