ಕೊಡಗು ಜಿಲ್ಲೆಯಲ್ಲಿ ವನ್ಯಜೀವಿ-ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ ನೀಡಲು ಆಗ್ರಹ
admincoorgdaily

ಮಡಿಕೇರಿ:ಕಳೆದ ಮೂರು ವರ್ಷಗಳಲ್ಲಿ ಜಿಲ್ಲೆಯಲ್ಲಿ ಆನೆ, ಹುಲಿ ದಾಳಿಗೆ 78 ಅಮಾಯಕರು ಬಲಿಯಾಗಿದ್ದಾರೆ. ಕಳೆದೊಂದು ವರ್ಷದಲ್ಲೇ 17 ಜೀವಗಳು ಹೋಗಿವೆ. ಫಸಲು ನಾಶ, ಜೀವಹಾನಿ ನಿತ್ಯದ ಕತೆಯಾದರೂ ಸರ್ಕಾರ ಮಾತ್ರ ಮೌನ ವಹಿಸಿದೆ ಎಂದು ಭಾರತೀಯ ಕಿಸಾನ್ ಸಂಘದ ರಾಷ್ಟ್ರೀಯ ಅಧ್ಯಕ್ಷ ಕೆ.ಸಾಯಿ ರೆಡ್ಡಿ ದೂರಿದರು.
ರೈತರ ಮನವಿ, ಪ್ರತಿಭಟನೆ, ರ‍್ಯಾಲಿಗಳಿಗೆ ಬೆಲೆಯೇ ಇಲ್ಲ. ಬೆಳೆಹಾನಿಗೆ ನಯಾಪೈಸೆ ಪರಿಹಾರ ಸಿಗುತ್ತಿಲ್ಲ. ಸರ್ಕಾರ ತಕ್ಷಣ ಎಚ್ಚೆತ್ತುಕೊಂಡು ರೈತರ ರಕ್ಷಣೆಗೆ ನಿಲ್ಲಬೇಕು. ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಿ ಸರ್ಕಾರವೇ ಖರೀದಿಸಬೇಕು ಎಂದು ಒತ್ತಾಯಿಸಿದರು.
ರಾಮನಗರ ಬಿಡದಿಯಲ್ಲಿ ರೈತರ ಹೊಟ್ಟೆ ತುಂಬಿಸುವ ಫಲವತ್ತಾದ ಜಮೀನು ಕಿತ್ತುಕೊಂಡು ಕಾಂಕ್ರೀಟ್ ಕಾಡು ಕಟ್ಟಲು ಸರ್ಕಾರ ಹೊರಟಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರೈತಪರ ಎಂಬ ಭರವಸೆ ಹುಸಿಯಾಗಿದೆ ಎಂದ ಅವರು, ದೇಶದ 73 ಸಾವಿರ ಗ್ರಾಮಗಳಲ್ಲಿ ಇರುವ ಕಿಸಾನ್ ಸಂಘವನ್ನು 2027ರ ವೇಳೆಗೆ 1 ಲಕ್ಷ ಹಳ್ಳಿ ಹಾಗೂ 1 ಕೋಟಿ ಸದಸ್ಯರ ಬಲದ ಸಂಘಟನೆಯಾಗಿ ಕಟ್ಟಲು ನಿರ್ಧರಿಸಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಫಾರ್ಮರ್ಸ್ ಪ್ರೊಡಕ್ಷನ್ ಆರ್ಗನೈಜೇಷನ್ ಸಂಘಟನೆ ಸಂಚಾಲಕ ವಾಸುದೇವ್‌ರಾವ್, ಪ್ರಮುಖರಾದ ಪ್ರದೀಪ್ ಭೀಮಯ್ಯ, ಎಂ.ರವೀಂದ್ರ, ಪ್ರಸಾದ್, ಭಗವಾನ್ ಇದ್ದರು.