ವೃದ್ಧಾಪ್ಯದಲ್ಲಿ ಡೇಟಿಂಗ್ ಚಪಲ; ಹೈ ಪ್ರೊಫೈಲ್ ಮಹಿಳೆಯರ ಹೆಸರಿನಲ್ಲಿ 32 ಲಕ್ಷ ರೂ. ವಂಚನೆ

Oct 30, 2025 - 16:36
 0  615
ವೃದ್ಧಾಪ್ಯದಲ್ಲಿ ಡೇಟಿಂಗ್ ಚಪಲ; ಹೈ ಪ್ರೊಫೈಲ್ ಮಹಿಳೆಯರ ಹೆಸರಿನಲ್ಲಿ 32 ಲಕ್ಷ ರೂ. ವಂಚನೆ

ಬೆಂಗಳೂರು, ಅ.30: ಆನ್‌ಲೈನ್ ಡೇಟಿಂಗ್ ಸೇವೆಯ ಆಮಿಷಕ್ಕೆ ಒಳಗಾಗಿ ನಗರದ 63 ವರ್ಷದ ವೃದ್ಧರೊಬ್ಬರು ಲಕ್ಷಾಂತರ ರೂಪಾಯಿ ಕಳೆದುಕೊಂಡಿರುವ ಘಟನೆ ಹೊರಮಾವು ಪ್ರದೇಶದಲ್ಲಿ ಬೆಳಕಿಗೆ ಬಂದಿದೆ. “ಹೈ-ಪ್ರೊಫೈಲ್ ಮಹಿಳೆಯರ ಪರಿಚಯ ಮಾಡಿಸುತ್ತೇವೆ” ಎಂಬ ನೆಪದಲ್ಲಿ ವಂಚಕರು ವೃದ್ಧರಿಂದ ಒಟ್ಟು 32.2 ಲಕ್ಷ ರೂ. ಕಸಿದುಕೊಂಡಿದ್ದಾರೆ.

ಪೊಲೀಸರ ಪ್ರಕಾರ, ಈ ವಂಚನೆ ಸೆಪ್ಟೆಂಬರ್ 5ರಿಂದ ಅಕ್ಟೋಬರ್ 18ರವರೆಗೆ ನಡೆದಿದೆ. ಡೇಟಿಂಗ್ ಸೇವೆ ಹೆಸರಿನಲ್ಲಿ ಬಂದ ಕರೆಗೆ ವೃದ್ಧರು, ಪ್ರಾರಂಭದಲ್ಲಿ 1,950 ರೂ. ನೋಂದಣಿ ಶುಲ್ಕ ಪಾವತಿಸಿದ್ದರು. ನಂತರ ವಾಟ್ಸಾಪ್ ಮೂಲಕ ಮೂವರು ಮಹಿಳೆಯರ ಫೋಟೋಗಳನ್ನು ಕಳುಹಿಸಿದ ವಂಚಕರು, “ರಿತಿಕಾ” ಹೆಸರಿನ ಮಹಿಳೆಯನ್ನು ಆಯ್ಕೆಮಾಡುವಂತೆ ತಿಳಿಸಿದ್ದಾರೆ. ಇಬ್ಬರ ನಡುವೆ ಚಾಟ್‌ಗಳ ಮೂಲಕ ಆತ್ಮೀಯತೆ ಬೆಳೆಯಿತು.

ದಸರಾ ಹಬ್ಬದ ಮೊದಲು “ತಾನು ಕುಟುಂಬವನ್ನು ಭೇಟಿಯಾಗಲು ಹೊರಟಿದ್ದೇನೆ, ಕೆಲವು ದಿನಗಳ ಕಾಲ ಸಂಪರ್ಕಿಸಬೇಡಿ” ಎಂದು ರಿತಿಕಾ ತಿಳಿಸಿದ್ದಳು. ಬಳಿಕ “ಪ್ರೀತಿ” ಎಂಬ ಹೆಸರಿನ ಮತ್ತೊಬ್ಬಳು ಕರೆ ಮಾಡಿ, “ರಿತಿಕಾ ಮತ್ತು ನಿಮ್ಮ ಭೇಟಿಗೆ ಅಗತ್ಯ ಸಿದ್ಧತೆ ಮಾಡುತ್ತಿದ್ದೇನೆ, ವ್ಯವಸ್ಥೆಗಾಗಿ ಹಣ ಬೇಕಾಗಿದೆ” ಎಂದು ಹೇಳಿ ವೃದ್ಧರಿಂದ ಹಣ ಪಡೆದುಕೊಂಡಳು.

ಹಂತ ಹಂತವಾಗಿ ಹಣ ವರ್ಗಾಯಿಸುತ್ತಾ ಒಟ್ಟು 32.2 ಲಕ್ಷ ರೂ. ಪಾವತಿಸಿದ ವೃದ್ಧರಿಗೆ ಕೊನೆಗೆ ಶಂಕೆ ಮೂಡಿ, ಹಣ ನೀಡುವುದನ್ನು ನಿಲ್ಲಿಸಿದರು. ತಕ್ಷಣ ಆಕೆ ಕಾನೂನು ಕ್ರಮದ ಬೆದರಿಕೆ ಹಾಕಿದಾಗ ತಾನು ವಂಚನೆಗೆ ಒಳಗಾಗಿರುವುದನ್ನು ಅರಿತ ವೃದ್ಧರು ಸೆನ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದರು.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು, ವಂಚಕರು ಬಳಸಿದ ಬ್ಯಾಂಕ್ ಖಾತೆ ಮತ್ತು ವಾಟ್ಸಾಪ್ ಸಂಖ್ಯೆಗಳನ್ನು ಪತ್ತೆಹಚ್ಚುವ ಕಾರ್ಯ ನಡೆಯುತ್ತಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0